ADVERTISEMENT

ಕಸ ಎಸೆಯುವವರ ಪತ್ತೆಗೆ ಕ್ಯಾಮೆರಾ

ತ್ಯಾಜ್ಯ ನಿರ್ವಹಣೆಯಲ್ಲಿ ಜಿಲ್ಲೆಯ ಎರಡನೇ ಮಾದರಿ ಗ್ರಾಮ ಮುನ್ನೂರು

ಮೋಹನ್ ಕುತ್ತಾರ್
Published 13 ಮಾರ್ಚ್ 2022, 3:41 IST
Last Updated 13 ಮಾರ್ಚ್ 2022, 3:41 IST
ಮುನ್ನೂರು ಗ್ರಾಮದ ಭಂಡಾರಬೈಲಿನಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕ
ಮುನ್ನೂರು ಗ್ರಾಮದ ಭಂಡಾರಬೈಲಿನಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕ   

ಉಳ್ಳಾಲ: ಅಕ್ರಮವಾಗಿ ತ್ಯಾಜ್ಯ ಎಸೆಯು ವವರನ್ನು ಪತ್ತೆ ಹಚ್ಚಲು ಸೋಲಾರ್ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕ್ರಮ ಕೈಗೊಳ್ಳುವ ಮೂಲಕ ಸ್ವಚ್ಛ ಭಾರತ್ ಮಿಷನ್‌ ಮೂಲ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಮುನ್ನೂರು ಗ್ರಾಮ ಪಂಚಾಯಿತಿ ಯತ್ನಿಸುತ್ತಿದೆ.

ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ಈ ಪಂಚಾ ಯಿತಿಯ ಹೆಸರು ಕೇಂದ್ರ ಸರ್ಕಾರ ನೀಡುವ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡಿದೆ. ತ್ಯಾಜ್ಯ ನೀರಿಗೆ ಇಂಗುಗುಂಡಿ ರಚನೆ, ಒಂದು ಎಕರೆ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರ, ಶಾಲೆ ಆವರಣದಲ್ಲಿ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಪೈಪ್ ಕಾಂಪೋಸ್ಟ್‌ ಮೂಲಕ ತ್ಯಾಜ್ಯವನ್ನು ನಿರ್ವಹಿಸಿ, ಅದನ್ನು ಗೊಬ್ಬರವಾಗಿ ಶಾಲಾ ಹೂತೋಟಕ್ಕೆ ಬಳಸಲಾಗುತ್ತಿದೆ. ಗ್ರಾಮದಲ್ಲಿ ಸ್ವಚ್ಛತಾ ನೀತಿ ಅನುಷ್ಠಾನ ಕುರಿತು ಪ್ರತಿ ವಾರ್ಡ್‌ನಲ್ಲಿ ಸಭೆ, ಪಂಚಾಯಿತಿ ಸದಸ್ಯರಿಗೆ ಮಾಹಿತಿ ಕಾರ್ಯಗಾರ, ತ್ಯಾಜ್ಯ ವಿಲೇವಾರಿ ಹಾಗೂ ವಿಂಗಡಣೆ ಕುರಿತು ವಿದ್ಯಾರ್ಥಿ
ಗಳಿಗೆ ಮಾಹಿತಿ ಶಿಬಿರಗಳನ್ನು ನಡೆಸಿ ಜಾಗೃತಿ ಮೂಡಿಸಲಾಗಿದೆ.

ADVERTISEMENT

ಭಂಡಾರಬೈಲು ಪ್ರದೇಶದಲ್ಲಿ ಮತ್ತೊಂದು ತ್ಯಾಜ್ಯ ಘಟಕ ನಿರ್ಮಾಣಕ್ಕೆ ಒಂದು ಎಕೆರೆ ಪ್ರದೇಶ ಮಂಜೂರಾಗಿದೆ. ಇಲ್ಲಿ 50 ಸೆಂಟ್ಸ್ ಪ್ರದೇಶದಲ್ಲಿ ದ್ರವ ತ್ಯಾಜ್ಯ ಹಾಗೂ ಶೌಚ ರಿಸೈಕ್ಲಿಂಗ್ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಜಿರೆಯ ನಂತರ ಸುಸಜ್ಜಿತ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯಲ್ಲಿ ಮುನ್ನೂರು ಎರಡನೇ ಸ್ಥಾನ ಪಡೆದಿದೆ.

ತ್ಯಾಜ್ಯ ನೀರಿನ ನಿರ್ವಹಣೆಗೆ ನರೇಗಾ ಮೂಲಕ 120 ಇಂಗುಗುಂಡಿ ತೆರೆಯುವ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ 65 ಕಡೆಗಳಲ್ಲಿ ಇಂಗುಗುಂಡಿ ಮಾಡಲಾಗಿದೆ. ಪ್ರತಿ ಇಂಗುಗುಂಡಿಗೆ ನರೇಗಾ ಯೋಜನೆಯಡಿ ₹ 17 ಸಾವಿರ ನೀಡಲಾಗುತ್ತಿದೆ. ಮುಂದೆ 15ನೇ ಹಣಕಾಸು ಯೋಜನೆಯಡಿ ಮದನಿ ನಗರ ಮತ್ತು ಸಂತೋಷನಗರದಲ್ಲಿ ಸರ್ಕಾರಿ ಜಾಗದಲ್ಲಿ ಸಾಮೂಹಿಕ ಇಂಗುಗುಂಡಿ ರಚನೆಗೆ ಯೋಜನೆ ರೂಪಿಸಲಾಗಿದೆ.

ದಾರಿದೀಪದ ಜತೆಗೆ ಸೋಲಾರ್ ಸಿಸಿಟಿವಿ ಕ್ಯಾಮೆರಾಗಳನ್ನು ಮೂರು ಕಡೆ ಅಳವಡಿಸಲಾಗಿದೆ. ಇದರಿಂದ ಹೊರಗಿನ ಗ್ರಾಮದವರು, ಹೋಟೆಲ್‌ನವರು ಗ್ರಾಮದ ರಸ್ತೆಬದಿಯಲ್ಲಿ ಬಿಸಾಡುವ ತ್ಯಾಜ್ಯಕ್ಕೆ ಮುಕ್ತಿ ಸಿಕ್ಕಿದೆ. ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತಿದೆ.

‘ನಮ್ಮ ಮನೆಯಲ್ಲಿ ಇಂಗುಗುಂಡಿ, ಪೈಪ್ ಕಾಂಪೋಸ್ಟ್ ಮಾಡಿ ನಂತರ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದ್ದೇನೆ. ಎರಡು ಕಡೆಗಳಲ್ಲಿ ಕಮ್ಯುನಿಟಿ ಕಾಂಪೋಸ್ಟ್‌ಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ತ್ಯಾಜ್ಯ ಘಟಕಕ್ಕೆ
ಮಂಜೂರಾದ ಒಂದು ಎಕರೆ ಪ್ರದೇಶದಲ್ಲಿ ಎಸ್‍ಬಿಎಂ ಮೂಲಕ ನೂತನ ತಂತ್ರಜ್ಞಾನದ ತ್ಯಾಜ್ಯ ಘಟಕ, ಬೂದಿ ನೀರು, ಕಪ್ಪು ನೀರು ಬದಲಾಯಿಸುವಿಕೆ, ಸೇರಿದಂತೆ ಆಧುನಿಕ ವ್ಯವಸ್ಥೆಯನ್ನು ಅಳವಡಿಸುವ ಕೇಂದ್ರ ಸರ್ಕಾರದ ₹ 1 ಕೋಟಿ ವೆಚ್ಚದ ಯೋಜನೆ ಪ್ರಗತಿಯಲ್ಲಿದೆ.
ಗಡಿ ಗುರುತಿಗೆ ಸರ್ವೆ ಇಲಾಖೆಯ ವಿಳಂಬ ಧೋರಣೆ ಯೋಜನೆಯ ಅನುಷ್ಠಾನಗೊಳಿಸಲು ಕಷ್ಟವಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಪ್ರತಿಕ್ರಿಯಿಸಿದರು.

‘ತ್ಯಾಜ್ಯ ನೀರನ್ನು ರಸ್ತೆಗೆ ಬಿಡುವ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬಹಳಷ್ಟು
ಮಂದಿ ಇಂಗು ಗುಂಡಿಯತ್ತ ಒಲವು ತೋರಿಸಿದ್ದಾರೆ. ಗ್ರಾಮದ ಸ್ವಚ್ಛತೆಯ ಯಶಸ್ಸಿಗೆ ಎಲ್ಲ ಸಹಕಾರ
ಇದೆ’ ಎಂದು ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ ನಾಯಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.