ADVERTISEMENT

ಮಂಗಳೂರು: ಅಕ್ರಮ ಕಸಾಯಿಖಾನೆಗೆ ನುಗ್ಗುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 4:13 IST
Last Updated 26 ಜುಲೈ 2024, 4:13 IST

ಮಂಗಳೂರು: ‘ಜಿಲ್ಲೆಯಲ್ಲಿ ಅನೇಕ ಅಕ್ರಮ ಕಸಾಯಿಖಾನೆಗಳು ಇದ್ದು ಅವುಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಕಾನೂನು ಕೈಗೆತ್ತಿಕೊಂಡು ದಾಳಿ ಮಾಡಲಾಗುವುದು’ ಎಂದು ವಿಶ್ವಹಿಂದೂ ಪರಿಷತ್ ಸುರತ್ಕಲ್ ಪ್ರಖಂಡದ ಅಧ್ಯಕ್ಷ ಭಾಸ್ಕರ ರಾವ್ ಬಾಳ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಮಾಂಸ ಮಾಫಿಯಾ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಇದೇ ತಿಂಗಳ 7ರಂದು ಕೃಷ್ಣಾಪುರ ಎಂಟನೇ ಬ್ಲಾಕ್‌ನಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಮನೆಯೊಳಗೆ ಗೋವುಗಳನ್ನು ಹತ್ಯೆ ಮಾಡುವುದು ಕಂಡುಬಂದಿದೆ ಎಂದು ತಿಳಿಸಿದರು.

ಕೃಷ್ಣಾಪುರದಲ್ಲಿ 19 ಗೋವು ಮತ್ತು ಕೆಜಿಗಟ್ಟಲೆ ಗೋಮಾಂಸವನ್ನು ವಶಪಡಿಸಲಾಗಿತ್ತು. ಆದರೆ ಆರೋಪಿಯನ್ನು ಬಂಧಿಸಲು ಹಿಂದೇಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಮೂವರನ್ನು ಬಂಧಿಸಿದ್ದು ಕಸಾಯಿಖಾನೆಗಳನ್ನು ಮುಚ್ಚುವ ಭರವಸೆ ನೀಡಿರುವುದರಿಂದ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಪೊಲೀಸರು ಮಾತು ತಪ್ಪಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

ADVERTISEMENT

ಕೃಷ್ಣಾಪುರಕ್ಕೆ ಕಸಾಯಿಖಾನೆಗೆ ಗೋವುಗಳನ್ನು ಎಲ್ಲಿಂದ ತರಲಾಗಿತ್ತು, ಮಾಂಸ ಎಲ್ಲಿಗೆ ಮಾರಾಟ ಆಗುತ್ತಿತ್ತು ಎಂಬುದನ್ನು ಪತ್ತೆ ಮಾಡಬೇಕು, ಗೋವುಗಳನ್ನು ತಂದ ವಾಹನಗಳನ್ನು ಜಪ್ತಿ ಮಾಡಬೇಕು, ಗೋವುಗಳ ವಧೆ ನಡೆದ ಮನೆಯನ್ನು ಮುಟ್ಟುಗೋಲು ಹಾಕಬೇಕು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಮಾಂಸದ ಅಂಗಡಿಗೆ ಪರವಾನಗಿ ಪಡೆದುಕೊಂಡು ಗೋಮಾಂಸ ಮಾರಾಟ ಮಾಡುತ್ತಿದ್ದಾರೆ. ಅವರ ಮೇಲೆ ಕ್ರಮ ಆಗಬೇಕು ಎಂದು ಅವರು ಒತ್ತಾಯಿಸಿದರು.

ವಿಶ್ವಹಿಂದೂ ಪರಿಷತ್‌ ಸುರತ್ಕಲ್ ಪ್ರಖಂಡದ ಕಾರ್ಯದರ್ಶಿ ಜಯರಾಮ್ ಆಚಾರ್ಯ, ಬಜರಂಗ ದಳದ ಜಿಲ್ಲಾ ಸಹಸಂಯೋಜಕ ಪ್ರೀತಮ್ ಕಾಟಿಪಳ್ಳ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಾಲಕೃಷ್ಣ ಮುಂಚೂರು ಮತ್ತು ಜಿಲ್ಲಾ ಸಮಿತಿ ಸದಸ್ಯ ಪುಷ್ಪರಾಜ್ ಕುಳಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.