ADVERTISEMENT

ಇದು ಅಪರೂಪದ ‘ವೀಗನ್’ ಮದುವೆ

ಪ್ರಾಣಿಜನ್ಯ ವಸ್ತು ಬಳಕೆಯಿಲ್ಲದೇ ನಡೆದ ಸಮಾರಂಭ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:31 IST
Last Updated 5 ಮಾರ್ಚ್ 2021, 2:31 IST
ಸಂಪೂರ್ಣ ವೀಗನ್ ಕ್ರಮ ಅನುಸರಿಸಿದ ಮದುವೆಯಾದ ದಾಮೋದರ–ಮಧುರಾ ದಂಪತಿ
ಸಂಪೂರ್ಣ ವೀಗನ್ ಕ್ರಮ ಅನುಸರಿಸಿದ ಮದುವೆಯಾದ ದಾಮೋದರ–ಮಧುರಾ ದಂಪತಿ   

ಮಂಗಳೂರು: ‘ವೀಗನ್ಸ್‌’ ಆಗಿರುವ ಮಧುರಾ ಮತ್ತು ದಾಮೋದರ ಅವರು ತಮ್ಮ ಮದುವೆಯಲ್ಲೂ ಸಂಪೂರ್ಣ ವೀಗನ್ ಪದ್ಧತಿ ಅನುಸರಿಸುವ ಮೂಲಕ, ಜೀವನದಲ್ಲಿ ಅಳವಡಿಸಿಕೊಂಡಿರುವ ತತ್ವವನ್ನು ಮದುವೆಯ ಸಂಭ್ರಮದಲ್ಲೂ ಸಾಕಾರಗೊಳಿಸಿದ್ದಾರೆ.

ಮಂಗಳೂರಿನ ಮಧುರಾ ಶೆಣೈ ಹೆಗ್ಡೆ ಎರಡು ವರ್ಷಗಳಿಂದ ಹಾಗೂ ಕೇರಳದ ಕೊಲ್ಲಂನ ದಾಮೋದರ ಹೆಗ್ಡೆ ಆರು ತಿಂಗಳುಗಳಿಂದ ವೀಗನ್ ಜೀವನ ಕ್ರಮ ರೂಢಿಸಿಕೊಂಡು ಬಂದವರು. ಇವರಿಬ್ಬರ ನಡುವೆ ಮದುವೆ ನಿಶ್ಚಿತಾರ್ಥವಾದಾಗ, ದೈನಂದಿನ ಜೀವನದಲ್ಲಿ ರೂಢಿಸಿಕೊಂಡು ಬಂದಿರುವ ವೀಗನ್ ಆಹಾರವನ್ನೇ, ಬದುಕಿನ ಪ್ರಮುಖ ಘಟ್ಟವಾದ ಮದುವೆಯಲ್ಲೂ ಅನುಸರಿಸುವುದೆಂದು ನಿರ್ಧರಿಸಿದ್ದಾರೆ.

ಈ ಪದ್ಧತಿ ಅನುಸರಿಸಲು ಆಹಾರ, ಉಡುಗೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂಬ ಅರಿವು ಅವರಿಬ್ಬರಲ್ಲೂ ಇತ್ತು. ಇದಕ್ಕೆ ಮನೆಯವರೂ ಸಾಥ್ ನೀಡಿದರು. ವೀಗನಿಸಮ್ ಅನುಸರಿಸುವವರು ಪ್ರಾಣಿಗಳಿಗೆ ಹಿಂಸೆಯಾಗುವ ಯಾವ ಪದಾರ್ಥಗಳನ್ನೂ ಬಳಸುವುದಿಲ್ಲ. ಹೀಗಾಗಿ,ವಧು ಮಧುರಾ, ಮದುವೆಯಿಂದ ಆರತಕ್ಷತೆಯವರೆಗೂ ಬಳಸಿದ್ದು ಕಾಟನ್, ಲಿನೆನ್, ಬಾಳೆ ನಾರಿನ ಸೀರೆಗಳನ್ನು ಮಾತ್ರ. ಗೌಡ ಸಾರಸ್ವತ ಸಮುದಾಯದಲ್ಲಿ ಮಂಗಳಸೂತ್ರಕ್ಕೆ ಹವಳ ಪೋಣಿಸುವ ಕ್ರಮ ಕಡ್ಡಾಯವಾಗಿದ್ದರೂ, ಈ ಮದುವೆಯಲ್ಲಿ ಹವಳ ಇಲ್ಲದ, ಅರಿಸಿನ ಹಚ್ಚಿದ ದಾರವನ್ನು ವರನು ವಧುವಿಗೆ ಕಟ್ಟಿದ್ದು ವಿಶೇಷವಾಗಿತ್ತು.

ADVERTISEMENT

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಅವರ್ಸಾ ಸಮೀಪ ಫೆಬ್ರುವರಿ 21ರಂದು ನಡೆದ ಮದುವೆ ಹಾಗೂ ಫೆಬ್ರವರಿ 22ರಂದು ಮಂಗಳೂರಿನಲ್ಲಿ ನಡೆದ ಆರತಕ್ಷತೆಯ ಊಟ–ತಿಂಡಿಗಳನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳ ರಹಿತವಾಗಿ ಸಿದ್ಧಪಡಿಸಲಾಗಿತ್ತು. ಮಂಗಳೂರಿನ ‘ಕಾಮತ್ ಕೆಟರರ್ಸ್’ನವರು ವೀಗನ್ ಭೋಜನ ತಯಾರಿಸಿದ್ದರು. ಹಾಂಗ್ಯೊ ಐಸ್‌ಕ್ರೀಮ್ ಕಂಪನಿಯವರು ಹಾಲನ್ನು ಬಳಸದೇ, ಎಳನೀರಿನ ಐಸ್‌ಕ್ರೀಮ್ ಸಿದ್ಧಪಡಿಸಿದ್ದರು.

ಅತ್ಯಂತ ಸರಳ ಹಾಗೂ ಪರಿಸರ ಪೂರಕವಾಗಿ, ಯಾವುದೇ ದುಂದುವೆಚ್ಚ ಇಲ್ಲದೇ ನಡೆದ ಮದುವೆ ಮೆಚ್ಚುಗೆಗೆ ಪಾತ್ರವಾಗಿದೆ.

ಏನಿದು ವೀಗನ್ ಜೀವನ ಕ್ರಮ
ಸಸ್ಯಹಾರದ ಮುಂದುವರಿದ ಭಾಗ ವೀಗನ್ (vegan) ಜೀವನ ಪದ್ಧತಿ. ಪ್ರಾಣಿಗಳ ಮೇಲಿನ ದೌರ್ಜನ್ಯ, ಕ್ರೌರ್ಯ ಖಂಡಿಸಲು ಪ್ರಾಣಿಜನ್ಯ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಲಾಗುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು, ಜೇನುತುಪ್ಪ, ರೇಷ್ಮೆ, ಪ್ರಾಣಿಗಳ ಚರ್ಮ, ಕೂದಲು, ತುಪ್ಪಳ ಬಳಸಿದ ವಸ್ತುಗಳು ಇತ್ಯಾದಿ ಅನೇಕ ವಸ್ತುಗಳನ್ನು ವೀಗನ್ಸ್ ಬಳಸುವುದಿಲ್ಲ. ಮಂಗಳೂರಿನಲ್ಲಿ ವೀಗನಿಸಮ್ ಅನುಸರಿಸುತ್ತಿರುವವರು ಹಲವರಿದ್ದಾರೆ.

*
ನಾನು ರೂಢಿಸಿಕೊಂಡಿರುವ ಜೀವನ ಕ್ರಮವನ್ನು ಮದುವೆಯಲ್ಲೂ ಅನುಸರಿಸಬೇಕೆಂಬ ಆಸೆಯಿತ್ತು. ನನ್ನ ಸಂಗಾತಿಯೂ ವೀಗನ್ ಆಗಿರುವುದು ಇದಕ್ಕೆ ಪೂರಕವಾಯಿತು.
-ಮಧುರಾ ಶೆಣೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.