ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಳಸಿದ ವಾಹನಗಳ ಮಾರಾಟಗಾರರು ಮತ್ತು ಏಜೆಂಟ್‌ಗಳ ಸಂಘದ ವತಿಯಿಂದ ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಏರ್ಪಡಿಸಿರುವ ‘ವಾಹನ ಮೇಳ 2023’ಕ್ಕೆ ಮೇಯರ್ ಜಯಾನಂದ ಅಂಚನ್ ಶನಿವಾರ ಚಾಲನೆ ನೀಡಿದರು.
ಎರಡು ದಿನಗಳ ಈ ವಾಹನ ಮೇಳವು ಭಾನುವಾರ ಸಂಪನ್ನಗೊಳ್ಳಲಿದೆ. ಹಳೆಯ ಹಾಗೂ ಹೊಸ ವಾಹನಗಳ ಪ್ರದರ್ಶನ, ಮಾರಾಟ, ವಿನಿಮಯ ಹಾಗೂ ಸಾಲ ಸೌಲಭ್ಯ ಇಲ್ಲಿ ಲಭ್ಯವಿದೆ. ದ್ವಿಚಕ್ರವಾಹನಗಳ ಮಾರಾಟದ ಆರು, ನಾಲ್ಕು ಚಕ್ರದ ವಾಹನಗಳ ಏಳು ಹಾಗೂ ಸಾಲಸೌಲಭ್ಯ ಒದಗಿಸುವ ಆರು ಮಳಿಗೆಗಳಿವೆ. 100ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಹಾಗೂ 150ಕ್ಕೂ ಅಧಿಕ ಕಾರುಗಳು ಮಾರಾಟಕ್ಕೆ ಲಭ್ಯ ಎಂದು ಸಂಘಟಕರು ತಿಳಿಸಿದರು.
ಕಾಂಚನ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್, ‘ಬಳಸಿದ ವಾಹನಗಳಿಗೂ ಈಗ ಬೇಡಿಕೆ ಹೆಚ್ಚಾಗಿದ್ದು, ಈ ಮಾರುಕಟ್ಟೆಯೂ ವಿಸ್ತರಿಸಿದೆ’ ಎಂದರು.
ಯುನೈಟೆಡ್ ಬಿಲ್ಡರ್ಸ್ ಕಾರ್ಪೊರೇಷನ್‌ನ ನಿರ್ದೇಶಕ ಜಿ.ಮಹಬೂಬ್, ‘ದೇಶವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಸಾಗುತ್ತಿದೆ. ಅಂತೆಯೇ ಬಡತನ ಸೂಚ್ಯಂಕದಲ್ಲಿ ದೇಶದ ಸ್ಥಾನ ಮತ್ತಷ್ಟು ಕುಸಿದಿದೆ. ಈ ಅಸಮತೋಲನ ಸರಿಯಲ್ಲ. ಪದೇ ಪದೇ ಗಲಭೆಗಳು ನಡೆಯುವ ಈ ನಗರದಲ್ಲೂ ಶಾಂತಿಯ ವಾತಾವರಣ ಇಲ್ಲ’ ಎಂದರು.
ಸಂಘದ ಕಾನೂನು ಸಲಹೆಗಾರ ಎಸ್.ಪಿ.ಚೆಂಗಪ್ಪ, ‘ನಿನ್ನೆಯ ವಿಧಾನ ಅನುಸರಿಸಿ ಇಂದು ವ್ಯಾಪಾರ ನಡೆಸಿದರೆ, ನಾಳೆ ಉಳಿಗಾಲ ಇರುವುದಿಲ್ಲ. ತಂತ್ರಜ್ಞಾನದ ಜೊತೆಗೆ ಹೆಜ್ಜೆಹಾಕಿ ಬದಲಾವಣೆಗಳಿಗೆ ಒಗ್ಗಿಕೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದರು.
ಸಂಘದ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಸಲಾಂ, ಸಂಘದ ಗೌರವಾಧ್ಯಕ್ಷ ಬಿ.ಅಶೋಕ್ ಕುಮಾರ್ ಶೆಟ್ಟಿ, ಅಧ್ಯಕ್ಷ ಎಚ್.ಜಯರಾಜ್ ಕೋಟ್ಯನ್, ಮುನೀರ್ ಅಹಮ್ಮದ್ ಹಾಗೂ ಪ್ರತಾಪ್ ಕೆ.ಎಸ್. ಇದ್ದರು. ಮಹಮ್ಮದ್ ರಜಾಕ್ ಹಾಗೂ ಹರ್ಷವರ್ಧನ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.