ವಿಟ್ಲ: ಬಸ್ಸಿನಲ್ಲಿ ಪರಿಚಿತ ವಿದ್ಯಾರ್ಥಿನಿ ಜತೆ ಮಾತನಾಡಿ, ಆಕೆಗೆ ಚಾಕಲೇಟ್ ನೀಡಲು ಮುಂದಾದ ಬೇರೆ ಧರ್ಮದ ವಿದ್ಯಾರ್ಥಿಯೊಬ್ಬನಿಗೆ ಕಿಡಿಗೇಡಿಗಳ ತಂಡವೊಂದು ವೀರಕಂಬ ಗ್ರಾಮದ ಕೆಲಿಂಜ ಎಂಬಲ್ಲಿ ಗುರುವಾರ ಹಲ್ಲೆ ನಡೆಸಿದೆ.
ವೀರಕಂಬ ಗ್ರಾಮದ ಮಂಗಳಪದವು ನಿವಾಸಿ ಮಹಮ್ಮದ್ ಶಾಕೀರ್ ನೀಡಿದ ದೂರಿನಂತೆ ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್, ರೋಹಿತ್ ಹಾಗೂ ಇತರ 3 ಮೂವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮಂಗಳೂರಿನ ಬಲ್ಮಠದ ಪದವಿ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ಶಾಕೀರ್ ಗುರುವಾರ ಕಾಲೇಜಿನಿಂದ ಮನೆಗೆ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಮನೆಗೆ ಮರಳುತ್ತಿದ್ದರು. ಪಕ್ಕದ ಸೀಟಿನಲ್ಲಿ ಕುಳಿತಿದ್ದ ಪರಿಚಯದ ವಿದ್ಯಾರ್ಥಿನಿಯನ್ನು ಮಾತನಾಡಿಸಿ, ಆಕೆಗೆ ಚಾಕಲೇಟು ಬೇಕೇ ಎಂದು ಕೇಳಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ವೀರಕಂಬ ಗ್ರಾಮದ ಕೆಲಿಂಜ ಎಂಬಲ್ಲಿಗೆ ಬಸ್ ತಲುಪಿದಾಗ ಬಸ್ಸಿನಲ್ಲಿದ್ದ ಆರೋಪಿಗಳಾದ ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್, ರೋಹಿತ್ ಹಾಗೂ ಇತರ ಮೂವರು ಹಲ್ಲೆ ನಡೆಸಿದ್ದಾರೆ ಎಂದು ಶಾಕೀರ್ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಿಂಗಳಿನಿಂದ ಈಚೆಗೆ ಮತೀಯ ಗೂಂಡಾಗಿರಿಗೆ ಸಂಬಂಧಿಸಿದ 10ಕ್ಕೂ ಅಧಿಕ ಪ್ರಕರಣಗಳು ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.