ADVERTISEMENT

ದೇಶ ವಿಕಸಿತವಾಗಲು ನೀಗಬೇಕು ಅಸಮಾನತೆ

‘ವಿಕಸಿತ ಭಾರತ: 2047’ ವಿಚಾರ ಸಂಕಿರಣದಲ್ಲಿ ಅಲೆನ್ ಪಿರೇರ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 4:25 IST
Last Updated 8 ನವೆಂಬರ್ 2024, 4:25 IST
ಕಾರ್ಯಕ್ರಮದಲ್ಲಿ ಪ್ರೊ.ಎಂ.ಎಸ್. ಮೂಡಿತ್ತಾಯ ಮಾತನಾಡಿದರು. ಶೇಷಪ್ಪ ಕೆ, ಆಶಾಲತಾ ಸುವರ್ಣ, ವಸಂತ ಕಾರಂದೂರು, ಅಲೆನ್ ಪೆರೇರಾ, ಶೇಖರ ಪೂಜಾರಿ, ಬಿ.ಜಿ.ಸುವರ್ಣ ಭಾಗವಹಿಸಿದ್ದರು : ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಪ್ರೊ.ಎಂ.ಎಸ್. ಮೂಡಿತ್ತಾಯ ಮಾತನಾಡಿದರು. ಶೇಷಪ್ಪ ಕೆ, ಆಶಾಲತಾ ಸುವರ್ಣ, ವಸಂತ ಕಾರಂದೂರು, ಅಲೆನ್ ಪೆರೇರಾ, ಶೇಖರ ಪೂಜಾರಿ, ಬಿ.ಜಿ.ಸುವರ್ಣ ಭಾಗವಹಿಸಿದ್ದರು : ಪ್ರಜಾವಾಣಿ ಚಿತ್ರ    

ಮಂಗಳೂರು: ‘2047ರಲ್ಲಿ ವಿಕಸಿತ ಭಾರತವನ್ನು ಹೊಂದುವ ಕನಸು ಈಡೇರಬೇಕಾದರೆ, ದೇಶದಲ್ಲಿರುವ ಅಸಮಾನತೆಯನ್ನು ನೀಗಿಸಬೇಕು. ಪ್ರತಿ ವ್ಯಕ್ತಿಯೂ ವಾಸಸ್ಥಳದ 100 ಕಿ.ಮೀ. ವ್ಯಾಪ್ತಿಯಲ್ಲಿ ಉದ್ಯೋಗ ಪಡೆಯುವಂತಹ ವಾತಾವರಣ ರೂಪಿಸಬೇಕು’ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿರುವ ಅಲೆನ್ ಪಿರೇರ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀಗೋಕರ್ಣನಾಥೇಶ್ವರ ಕಾಲೇಜು ಹಾಗೂ ಬಿಲ್ಲವ ಎಂಪ್ಲಾಯಿಸ್‌ ವೆಲ್‌ಫೇರ್ ಸೊಸೈಟಿ (ಬಿಇಡಬ್ಲ್ಯುಎಸ್‌) ಆಶ್ರಯದಲ್ಲಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ‘ವಿಕಸಿತ ಭಾರತ: 2047’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ದೇಶದ ಜಿಡಿಪಿ ಜೊತೆಯಲ್ಲೇ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆಯೂ ಹೆಚ್ಚುತ್ತಿದೆ. 1951ರಲ್ಲಿ ದೇಶದ ತಳಹಂತದ ಜನರಲ್ಲಿ ಶೇ 42.8ರಷ್ಟು ಸಂಪತ್ತು ಹಂಚಿಕೆಯಾಗಿತ್ತು. 2022ರ ವೇಳೆಗೆ ಇದು ಶೇ 27.3ಕ್ಕೆ ಇಳಿಕೆಯಾಗಿದೆ. ಸಂಪತ್ತಿನ ಸಮಾನ ಹಂಚಿಕೆಯಲ್ಲಿ ಅಮೆರಿಕ, ಫ್ರಾನ್ಸ್‌, ಬ್ರೆಜಿಲ್‌ಗಿಂತ ನಾವು ತುಂಬ ಹಿಂದಿದ್ದೇವೆ’ ಎಂದರು.

ADVERTISEMENT

‘ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ನಗರಗಳು ಜನರನ್ನು ಹೊರದಬ್ಬಿದರೆ, ಹಳ್ಳಿಗಳು ಎಲ್ಲರಿಗೂ ಆಶ್ರಯ ನೀಡಿದವು. ಈಗಲೂ ದೇಶದ ಆರ್ಥಿಕತೆ ನಿಂತಿರುವುದು ಕಾರ್ಪೊರೇಟ್‌ ಕುಳಗಳ ಕೈಯಲ್ಲಲ್ಲ. ಹಳ್ಳಿಯ ದುಡಿಯುವ ವರ್ಗದ ಉಳಿತಾಯ ಮನೋಭಾವದಿಂದಾಗಿ ದೇಶದ ಆರ್ಥಿಕತೆ ಸುರಕ್ಷಿತವಾಗಿದೆ’ ಎಂದು ತಿಳಿಸಿದರು.

‘ವಿಕಸಿತ ಭಾರತ ನಿರ್ಮಾಣಕ್ಕೆ ಉನ್ನತ ಆರ್ಥಿಕ ಬೆಳವಣಿಗೆ ದರವನ್ನು ಕಾಯ್ದುಕೊಂಡರಷ್ಟೇ ಸಾಲದು. ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಳಕ್ಕೂ ಆದ್ಯತೆ ನೀಡಬೇಕು. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯಕ್ಕೂ ಮಹತ್ವ ನೀಡಬೇಕು. ಹವಾಮಾನ ವೈಪರೀತ್ಯ ತೊಡಕು ನಿವಾರಣೆ ಹಾಗೂ ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು. 

ಕಾಲೇಜಿನ ಸಂಚಾಲಕ ವಸಂತ ಕಾರಂದೂರು ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಶಿವ ಭಕ್ತಿ ಯೋಗ ಸಂಘದ ಉಪಾಧ್ಯಕ್ಷರಾದ ಶೇಖರ ಪೂಜಾರಿ, ಬಿ.ಜಿ.ಸುವರ್ಣ, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಆಶಾಲತಾ ಸುವರ್ಣ, ಬಿಇಡಬ್ಲ್ಯುಎಸ್‌ನ ಶೇಷಪ್ಪ ಕೆ., ಪ್ರಾಂಶುಪಾಲ ಜಯಪ್ರಕಾಶ ಭಾಗವಹಿಸಿದ್ದರು. 

‘ಜಾಗತಿಕ ಸನ್ನಿವೇಶದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಾಮರಸ್ಯ: ಬ್ರಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ’ ಕುರಿತು ಅಂಕಿತ್ ಎಸ್. ಕುಮಾರ್‌,  ‘ಆರ್ಥಿಕ ಬೆಳವಣಿಗೆಗೆ ತಾಂತ್ರಿಕ ಮಧ್ಯಸ್ಥಿಕೆಗಳು’ ಕುರಿತು ರಾಮಕೃಷ್ಣ ಬಂಡಾರು, ಹಾಗೂ ‘ನವ ಭಾರತ ನಿರ್ಮಾಣ: ನಾವೀನ್ಯತೆ ಮತ್ತು ಒಳಗೊಳ್ಳುವಿಕೆ’ ಕುರಿತು ಮಾನಸಿಕ ಆರೋಗ್ಯ ತಜ್ಞೆ ರಮೀಳಾ ಶೇಖರ್ ವಿಚಾರ ಮಂಡಿಸಿದರು.

‘ಯಶೋಗಾಥೆ ಬರೆಯಲಿದೆ ಯುವಭಾರತ’

‘ಯುವ ಭಾರತವು ತನ್ನ ಯಶೋಗಾಥೆಯನ್ನು ತಾನೇ ಬರೆಯಲಿದೆ. ಲಕ್ಷಾಂತರ ಯುವ ಉದ್ಯಮಿಗಳು ನವೋದ್ಯಮಗಳನ್ನು ಸ್ಥಾಪಿಸುವ ಮೂಲಕ ವಿಕಾಸಕ್ಕಾಗಿ ಹಾತೊರೆಯುತ್ತಿದ್ದಾರೆ’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್‌.ಮೂಡಿತ್ತಾಯ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಸ್ವಾತಂತ್ರ್ಯ ಸಿಕ್ಕಿದ ಆರಂಭದಲ್ಲಿ ದೇಶವು ಬ್ರಿಟಿಷರ ದುರಾಡಳಿತದಿಂದ ಸೃಷ್ಟಿಯಾಗಿದ್ದ  ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಬೇಕಾಯಿತು. ಈಗ  ಸ್ವಾವಲಂಬನೆ ಸಾಧಿಸುವ ಹಾದಿಯಲ್ಲಿದೆ. ಹಿಂದಿನ ಪೀಳಿಗೆ ಎಲ್ಲದರ ಜೊತೆಗೂ ಹೊಂದಿಕೊಳ್ಳುವ ಮನೋಧರ್ಮವನ್ನು ಹೊಂದಿತ್ತು. ಈಗಿನ ಯುವಮನಸುಗಳು ಬೇಕಾದುದನ್ನು ಪಡೆಯುವ ಛಲವನ್ನು ಹೊಂದಿವೆ. ವಿಕಸಿತ ಭಾರತ ನಿರ್ಮಿಸಲು ಸಂಖ್ಯಾ ಬಾಹುಳ್ಯವಿರುವ ಯುವಜನರನ್ನು ಗುಣಮಟ್ಟದಲ್ಲೂ ಉತ್ಕೃಷ್ಟವನ್ನಾಗಿ ರೂಪಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.