ADVERTISEMENT

ವಿಧಾನ ಪರಿಷತ್‌ ಉಪ ಚುನಾವಣೆ: ಶೇ 97.91 ಮತದಾನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 12:43 IST
Last Updated 21 ಅಕ್ಟೋಬರ್ 2024, 12:43 IST
<div class="paragraphs"><p>ವಿಧಾನಪರಿಷತ್ ಉಪಚುನಾವಣೆಯಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಉಳ್ಳಾಲ ನಗರಸಭೆಯ ಮತಗಟ್ಟೆಯಲ್ಲಿ ಸೋಮವಾರ ಮತದಾನ ಮಾಡಿದರು</p></div>

ವಿಧಾನಪರಿಷತ್ ಉಪಚುನಾವಣೆಯಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಉಳ್ಳಾಲ ನಗರಸಭೆಯ ಮತಗಟ್ಟೆಯಲ್ಲಿ ಸೋಮವಾರ ಮತದಾನ ಮಾಡಿದರು

   

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯರ ಪ್ರತಿನಿಧಿಯ ಆಯ್ಕೆಗಾಗಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಸೋಮವಾರ ಶೇ 97.91ರಷ್ಟು ಮತದಾನವಾಗಿದೆ.

ಈ ಉಪಚುನಾವಣೆಯಲ್ಲಿ ಉಭಯ ಜಿಲ್ಲೆಗಳ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ವಿಧಾನ ಸಭೆ, ವಿಧಾನ ಪರಿಷತ್‌ ಹಾಗೂ ಲೋಕಸಭಾ ಸದಸ್ಯರು ಸೇರಿ ಒಟ್ಟು 6,032 ಮತದಾರರಿದ್ದರು. ಅವರಲ್ಲಿ 5,906 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದರು.

ADVERTISEMENT

ಮತದಾನ ಬಹಿಷ್ಕಾರ: ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಕಸ್ತೂರಿರಂಗನ್ ವರದಿಯ ಶಿಫಾರಸುಗಳ ಜಾರಿಯನ್ನು ವಿರೋಧಿಸಿ ಉಡುಪಿ ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳು ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದವು. ಉಡುಪಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌. ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ ಅವರು ಈ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಈ ಏಳು ಗ್ರಾಮಗಳ ಪೈಕಿ ಬೈಂದೂರು ತಾಲ್ಲೂಕಿನ ಜಟ್ಕಲ್‌, ಜಟ್ಕಲ್‌ನಲ್ಲಿ ಎಲ್ಲ 18 ಸದಸ್ಯರೂ ಮತದಾನವನ್ನು ಬಹಿಷ್ಕರಿಸಿದರು. ಉಳಿದ ಗ್ರಾಮಗಳಾದ ಜಟ್ಕಲ್‌, ಯಡಮೊಗೆ, ಚಿತ್ತೂರು, ಯಡೂರು– ಕುಂಞಾಡಿ, ಆಲೂರು ಹಾಗೂ ಕೆರಾಡಿ ಗ್ರಾಮಗಳ ಮತದಾರರಲ್ಲಿ ಕೆಲವರು ಹಕ್ಕು ಚಲಾಯಿಸಲಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಮತದಾನವನ್ನು ಬಹಿಷ್ಕರಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಮತದಾನ ಸಾಂಗವಾಗಿ ನಡೆಯಿತು. ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ 1 ಗಂಟೆಯ ಒಳಗೆ ಶೇ 100ರಷ್ಟು ಮತದಾನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.