ವಿಟ್ಲ: ಕಿರಿದಾದ ರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುವ ದ್ವಿಚಕ್ರ ವಾಹನಗಳು, ಅವುಗಳ ನಡುವೆ ಶರವೇಗದಲ್ಲಿ ಸಾಗುವ ಬಸ್‌ಗಳು, ಮಧ್ಯೆ ನುಸುಳುವ ರಿಕ್ಷಾಗಳು, ಬೈಕ್ ಸವಾರರು, ಹಿಂದಿನಿಂದ ಬರುವ ಕಾರು, ಗೂಡ್ಸ್ ವಾಹನಗಳು...
ವಿಟ್ಲ ಪೇಟೆಯ ನಡುವೆ ವಾಹನದಲ್ಲಿ ಹೋಗುವವರಿಗೆ ನಿತ್ಯವೂ ಸಂಚಾರ ದಟ್ಟಣೆಯ ಈ ಗೋಳು ತಪ್ಪಿದ್ದಲ್ಲ. ಇನ್ನು ಶಾಲೆಗೆ ಹೋಗುವ ಮಕ್ಕಳು, ಪಾದಚಾರಿಗಳು ಕಿಷ್ಕಿಂಧೆಯಂತಹ ರಸ್ತೆಯ ಬದಿಯಲ್ಲಿ ದಾರಿ ಹುಡುಕಿಕೊಂಡು ಹೋಗುವಷ್ಟರಲ್ಲಿ ಹೈರಾಣಾಗುತ್ತಾರೆ. ಬೆಳೆಯುತ್ತಿರುವ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಪರಿಹಾರ ಕಾಣದ ಸಮಸ್ಯೆ ಇದಾಗಿದೆ.
ನಾಲ್ಕು ಮಾರ್ಗದಿಂದ ಪುತ್ತೂರು ರಸ್ತೆಯ ವಿ.ಎಚ್. ಕಾಂಪ್ಲೆಕ್ಸ್‌ವರೆಗೆ, ಕವಳಿಗೆ, ಪೆಟ್ರೋಲ್ ಪಂಪ್, ಪ್ರವಾಸಿ ಮಂದಿರದವರೆಗೆ ನಾಲ್ಕು ದಿಕ್ಕುಗಳಲ್ಲಿ ಪಾರ್ಕಿಂಗ್ ರಹಿತ ವಲಯ ಎಂದು 2014ರಲ್ಲೇ ಘೋಷಣೆ ಮಾಡಿದ್ದರೂ, ಅದು ಆದೇಶದಲ್ಲಿ ಮಾತ್ರ ಉಳಿದಿದೆ. ನಾಲ್ಕು ಮಾರ್ಗ ವೃತ್ತ ವಿಸ್ತರಣೆ ಆಗಿದ್ದರೂ, ಇದು ಈಗ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದೆ. ಖಾಸಗಿ ಬಸ್‌ಗಳೂ ಅಲ್ಲಿ ಕೆಲಹೊತ್ತು ನಿಂತು ಹೋಗುತ್ತವೆ. ಪುತ್ತೂರು– ಸಾಲೆತ್ತೂರು ರಸ್ತೆಯಲ್ಲಿ ಪೊಲೀಸ್ ಠಾಣೆಯ ಪಕ್ಕದಲ್ಲೇ ಬಸ್ ಕೆಲವು ಹೊತ್ತು ನಿಂತು ಮುಂದಕ್ಕೆ ಹೋಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಪಟ್ಟಣ ಪಂಚಾಯಿತಿ ಎದುರು ಇರುವ ಖಾಸಗಿ ಬಸ್ ನಿಲ್ದಾಣದಿಂದ ಮಂಗಳೂರು, ಮುಡಿಪು, ಪುತ್ತೂರು, ಪೆರ್ಲ ಹೋಗುವ ಬಸ್‌ಗಳು ಹೊರಡುತ್ತವೆ. 15 ನಿಮಿಷದಿಂದ ಅರ್ಧಗಂಟೆಗೊಂದು ಬಸ್ ಹೊರಡುತ್ತದೆ. ಬಸ್ ನಿಲ್ದಾಣ ಜಾಗವೇ ಕಿರಿದಾಗಿದ್ದು, ಅಲ್ಲಿಯೇ ಪಕ್ಕದಲ್ಲಿ ರಿಕ್ಷಾ ನಿಲ್ದಾಣ, ಬಾಡಿಗೆ ಟ್ಯಾಕ್ಸಿ ನಿಲ್ಲುತ್ತವೆ. ದ್ವಿಚಕ್ರ ವಾಹನದಲ್ಲಿ ಬಂದವರೂ ಇಲ್ಲಿಯೇ ವಾಹನ ನಿಲ್ಲಿಸುತ್ತಾರೆ. ವಾಹನ ದಟ್ಟಣೆಯೇ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂಬುದು ಅವರ ಅಳಲು.
‘ಕಂದಾಯ ಇಲಾಖೆ ದಾಖಲೆಯಲ್ಲಿ ಈ ರಸ್ತೆಗೆ ‘ಗಾಡಿ ರಸ್ತೆ’ ಎಂಬ ಉಲ್ಲೇಖ ಇದೆ. ಗಾಡಿ ಹೋಗುತ್ತಿದ್ದ ಕಾಲದಲ್ಲಿ ನಿರ್ಮಿಸಿದ ರಸ್ತೆ ವಿಸ್ತರಣೆ ಆಗಿಲ್ಲ. ಐದಾರು ವರ್ಷಗಳ ಹಿಂದೆ ಒಮ್ಮೆ ವಿಟ್ಲ ಪೇಟೆಯಲ್ಲಿ ರಸ್ತೆಗಳ ವಿಸ್ತರಣೆ ಕೈಗೆತ್ತಿಕೊಂಡರೂ, ರಾಜಕೀಯದಲ್ಲಿ ಅದು ಮೊಟಕುಗೊಂಡಿದೆ. ಗ್ರಾಮ ಪಂಚಾಯಿತಿ ಇದ್ದ ವಿಟ್ಲದಲ್ಲಿ ಈಗ ಪಟ್ಟಣ ಪಂಚಾಯಿತಿ ಇದೆ. ಜನಸಂಖ್ಯೆ, ವಾಹನ ಸಂಖ್ಯೆ ಎರಡೂ ಹೆಚ್ಚಳವಾಗಿದೆ. ಅಂಗಡಿಗಳು ಮುಂದಕ್ಕೆ ಬಂದಿವೆ. ಅಧಿಕಾರಿಗಳು ಭೂ ಪರಿಹಾರ ನಿಗದಿಪಡಿಸಿ, ರಸ್ತೆ ವಿಸ್ತರಣೆ ಬಗ್ಗೆ ಕ್ರಮ ವಹಿಸಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು.
‘ಬಹುತೇಕ ಶಾಲೆ, ಕಾಲೇಜುಗಳು ಸಾಲೆತ್ತೂರು ರಸ್ತೆಯಲ್ಲಿವೆ. ಸರ್ಕಾರಿ ಕಚೇರಿಗಳೂ ಇದೇ ರಸ್ತೆಯಲ್ಲಿವೆ. ಶಾಲೆ ಬಿಡುವ ವೇಳೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಕೆಲವೊಮ್ಮೆ 50 ಮೀಟರ್ ರಸ್ತೆಯಲ್ಲಿ ವಾಹನದಲ್ಲಿ ಹೋಗಲು 15–20 ನಿಮಿಷ ಬೇಕಾಗುತ್ತದೆ. ಹೆಲ್ಮೆಟ್ ಹಾಕದವರನ್ನು ಕಾದು ನಿಂತು ದಂಡ ವಿಧಿಸುವ ಪೊಲೀಸರಿಗೆ ಸಂಚಾರ ನಿಯಂತ್ರಿಸಲು ಸಾಧ್ಯವಾಗುವುದಿಲ್ಲವೇ’ ಎಂದು ಹೆಸರು ಹೇಳಲಿಚ್ಛಿಸದ ವ್ಯಾಪಾರಿಯೊಬ್ಬರು ಪ್ರಶ್ನಿಸಿದರು.
‘ಹಿಂದೆ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೆ, ವಾಹನಕ್ಕೆ ಲಾಕ್ ಹಾಕಿ ಹೋಗುತ್ತಿದ್ದರು. ಈಗ ಅದೂ ಜಾರಿಯಲ್ಲಿ ಇಲ್ಲ. ವಾಹನಗಳ ಕಿರಿಕಿರಿ ಸಾಕಾಗಿದೆ’ ಎನ್ನುತ್ತ ಗೊಣಗಿಕೊಂಡು ಹೋದರು ಪಿಗ್ಮಿ ಸಂಗ್ರಾಹಕ ಶಶಿಧರ್.
‘ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ಪಟ್ಟಣದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಆದರೆ, ರಸ್ತೆ ವಿಸ್ತರಣೆ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಾಲ ನಾಯ್ಕ ತಿಳಿಸಿದರು.
ಪೂರಕ ಮಾಹಿತಿ: ಮಹಮ್ಮದ್ ಅಲಿ
ಇದೇ ರೀತಿ ಅಂಗಡಿ ವಾಹನಗಳು ಹೆಚ್ಚುತ್ತಿದ್ದರೆ ಇನ್ನು ನಾಲ್ಕೈದು ವರ್ಷಗಳಲ್ಲಿ ವಿಟ್ಲದಲ್ಲಿ ನಡೆದುಕೊಂಡು ಹೋಗಲೂ ಕಷ್ಟವಾಗುವ ಪರಿಸ್ಥಿತಿ ಬರಬಹುದು.- ಶ್ರೀಧರ ಶೆಟ್ಟಿ ಬೈಲುಗುತ್ತು ರೈತ ಸಂಘ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ
ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಿದರೆ ಶಾಲೆ– ಕಾಲೇಜು ಬಿಡುವ ವೇಳೆಯಲ್ಲಿ ನಿಗಾವಹಿಸಿದರೆ ಸಂಚಾರ ನಿಯಂತ್ರಣ ಸಾಧ್ಯವಾಗುತ್ತದೆ.ವಿಜಯಲಕ್ಷ್ಮಿ ಅರುಣ್ ವಿಟ್ಲ ಸ್ಥಳೀಯ ಮಹಿಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.