ADVERTISEMENT

ಅನ್ನದ ಭಾಷೆಯ ಅಪ್ಪಿ, ಅಮ್ಮನ ಭಾಷೆ ಮರೆಯದಿರಿ: ಅಶೋಕ್‌ ಕಾಮತ್‌

ವಿಶ್ವಕೊಂಕಣಿ ಸಮಾರೋಹ 2024

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:24 IST
Last Updated 6 ನವೆಂಬರ್ 2024, 5:24 IST
ಸಂವಾದದಲ್ಲಿ (ಎಡದಿಂದ ನಾಳ್ಕನೆಯವರು) ಅಶೋಕ್ ಕಾಮತ್ ಮಾತನಾಡಿದರು.  ( ಎಡದಿಂದ ) ಪಾಂಡುರಂಗ ನಾಯಕ್,  ಎಸ್. ಪ್ರಶಾಂತ್ ಶೇಟ್, ಪ್ರಕಾಶ್ ನಾಯಕ್, ನಾಗರಾಜ ಖಾರ್ವಿ, ಸರಸ್ವತಿ ಪ್ರಭು ಹಾಗೂ ಫ್ಲೋರಾ ಕ್ಯಾಸ್ಟಲಿನೊ ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ
ಸಂವಾದದಲ್ಲಿ (ಎಡದಿಂದ ನಾಳ್ಕನೆಯವರು) ಅಶೋಕ್ ಕಾಮತ್ ಮಾತನಾಡಿದರು.  ( ಎಡದಿಂದ ) ಪಾಂಡುರಂಗ ನಾಯಕ್,  ಎಸ್. ಪ್ರಶಾಂತ್ ಶೇಟ್, ಪ್ರಕಾಶ್ ನಾಯಕ್, ನಾಗರಾಜ ಖಾರ್ವಿ, ಸರಸ್ವತಿ ಪ್ರಭು ಹಾಗೂ ಫ್ಲೋರಾ ಕ್ಯಾಸ್ಟಲಿನೊ ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ   

ಮಂಗಳೂರು: ಹಲವಾರು ಸಮುದಾಯಗಳ ಆಡುಭಾಷೆಯಾಗಿರುವ ಕೊಂಕಣಿಯನ್ನು ಭಾಷಾ ಕಲಿಕಾ ಮಾಧ್ಯಮವನ್ನಾಗಿಸುವುದು ಹೇಗೆ? ಕೊಂಕಣಿಯಲ್ಲಿ ಶಿಕ್ಷಣ ನಿಜಕ್ಕೂ ಕಾರ್ಯಸಾಧುವೇ? ಜಾಗತೀಕರಣದ ಬಳಿಕ ಇಂಗ್ಲಿಷ್‌ ವ್ಯಾಮೋಹ ವ್ಯಾಪಕವಾಗಿರುವಾಗ ಮಕ್ಕಳ ಪೋಷಕರನ್ನು ಈ ಭಾಷೆಯತ್ತ ಸೆಳೆಯುವುದೆಂತು?

‘ವಿಶ್ವಕೊಂಕಣಿ ಸಮಾರೋಹ 2024’ರ ‘ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶಿಕ್ಷಣ‍- ಕೊಂಕಣಿ ಸಂದರ್ಭದಲ್ಲಿ’ ಗೋಷ್ಠಿಯಲ್ಲಿ ಇಂತಹದ್ದೊಂದು ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಂಗಳವಾರ ನಡೆಯಿತು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅಶೋಕ್ ಕಾಮತ್,  ‘ಮಗು ಆರು ವರ್ಷದವರೆಗೆ ಐದು ಭಾಷೆಗಳನ್ನು ಚೆನ್ನಾಗಿ ಕಲಿಯಬಲ್ಲುದು. ಮಿದುಳಿನ ಶೇ 85ರಷ್ಟು ಬೆಳವಣಿಗೆ ಆಗುವುದು ಈ ಅವಧಿಯಲ್ಲೇ. ಕೊಂಕಣಿ ಉಳಿಸಲು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಇಂಗ್ಲಿಷ್ ಅನ್ನ ನೀಡುವ ಭಾಷೆ ಎಂದು ಭಾವಿಸಿ ಜನ ಅದರತ್ತ ಆಕರ್ಷಿತರಾಗುತಿದ್ದಾರೆ. ತಾಯಿ ನುಡಿಯಲ್ಲೇ ಕಲಿಯುವ ಪ್ರಯೋಜನ ಮನದಟ್ಟು ಮಾಡಬೇಕಿದೆ. ಭಾಷೆಯನ್ನು ಔಪಚಾರಿಕ ಶಿಕ್ಷಣದ ಮೂಲಕವೇ ಕಲಿಸಬೇಕಿಲ್ಲ. ಅನ್ನದ ಭಾಷೆಯ ಅಪ್ಪಿಕೊಂಡು ಅಮ್ಮನ ಭಾಷೆ ಮರೆಯಬಾರದು’ ಎಂದರು. 

ADVERTISEMENT

ಶಿಕ್ಷಕ ನಾಗರಾಜ ಖಾರ್ವಿ, 'ಕರ್ನಾಟಕದಲ್ಲಿ 40 ಬಗೆಯ ಸಮುದಾಯಗಳು ಕೊಂಕಣಿ ಮಾತನಾಡುತ್ತವೆ. ಈ ಸಮುದಾಯಗಳ ರೀತಿ– ರಿವಾಜು, ಪದಬಳಕೆ ಬೇರೆ.  ವಿವಿಧ ಸಮುದಾಯಗಳು ಬಳಸುವ ಭಾಷೆಗಳೆಲ್ಲವನ್ನೂ ಪರಿಷ್ಕರಿಸಿ ಕೊಂಕಣಿಗರೆಲ್ಲರಿಗೂ ಸಮ್ಮತವಾಗುವ ಕಲಿಕಾ ಭಾಷೆಯನ್ನು ರೂಪಿಸಬೇಕಿದೆ. ಕೊಂಕಣಿಯ ಜಾನಪದದ ಸತ್ವ ಯುವ ಪೀಳಿಗೆಗೂ ಖಂಡಿತಾ ರುಚಿಸುತ್ತದೆ’ ಎಂದರು. 

ಗೋವಾದ ನಿವೃತ್ತ ಶಿಕ್ಷಕ, ಲೇಖಕ ಪ್ರಕಾಶ್ ನಾಯಕ್, ‘ಗೋವಾ 1961ರಲ್ಲಿ ಸ್ವಾತಂತ್ರ್ಯ ಪಡೆದರೂ ಬಹುಸಂಖ್ಯಾತ ಕೊಂಕಣಿಗರು ಮಾತೃಭಾಷೆಯಲ್ಲಿ ಕಲಿಯುವ ಅವಕಾಶ ಪಡೆಯಲು ಹೋರಾಟ ನಡೆಸಬೇಕಾಯಿತು. ಅಲ್ಲಿ ರಾಜ್ಯಭಾಷೆಯ ಸ್ಥಾನಮಾನ ಸಿಕ್ಕ ಬಳಿಕವೂ ಶಿಕ್ಷಣ ಕ್ಷೇತ್ರದಲ್ಲಿ ಕೊಂಕಣಿಗೆ ಸಿಗಬೇಕಾದ ಮನ್ನಣೆ ಈಗಲೂ ಮರೀಚಿಕೆಯೇ. ಎನ್‌ಇಪಿಯಲ್ಲಿ ಮಾತೃ ಭಾಷಾ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ. ಆದರೂ ಕಲಿಕಾ ಮಾಧ್ಯಮವಾಗಿ ಈ ಭಾಷೆಯ ‍ಪುನರುಜ್ಜೀವನಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ’ ಎಂದರು.

ಕೇರಳ ಶಿಕ್ಷಕಿ ಸರಸ್ವತಿ ಪ್ರಭು, 'ನಾಲ್ಕನೇ ತರಗತಿವರೆಗೆ ಕೊಂಕಣಿಯನ್ನು ಒಂದು ಭಾಷೆಯಾಗಿ ಕಲಿಯಲು ಕೇರಳದಲ್ಲಿ 1968ರಿಂದಲೂ ಅವಕಾಶ ಇದೆ. ಶಿಕ್ಷಕರ ಕೊರತೆಯಿಂದ ಬೆರಳೆಣಿಕೆಯ ಶಾಲೆಗಳಷ್ಟೇ ಕೊಂಕಣಿಯನ್ನು ಕಲಿಸುತ್ತಿವೆ’ ಎಂದರು. 

ಪ್ರೇಕ್ಷಕ ಅನಂತ ಅಗ್ನಿ, ‘ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಂಡರೆ ಖಂಡಿತಾ ಪೋಷಕರು ಕೊಂಕಣಿ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ.  ಗುಣಮಟ್ಟದ ಬಾಲ ಸಾಹಿತ್ಯ ರೂಪಿಸಬೇಕು’ ಎಂದರು.

ದೈವಜ್ಞ ಪತ್ರಿಕೆಯ ಎಸ್.ಪ್ರಶಾಂತ್ ಶೇಟ್, ಫ್ಲೋರಾ ಕ್ಯಾಸ್ಟಲಿನೊ ಹಾಗೂ ನಿವೃತ್ತ ಪ್ರಾಂಶುಪಾಲ ಪಾಂಡುರಂಗ ನಾಯಕ್ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಗೋವಾದ ರಂಗಕರ್ಮಿ ಪುಂಡಲೀಕ ನಾಯಕ್ ಹಾಗೂ ಗೋವಾ ವಿಶ್ವವಿದ್ಯಾಲಯದ ಕೊಂಕಣಿ ವಿಭಾಗದ ಪ್ರಾಧ್ಯಾಪಕ ಹನುಮಂತ ಚೊಪ್ಡೇಕರ್ ಸಂಪಾದಕತ್ವದ ‘ಕೊಂಕಣಿ ರಂಗ ಭೂಮಿಯ ಇತಿಹಾಸ’ ಸಂಶೋಧನಾ ಕೃತಿ,  ಕೇಂದ್ರದ ಆಡಳಿತಾಧಿಕಾರಿ  ಬಿ.ದೇವದಾಸ ಪೈ ಅವರ ಕೊಂಕಣಿ ಭಾಷಾ ವಿಜ್ಞಾನ ಸಂಶೋಧನೆಯ ಪ್ರಥಮ ವರದಿ ಲೋಕಾರ್ಪಣೆಗೊಳಿಸಲಾಯಿತು. ಶಕುಂತಲಾ ಆರ್.ಕಿಣಿ, ಬಸ್ತಿ ಶೋಭಾ ಶೆಣೈ, ಸುಚಿತ್ರಾ ಎಸ್. ಶೆಣೈ ಅವರನ್ನು ಸನ್ಮಾನಿಸಲಾಯಿತು. 

‘ಕೊಂಕಣಿ ಸಾಹಿತ್ಯದಲ್ಲಿ ಹಾಸ್ಯಪ್ರಜ್ಞೆ’ ಗೋಷ್ಠಿಯು ಎಚ್. ಎಂ. ಪೆರ್ನಾಲ್ ಅಧ್ಯಕ್ಷತೆಯಲ್ಲಿ, ಕೊಂಕಣಿ ವಾಚನ ಸಂಸ್ಕೃತಿ ಗೋಷ್ಠಿಯು ಸಾಹಿತಿ ಗೋಕುಲದಾಸ್ ಪ್ರಭು ಅಧ್ಯಕ್ಷತೆಯಲ್ಲಿ ನಡೆಯಿತು.   

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ ಸ್ವಾಗತಿಸಿದರು. ‘ವಿಷನ್‌ ಕೊಂಕಣಿ’ಯ ಮೆಲ್ವಿನ್ ಡಿಸೋಜ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಕಿರಣ್ ಬುಡ್ಕುಳೆ, ಗಿಲ್ಬರ್ಟ್ ಡಿಸೋಜ, ಕಾರ್ಯದರ್ಶಿ ಕಸ್ತೂರಿ ಮೋಹನ್ ಪೈ, ಖಜಾಂಚಿ ಬಿ.ಆರ್.ಭಟ್, ವಿಶ್ವಸ್ಥ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

ಒಗ್ಗೂಡೋಣ

‘ಜಾತಿ ಮತದ ಎಲ್ಲೆ ಮೀರಿ ಕೊಂಕಣಿಯ ಹೆಸರಿನಲ್ಲಿ ಒಗ್ಗೂಡಬೇಕಿದೆ. ಈ ಭಾಷೆಯ ಅಭಿವೃದ್ಧಿಗೆ ಕಾಳಜಿ ವಹಿಸುವುದು ಅನುಕರಣೀಯ ಮಾತ್ರವಲ್ಲ ಅಭಿನಂದನೀಯ’ ಎಂದು ಮಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ದಿಲೀಪ್ ಜಿ. ನಾಯಕ್ ಹೇಳಿದರು. ನಗರದ ವಿಶ್ವಕೊಂಕಣಿ ಕೇಂದ್ರದಲ್ಲಿ ಎರಡು ದಿನಗಳ ‘ವಿಶ್ವಕೊಂಕಣಿ ಸಮಾರೋಹ 2024’ ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.