ಮಂಗಳೂರು: ಹವ್ಯಕ ಪರಂಪರೆ ಅನಾವರಣಗೊಳಿಸುವ ತೃತೀಯ ವಿಶ್ವ ಹವ್ಯಕ ಸಮ್ಮೇಳನವು ಅಖಿಲ ಹವ್ಯಕ ಮಹಾಸಭಾದ ನೇತೃತ್ವದಲ್ಲಿ ಡಿಸೆಂಬರ್ 27ರಿಂದ 29ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ, ‘ಹವ್ಯಕ ಮಹಾಸಭೆಗೆ ಈಗ 81 ವರ್ಷ ನಾಲ್ಕು ತಿಂಗಳು ಪೂರೈಸಿದ ಸಹಸ್ರಚಂದ್ರ ದರ್ಶನದ ಪರ್ವಕಾಲ. ಈ ನೆನಪನ್ನು ಹಸಿರಾಗಿಸಲು ‘ಸಹಸ್ರಚಂದ್ರ’ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಾಗುವುದು’ ಎಂದರು.
ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಕೇರಳ ಕಾಸರಗೋಡು ಭಾಗ ಕೇಂದ್ರೀಕರಿಸಿ ನೆಲೆಸಿರುವ ಹವ್ಯಕರ ಜನಸಂಖ್ಯೆ ಸುಮಾರು 4 ಲಕ್ಷ ಇದೆ. ಈ ಸಣ್ಣ ಸಮುದಾಯದ ಅನೇಕ ವಿಶೇಷತೆಗಳನ್ನು ಪ್ರತಿಫಲಿಸುವ ಹವ್ಯಕ ಪಾಕೋತ್ಸವ, ಆಲೆಮನೆ, ಯಜ್ಞ ಮಂಡಲ, ಹವ್ಯಕ ತಿನಿಸು, ಪಾರಂಪರಿಕ, ಕರಕುಶಲ ವಸ್ತು ಪ್ರದರ್ಶನ, ಹವ್ಯಕ ನಾಟಕ, ಯಕ್ಷ ಯಾನ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಸಮ್ಮೇಳನ ಸಾಕ್ಷೀಕರಿಸಲಿದೆ. ಗಾಯತ್ರೀ ಥೀಂ ಪಾರ್ಕ್– ಮೂಲಮಂತ್ರದ ವಿರಾಟ್ ದರ್ಶನ, ದೇಸಿ ಗೋ ಲೋಕ, ಅಡಿಕೆ ಪ್ರಪಂಚ– ಹವ್ಯಕರ ಕೃಷಿ ಖುಷಿ ಮತ್ತಿತರ ಸಮುದಾಯ ಅಸ್ಮಿತೆಯನ್ನು ಬಿಂಬಿಸುವ ಪ್ರದರ್ಶನಗಳು ನೋಡುಗರನ್ನು ಸೆಳೆಯಲಿವೆ ಎಂದರು.
ಶತ ಕಂಠಗಳಿಂದ ಭಗವದ್ಗೀತೆ ಪಠಣ, 81 ಹವಿ ತಿನಿಸುಗಳ ಮಾರಾಟ, ಭಕ್ತಿ ಭಜನೆ, ವಾಕಥಾನ್, 108 ಬೈಕ್‌ಗಳ ರ್‍ಯಾಲಿ, ಸಾವಿರದ ರಕ್ತದಾನ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳು, ಪರಿಹಾರ ಕುರಿತು ಎಂಟು ಗೋಷ್ಠಿಗಳು ನಡೆಯಲಿವೆ. ಹವ್ಯಕ ಸಾಧಕ ರತ್ನ, ವೇದ ರತ್ನ, ಕೃಷಿ ರತ್ನ, ಶಿಕ್ಷಕ ರತ್ನ, ವಿದ್ಯಾ ರತ್ನ, ದೇಶ ರತ್ನ, ಸ್ಫೂರ್ತಿ ರತ್ನ ಹೀಗೆ ಏಳು ಕ್ಷೇತ್ರಗಳ ಒಟ್ಟು 567 ಸಾಧಕರನ್ನು ಸನ್ಮಾನಿಸಲಾಗುವುದು. ಪ್ರತಿ ಕ್ಷೇತ್ರದಲ್ಲಿ 81 ಜನರನ್ನು ಆಯ್ಕೆ ಮಾಡಲಾಗುತ್ತದೆ. ಸಾಧಕರ ಹೆಸರು, ಕಿರು ಪರಿಚಯವನ್ನು ಸಂಪರ್ಕ ಸಂಖ್ಯೆಯೊಂದಿಗೆ ನ.25ರ ಒಳಗೆ ಮಹಾಸಭೆಗೆ ತಿಳಿಸಬಹುದು. ಹವ್ಯಕ ಸಮ್ಮೇಳನವು ಹವ್ಯಕರಿಗೆ ಸೀಮಿತವಾಗಿರದೆ, ಎಲ್ಲ ಸಮುದಾಯದವರಿಗೆ ಮುಕ್ತವಾಗಿದೆ. ಎಲ್ಲರನ್ನೂ ಆಹ್ವಾನಿಸಲಾಗುತ್ತದೆ ಎಂದು ಗಿರಿಧರ ಕಜೆ ತಿಳಿಸಿದರು.
ಹವ್ಯಕ ಸಮುದಾಯದವರು ನಡೆದುಕೊಳ್ಳುವ ರಾಮಚಂದ್ರಾಪುರ ಮಠ, ಸ್ವರ್ಣವಲ್ಲಿ ಮಠ ಹಾಗೂ ನೆಲೆಮಾವು ಮಠದ ಮಠಾಧೀಶರ ಜೊತೆಗೆ ಇನ್ನುಳಿದ ಮಠಾಧೀಶರು, ರಾಜಕೀಯ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗುತ್ತದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಮ್ಮೇಳನದ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಸಂಘಟನೆ ಪ್ರಮುಖರಾದ ಗೀತಾದೇವಿ ಸುಂದರ್, ಸುಮಾ ರಮೇಶ್, ರಮೇಶ್ ಭಟ್, ಉದಯ್ ಮಿತ್ತೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.