ಮಂಗಳೂರು: ‘ರಾಜ್ಯದಲ್ಲಿ ರೈತರ ಜಮೀನುಗಳನ್ನು ಆಕ್ರಮಿಸುತ್ತಿರುವ ಆರೋಪವನ್ನು ಎದುರಿಸುತ್ತಿರುವ ವಕ್ಫ್ ಮಂಡಳಿಯ ನಡೆಯನ್ನು ಖಂಡಿಸಿ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ಪುರಭವನದ ಎದುರಿನ ಮಹಾತ್ಮ ಗಾಂಧೀಜಿ ಪ್ರತಿಮೆಯ ಬಳಿ ಇದೇ 22ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ‘ ‘ನಮ್ಮ ಭೂಮಿ– ನಮ್ಮ ಹಕ್ಕು’ ಘೋಷವಾಕ್ಯದಡಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು,‘ನಮಗೆ ಬಂದ ಮಾಹಿತಿ ಪ್ರಕಾರ ಮಂಗಳೂರು ತಾಲ್ಲೂಕಿನಲ್ಲಿ ಇದುವರೆಗೆ ಕಂದಾಯ ಇಲಾಖೆಯ 30 ಎಕರೆಗಳಷ್ಟು ಜಮೀನನ್ನು ವಕ್ಫ್ ಮಂಡಳಿಗೆ ವರ್ಗಾಯಿಸಲಾಗಿದೆ. ವಕ್ಫ್ ಮಂಡಳಿಯು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಆರೋಪದ ಕುರಿತು ಪರಿಶೀಲಿಸಲು ಪಕ್ಷದ ಮುಖಂಡ ಮೋನಪ್ಪ ಭಂಡಾರಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ. ಸಮಿತಿಯಲ್ಲಿ ಅನೇಕ ವಕೀಲರೂ ಇದ್ದಾರೆ. ಯಾವ ಅವಧಿಯಲ್ಲಿ ಈ ಹಸ್ತಾಂತರ ನಡೆದಿದೆ ಎಂಬುದನ್ನು ಸಮಿತಿಯು ಪರಿಶೀಲನೆ ನಡೆಸುತ್ತಿದೆ.ಇಡೀ ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಹಂಚಿಕೆಯಾದ ಜಮೀನಿನ ಬಗ್ಗೆ ಇದೇ ಮಾದರಿಯಲ್ಲಿ ವರದಿ ತಯಾರಿಸಿ ಪಕ್ಷದ ರಾಜ್ಯ ಘಟಕಕ್ಕೆ ಸಲ್ಲಿಸಲಿದ್ದೇವೆ’ ಎಂದರು.
‘ತಮ್ಮ ಪಹಣಿಯನಲ್ಲಿ ವಕ್ಫ್ ಮಂಡಳಿಯ ಹೆಸರು ಇದೆಯೇ ಎಂದು ಪರಿಶೀಲಿಸುವಂತೆ ರೈತರು, ಮಠಗಳು, ದೇವಸ್ಥಾನಗಳು, ಭಜನಾ ಮಂದಿರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರು ಹಾಗು ವಿಧಾನ ಪರಿಷತ್ ಸದಸ್ಯರು, ಹಿಂದೂ ಸ್ಮಶಾನಗಳ ಸಮಿತಿ ಸದಸ್ಯರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
‘ಸರ್ಕಾರವು ಬಿಪಿಎಲ್ ಪಡಿತರ ಚೀಟಿಗಳನ್ನು ನೋಟಿಸ್ ನೀಡದೆಯೇ ರದ್ದುಪಡಿಸುತ್ತಿದೆ. ಬಡವರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಸವಲತ್ತು ಸಿಗದಂತೆ ಮಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸಂಗೀತಾ ಆರ್.ನಾಯಕ್, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ರಾವ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.