ಮಂಗಳೂರು: ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಸಂಘಟನಾ ಸಮಿತಿ ನೇತೃತ್ವದಲ್ಲಿ ಜ.26 ಗಣರಾಜ್ಯೋತ್ಸವದಂದು 22ನೇ ವಿಂಟೇಜ್ ಕಾರು ಹಾಗೂ ಬೈಕ್‍ಗಳ ಪ್ರದರ್ಶನವನ್ನು ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದೆ.
ಸಂಘಟನಾ ಸಮಿತಿ ಅಧ್ಯಕ್ಷ ಮಿಥುನ್ ರೈ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಅಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಇವುಗಳ ವೀಕ್ಷಣೆಗೆ ಅವಕಾಶವಿದೆ. ಪಿ.ಎಫ್.ಎಕ್ಸ್. ಸಲ್ಡಾನ ಅವರ 1906ನೇ ಮಾಡೆಲ್ ಕಾರು ಹಾಗೂ ‘ಡೆ ಡಿಯಾನ್ ಬೌಟನ್’ ಮಂಗಳೂರಿನ ಪ್ರಥಮ ಕಾರು (ಪ್ರಸ್ತುತ ಸೇಂಟ್ ಅಲೋಶಿಯಸ್ ಕಾಲೇಜಿನ ಮ್ಯೂಸಿಯಂನಲ್ಲಿದೆ) ಈ ಬಾರಿಯ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜೊತೆಗೆ ರಾಜ್ಯದ ವಿವಿಧ ಭಾಗಗಳ 75ಕ್ಕೂ ಹೆಚ್ಚು ವಿಂಟೇಜ್ ಕಾರು ಹಾಗೂ ಬೈಕ್‌ಗಳು ಪ್ರದರ್ಶನದಲ್ಲಿ ಇರಲಿವೆ ಎಂದರು.
ಅಸೋಸಿಯೇಶನ್‍ನ ಅಧ್ಯಕ್ಷ ಸುಧೀರ್ ಬಿ.ಕೆ. ಮಾತನಾಡಿ, ‘ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಬಳಿ ಇರುವ ಕೆಲವು ವಿಂಟೇಜ್ ಕಾರುಗಳನ್ನು ಪ್ರದರ್ಶನಕ್ಕೆ ಕಳುಹಿಸಲು ಅವರು ಒಪ್ಪಿದ್ದಾರೆ. ಆರೂರು ಕಿಶೋರ್ ರಾವ್ ಅವರ 1948ರ ಮಾಡೆಲ್‍ನ ರಾಲ್ಸ್ ರಾಯ್ ಸಿಲ್ವರ್ ವ್ರೇತ್, 1948ರ ಮಾಡೆಲ್‌ನ ಬೆಂಟ್ಲಿ ಎಂಕೆ ವಿಐ, 1949ನೇ ಮಾಡೆಲ್‌ನ ಕ್ಯಾಡಿಲ್ಯಾಕ್ ಎಲ್‍ಎಚ್, ಬೆಂಗಳೂರಿನ ಲ್ಯೂಕ್ ರೆಬೆಲ್ಲೊ ಅವರ 1925ನೇ ಮಾಡೆಲ್‌ನ ರಾಲ್ಸ್ ರಾಯ್, ಕೃಷ್ಣಪ್ಪ ಉಚ್ಚಿಲ್ ಅವರ ಫೋರ್ಡ್ ಕಾರು, ಹೇಮರಾಜ್ ಅವರ ಹಿತ್ತಾಳೆಯ ಶಾವರ್ಲೆ ಮತ್ತಿತರ ಕಾರುಗಳು ಪ್ರದರ್ಶನದಲ್ಲಿ ಇರಲಿವೆ’ ಎಂದರು. ಮಾಧ್ಯಮ ಸಂಯೋಜಕ ಯತೀಶ್ ಬೈಕಂಪಾಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.