ADVERTISEMENT

ಮಂಗಳೂರು: ದುಬಾರಿ ತರಕಾರಿ ಖರೀದಿಗೆ ನಿರಾಸಕ್ತಿ

ಹವಾಮಾನ ವೈಪರೀತ್ಯ, ಕಾಡುಪ್ರಾಣಿಗಳ ಉಪಟಳದಿಂದ ಕಡಿಮೆಯಾದ ಆವಕ

ವಿಕ್ರಂ ಕಾಂತಿಕೆರೆ
Published 21 ಜೂನ್ 2024, 7:29 IST
Last Updated 21 ಜೂನ್ 2024, 7:29 IST
ಕದ್ರಿ ಮಾರುಕಟ್ಟೆಯ ತರಕಾರಿ ಮಳಿಗೆ
ಕದ್ರಿ ಮಾರುಕಟ್ಟೆಯ ತರಕಾರಿ ಮಳಿಗೆ   

ಮಂಗಳೂರು: ನಗರದ ಮಾರುಕಟ್ಟೆಗಳಲ್ಲಿ ತರಕಾರಿಯ ಬೆಲೆ ಕೇಳಿದವರೆಲ್ಲರೂ ಈಗ ಬೆಚ್ಚಿ ಬೀಳುತ್ತಿದ್ದಾರೆ. ತರಕಾರಿ ಮೇಲೆ ಕೈಯಿಟ್ಟವರು ಶಾಕ್ ಹೊಡೆದವರಂತೆ ವಾಪಸ್ ತೆಗೆಯುತ್ತಿದ್ದಾರೆ. ಟೊಮ್ಯಾಟೊ, ಬೀನ್ಸ್‌, ಅಲಸಂಡೆ ಮುಂತಾದವುಗಳನ್ನು ಒಂದು ಕೆಜಿ ಖರೀದಿಸಲು ಅಂದಾಜು ಮಾಡಿಕೊಂಡು ಬಂದವರು ಕೇವಲ ಕಾಲು ಕೆಜಿಗೆ ಇಳಿಯುತ್ತಿದ್ದಾರೆ.

ಹೌದು, ಮಂಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ತರಕಾರಿ ದರ ವಿಪರೀತವಾಗಿದ್ದು ಗ್ರಾಹಕರು ಹಲವು ಪದಾರ್ಥಗಳನ್ನು ಬದಿಗಿರಿಸಿ ಅನಿವಾರ್ಯ ಆಗಿರುವುದನ್ನು ಮಾತ್ರ ಖರೀದಿಸುತ್ತಿದ್ದಾರೆ. ತಂದಿರಿಸಿದ ಮಾಲು ಉಳಿದರೆ ಗತಿ ಏನು ಎಂದು ಮಾರಾಟಗಾರರು ತಲೆ ಮೇಲೆ ಕೈಯಿಟ್ಟು ಕುಳಿತಿದ್ದಾರೆ.

‘ತರಕಾರಿ ಬೆಳೆಯುವವರ ಸಂಖ್ಯೆ ವಿವಿಧ ಕಾರಣಗಳಿಂದ ಕಡಿಮೆಯಾಗಿದೆ. ಈ ಬಾರಿ ಬೇಸಿಗೆ ಕಾಲದಲ್ಲಿ ವಿಪರೀತ ಬಿಸಿ ಇತ್ತು. ಆದ್ದರಿಂದ ನಿರೀಕ್ಷೆಗೆ ತಕ್ಕಂತೆ ಬೆಳೆ ಬರಲಿಲ್ಲ. ಜೂನ್‌ನಲ್ಲಿ ಅತಿವೃಷ್ಟಿಯಾದ ಕಾರಣ ಹಲವು ಕಡೆಗಳಲ್ಲಿ ತರಕಾರಿ ನಾಶವಾಗಿದೆ. ಮಂಗ ಸೇರಿದಂತೆ ಕಾಡುಪ್ರಾಣಿಗಳ ಕಾಟವೂ ಅತಿಯಾಗಿದ್ದರಿಂದ ಫಸಲು ಸರಿಯಾಗಿ ಕೈಗೆ ಸಿಗುವುದಿಲ್ಲ. ಬೆಲೆ ಏರಿಕೆಯ ಹಿಂದೆ ಈ ಎಲ್ಲ ಕಾರಣಗಳು ಇವೆ’ ಮಾರುಕಟ್ಟೆಯ ಒಡನಾಟ ಇರಿಸಿಕೊಂಡವರು ಹೇಳುತ್ತಾರೆ.

ADVERTISEMENT

ಬಹತೇಕ ಎಲ್ಲ ತರಕಾರಿಯ ಬೆಲೆಯೂ ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚಾಗಿದೆ. ಕೆಲವು ಪದಾರ್ಥಗಳಿಗೆ ₹ 100ರಷ್ಟು ಹೆಚ್ಚಾಗಿದೆ. ವಾರದ ಹಿಂದೆ ₹ 60ರಿಂದ ₹ 70ಕ್ಕೆ ಮಾರಾಟವಾಗುತ್ತಿದ್ದ ಬೀನ್ಸ್‌ ದರ ಈಗ ₹ 160ಕ್ಕೆ ಏರಿದೆ. ₹ 45 ಇದ್ದ ಮಂಗಳೂರು ಸೌತೆ ದರ ಈಗ ₹ 70 ದಾಟಿದೆ. ಟೊಮೆಟೊ ₹ 40ರಿಂದ ₹ 70 ಆಗಿದೆ. ಅಲಸಂದೆ ಮತ್ತು ಮೆಣಸಿನಕಾಯಿ ₹ 50ರಿಂದ ₹ 100ಕ್ಕೆ ಸಾಗಿದೆ. ಹೀರೆಕಾಯಿ ₹ 40ರಿಂದ ₹ 90ರಷ್ಟಾಗಿದೆ. ಆಲೂಗಡ್ಡೆ ಮಾತ್ರ ಹೆಚ್ಚು ತೊಂದರೆ ಮಾಡಿಲ್ಲ. ವಾರದ ಹಿಂದೆ ₹ 40ರಷ್ಟಿದ್ದ ದರ ಈಗ ₹ 45ರ ಆಸುಪಾಸಿನಲ್ಲಿದೆ.

‘25 ಕೆಜಿಯ ಟೊಮೆಟೊ ಬಾಕ್ಸ್ ಈ ಹಿಂದೆ ₹ 400ಕ್ಕೆ ಸಿಗುತ್ತಿತ್ತು. ಈಗ ದರ ₹ 1700ರಷ್ಟಾಗಿದೆ. ಇದು ಬಾಕಿ ಉಳಿದರೆ ಕಷ್ಟ. ಆದ್ದರಿಂದ ತರಿಸುವುದಕ್ಕೇ ಆತಂಕವಾಗುತ್ತದೆ. ಕಡಿಮೆ ತಂದು ದಾಸ್ತಾನು ಇರಿಸುತ್ತಿದ್ದೇವೆ’ ಎಂದು ನಗರದ ಹಾಪ್‌ಕಾಮ್ಸ್ ಸೇಲ್ಸ್‌ಮ್ಯಾನ್‌ ಸುರೇಶ್ ತಿಳಿಸಿದರು.

‘ನಾವು ಪ್ಯೂರ್ ವೆಜಿಟೇರಿಯನ್‌. ತರಕಾರಿ ಅಲ್ಲದೆ ಬೇರೇನೂ ಬಳಸುತ್ತಿಲ್ಲ. ಬೆಲೆ ಏರಿಕೆ ಆದರೂ ಅನಿವಾರ್ಯವಾಗಿ ಇದನ್ನೇ ಖರೀದಿಸಬೇಕಾಗುತ್ತದೆ. ಒಂದು ತಿಂಗಳಿಂದ ಬೆಲೆ ತೀರಾ ಏರಿಕೆ ಆಗಿದೆ. ಒಂದು ವಾರದಿಂದ ಕೆಲವು ಪದಾರ್ಥಗಳನ್ನು ಖರೀದಿಸುವುದನ್ನೇ ಬಿಟ್ಟಿದ್ದೇವೆ’ ಎಂದು ಮಾಲತಿ ನಾಯಕ್‌ ಹೇಳಿದರು.

ಸ್ಥಳೀಯ ಉತ್ಪನ್ನಗಳೂ ಕೈಗೆಟಕುತ್ತಿಲ್ಲ

ಗುರುವಾರ ಬೆಳಿಗ್ಗೆ ಕದ್ರಿಯ ತರಕಾರಿ ಮಾರುಕಟ್ಟೆಗೆ ಬಂದ ದಯಾನಂದ ಅವರಿಗೆ ಒಂದು ದೀವಿ ಹಲಸು (ದೀಗುಜ್ಜೆ) ಬೇಕಿತ್ತು. ಮಂಗಳೂರು ನಗರದಲ್ಲೂ ಜಿಲ್ಲೆಯ ಎಲ್ಲ ಕಡೆಗಳಲ್ಲೂ ಬೆಳೆಯುವ ಉತ್ಪನ್ನವಾಗಿರುವುದರಿಂದ ಕಡಿಮೆ ದರಕ್ಕೆ ಸಿಗಬಹುದು ಎಂಬುದು ಅವರ ಅನಿಸಿಕೆಯಾಗಿತ್ತು. ಸಣ್ಣ ದೀಗುಜ್ಜೆಯನ್ನು ಕೈಗೆತ್ತಿಕೊಂಡು ದರ ಕೇಳಿ ಹೌಹಾರಿದರು.

ದೀವಿ ಹಲಸಿಗೆ ಈಗ ಮಂಗಳೂರು ಮಾರುಕಟ್ಟೆಯಲ್ಲಿ ಕೆಜಿಗೆ ₹ 280 ಬೆಲೆ ಇದೆ. ಒಂದಿಷ್ಟು ಚೌಕಾಶಿ ಮಾಡಿದ ದಯಾನಂದ ಅವರು ಕೊನೆಗೆ ಬರಿಗೈಯಲ್ಲಿ ವಾಪಸಾದರು.

‘ದೀಗುಜ್ಜೆ ಇಲ್ಲೇ ಬೆಳೆಯುವುದಾದರೂ ಬೆಲೆ ಸಿಕ್ಕಾಪಟ್ಟೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಇದರ ಮರಗಳು ಇವೆ. ಆದರೆ ಸರಿಯಾಗಿ ಫಲ ಸಿಗುವುದಿಲ್ಲ. ಬಲಿತು ಕೊಯ್ಯುವ ಕಾಲಕ್ಕೆ ಒಂದೋ ಹಕ್ಕಿಗಳ ಪಾಲಾಗುತ್ತವೆ, ಈಗ ಕೀಟಗಳ ಕಾಟವೂ ಇದೆ. ಹಿಂದೆಲ್ಲ ನಗರದಲ್ಲಿ ಹೆಚ್ಚಿನವರ ಮನೆ ಮುಂದ ದೀಗುಜ್ಜೆ ಮರ ಇತ್ತು. ಈಗ ಅದನ್ನೆಲ್ಲ ಕಡಿದು ಆ ಜಾಗದಲ್ಲಿ ಗಾರ್ಡನ್ ಮಾಡಿದ್ದಾರೆ. ಹೀಗಾದರೆ ಕಾಯಿಗಳು ಹೇಗೆ ಸಿಗಬೇಕು’ ಎಂದು ಪ್ರಶ್ನಿಸಿದರು ಅಂಗಡಿ ಮಾಲೀಕ. 

ಹಾಪ್‌ಕಾಮ್ಸ್‌ನಲ್ಲಿ ಜೂ.20ರ ತರಕಾರಿ ದರ

ತರಕಾರಿ;ದರ (₹ಗಳಲ್ಲಿ)

ಟೊಮೆಟೊ;70-80

ಬೀನ್ಸ್;120-140

ಅಲಸಂಡೆ;60-70

ಹಸಿ ಮೆಣಸು;50-60

ದಪ್ಪ ಮೆಣಸು;80-90

ಬದನೆಕಾಯಿ;50-60

ಹೀರೆಕಾಯಿ;60-70

ಹೂಕೋಸು;60-70

ಎಲೆಕೋಸು;30-40

ಮುಳ್ಳುಸೌತೆ;30-40

ಸಾಂಬಾರು ಸೌತೆ;40-50

ಮೂಲಂಗಿ;40-50

ತೊಂಡೆಕಾಯಿ;30-40

ಬೆಂಡೆಕಾಯಿ;40-50

ಸೋರೆಕಾಯಿ;30-40

ಆಲೂಗಡ್ಡೆ;33-43

ಬೆಳ್ಳುಳ್ಳಿ;190-220

ಈರುಳ್ಳಿ;33-43

ನುಗ್ಗೆಕಾಯಿ;80-100

ಬೂದುಕುಂಬಳ;20-30

ಸಿಹಿಕುಂಬಳ;16-24

ಕ್ಯಾರೆಟ್;60-70

ಬೀಟ್‌ರೂಟ್‌;30-40

ಶುಂಠಿ;120-140

ಪಡುವಲಕಾಯಿ;40-50

ಸುವರ್ಣ ಗಡ್ಡೆ;75-90

ಎಲ್ಲರಿಗೂ ತಿನ್ನಲು ಬಗೆಬಗೆಯ ಆಹಾರ ಪದಾರ್ಥ ಬೇಕು. ತರಕಾರಿ ಬೆಳೆಯಲು ಯಾರೂ ಮುಂದಾಗುವುದಿಲ್ಲ. ದಕ್ಷಿಣ ಕನ್ನಡ ಭಾಗದ್ದೇ ಆದ ಅನೇಕ ತರಕಾರಿ ಬೇರೆ ಕಡೆಯವರು ಬೆಳೆದು ಇಲ್ಲಿಗೆ ಕೊಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
ಯೋಗೀಶ್ ಪೊಳಲಿ ತರಕಾರಿ ವ್ಯಾಪಾರಿ
ಬೀನ್ಸ್‌ ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದುಬಾರಿಯಾಗುವುದು ಕಂಡಿದ್ದೇನೆ. ಈ ಬಾರಿ ಇನ್ನು ಕೂಡ ದರ ಇಳಿಯಲೇ ಇಲ್ಲ. ಕ್ಯಾರೆಟ್ ದರ ₹ 60 ದಾಟಿದ್ದೇ ಇಲ್ಲ. ಕಳೆದ ವಾರ ₹ 40 ಇದ್ದದ್ದು ಈಗ ಏಕಾಏಕಿ ₹ 75ರಿಂದ 80ಕ್ಕೆ ಏರಿದೆ.
–ಥಾಮಸ್ ಲೋಬೊ ವ್ಯಾಪಾರಿ ಬಂಟ್ಸ್ ಹಾಸ್ಟೆಲ್‌
ಆಲೂಗಡ್ಡೆ ಈರುಳ್ಳಿ ದಾಸ್ತಾನು
ತರಕಾರಿ ಬೆಲೆ ಲೆಕ್ಕಕ್ಕೆ ಸಿಗದಂತೆ ಗಗನದೆತ್ತರೆಕ್ಕೆ ಏರುತ್ತಿದೆ ಎಂದು ಹೇಳಿದ ಹಾಪ್‌ಕಾಮ್ಸ್ ಮಂಗಳೂರು ವಿಭಾಗದ ವ್ಯವಸ್ಥಾಪಕ ರವೀಂದ್ರ ಶೆಟ್ಟಿ ಟೊಮ್ಯಾಟೊ ದರ ಈ ಬಾರಿ ಅಚ್ಚರಿ ಮೂಡಿಸಿದೆ ಎಂದರು. ಆಲೂಗಡ್ಡೆ ಮತ್ತು ಈರುಳ್ಳಿ ಆವಕ ಕಡಿಮೆ ಆಗಬಹುದು ಎಂಬ ಸಂದೇಹ ಇತ್ತು. ಆದ್ದರಿಂದ ಅವರೆಡನ್ನು ಒಂದು ವಾರಕ್ಕೆ ಆಗುವಷ್ಟು ದಾಸ್ತಾನು ಇರಿಸಲಾಗಿದೆ. ಆದರೆ ಅನಿರೀಕ್ಷಿತವಾಗಿ ಟೊಮ್ಯಾಟೊ ದರ ವಿಪರೀತ ಏರಿಕೆ ಕಂಡಿದೆ. ಬೆಲೆ ಹೆಚ್ಚು ನೀಡಿದರೂ ಈಗ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಟೊಮ್ಯಾಟೊ ಗುಣಮಟ್ಟದ್ದಲ್ಲ. ಎರಡನೇ ದಿನದಲ್ಲಿ ಹಾಳಾಗುವುದರಿಂದ ಸಂಹ್ರಹಿಸಿಡುವುದಕ್ಕೂ ಆಗುವುದಿಲ್ಲ. ಆದ್ದರಿಂದ ಗ್ರಾಹಕರಿಗೂ ಅಂಗಡಿಯವರಿಗೂ ನಷ್ಟ ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತರಕಾರಿ ಬೆಂಗಳೂರು ಭಾಗದಿಂದ ಬರಬೇಕು. ಇಲ್ಲೇ ತರಕಾರಿ ಬೆಳೆಯುವ ಸಂಸ್ಕೃತಿ ಬೆಳೆಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ತೊಂದರೆ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೃಷಿ ಭೂಮಿ ಬಿಟ್ಟು ಮಂಗಳೂರಿನಲ್ಲಿ ನೆಲೆ
ಲೋಕೇಶ್‌ ಕನಕಪುರದವರು. ಅಲ್ಲಿ ಜಮೀನು ಇದೆ. ರಾಗಿ ಕಡ್ಲೆಕಾಯಿ ಜೊತೆಯಲ್ಲಿ ತರಕಾರಿ ಬೆಳೆಯುತ್ತಿದ್ದರು. ಆದರೆ ಈಚೆಗೆ ಪ್ರಾಣಿಗಳ ಕಾಟದಿಂದಾಗಿ ಜಮೀನನ್ನು ಬೇರೆಯವರಿಗೆ ಭೋಗ್ಯಕ್ಕೆ ಕೊಟ್ಟು ಮಂಗಳೂರಿನಲ್ಲಿ ನೆಲೆಸಿದ್ದಾರೆ. ‘ಮಂಗಗಳ ಕಾಟ ತಡೆಯುವುದಕ್ಕಾಗುವುದಿಲ್ಲ. ಜಮೀನಿಗೆ ಮಾತ್ರವಲ್ಲ ಹೆಂಚು ತೆಗೆದು ಮನೆಯ ಒಳಗೂ ಬರುತ್ತವೆ. ತುಂಬ ಜನರು ಜೊತೆಗೂಡಿ ಕೃಷಿ ಮಾಡಿದರೆ ಮಂಗಗಳನ್ನು ಓಡಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಹಾಗೆ ಮಾಡುವವರಿಗೆ ಜಮೀನು ಭೋಗ್ಯಕ್ಕೆ ಕೊಟ್ಟಿದ್ದೇವೆ. ಅರಣ್ಯ ಇಲಾಖೆಯ ನಿಯಮಗಳಿಂದಾಗಿ ಪ್ರಾಣಿಗಳನ್ನು ತಡೆಯುವುದು ಕಷ್ಟ ಆಗುತ್ತಿದೆ. ಮುತ್ತತ್ತಿಯ ಆಂಜನೇಯ ದೇವಸ್ಥಾನದ ಹೊರಗೆ ಎಸೆದ ಆಹಾರ ತಿನ್ನಲು ಕಾಡುಹಂದಿಗಳೇ ಬರುತ್ತಿವೆ. ನಮ್ಮಲ್ಲೆಲ್ಲ ಬಹುತೇಕರು ರೇಷ್ಮೆ ಕೃಷಿಯತ್ತ ವಾಲಿದ್ದಾರೆ. ರೇಷ್ಮೆ ಎಲೆಯನ್ನು ಮಂಗ ತಿನ್ನುವುದಿಲ್ಲ’ ಎಂದು ಲೋಕೇಶ್ ಹೇಳಿದರು. ಸ್ಥಳೀಯ ಬೆಳೆಗಳೂ ಇಲ್ಲದಾಗುತ್ತಿವೆ. ಹಿಂದೆಲ್ಲ ನನ್ನೂರು ಪೊಳಲಿಯಿಂದ ನಗರಕ್ಕೆ ಬೆಳಿಗ್ಗೆ ನಾಲ್ಕೈದು ದೊಡ್ಡ ವಾಹನಗಳಲ್ಲಿ ತರಕಾರಿ ಬರುತ್ತಿತ್ತು. ಈಗ ಆಟೊದಲ್ಲಿ ಹಾಕಿಕೊಂಡು ಬರುವುದಕ್ಕೂ ತರಕಾರಿ ಇಲ್ಲ. ಅಲ್ಲಿ ನವಿಲಿನ ಕಾಟ. ಕಾಳಜಿ ಆಸಕ್ತಿಯಿಂದ ಬೆಳೆದರೂ ನವಿಲಿನಿಂದ ರಕ್ಷಿಸಲು ತುಂಬ ಹೆಣಗಾಡಬೇಕು. ಅದಕ್ಕೆ ಯಾರೂ ತಯಾರಿಲ್ಲ. ಹಣ ಕೊಟ್ಟರೆ ಬಗೆಬಗೆಯ ತರಕಾರಿ ಸಿಗುತ್ತದೆ. ಹಾಗಿರುವಾಗ ಸುಮ್ಮನೇ ಕಷ್ಟಪಡುವುದು ಯಾಕೆ ಎಂಬ ಧೋರಣೆ ಜನರಲ್ಲಿ ತುಂಬಿದೆ’ ಎನ್ನುತ್ತಾರೆ ವ್ಯಾಪಾರಿ ಯೋಗೀಶ್ ಪೊಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.