ಮಂಗಳೂರು: ‘ನಾವು ಬೆಳಿಗ್ಗೆ 4 ಗಂಟೆಗೆ ಎದ್ದು ಕೆಲಸ ಶುರು ಮಾಡಬೇಕಾಗುತ್ತದೆ. ರಾತ್ರಿ ಮಲಗುವಾಗ 11 ಗಂಟೆಯಾಗುತ್ತದೆ. ತಿಂಗಳು ಪೂರ್ತಿ ಬಿಡುವಿಲ್ಲದೇ ದುಡಿದರೂ ಸಮಯಕ್ಕೆ ಸರಿಯಾಗಿ ಸಂಬಳ ಕೈಸೇರುವುದಿಲ್ಲ. ನಮಗೆ ಸಂಬಳ ಆಗಿಯೇ ಮೂರು ತಿಂಗಳಾಯಿತು...’
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿ ತಮ್ಮ ಪಗಾರದ ಸಮಸ್ಯೆ ಹೇಳಿಕೊಂಡಿದ್ದು ಹೀಗೆ.
‘ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲೂ ಇದೇ ಸಮಸ್ಯೆ ಇತ್ತು. ಸರ್ಕಾರ ಬದಲಾದರೂ ನಮ್ಮ ಗೋಳು ತಪ್ಪಿಲ್ಲ. ಜುಲೈ ತಿಂಗಳ ಸಂಬಳವನ್ನು ಹತ್ತು ದಿನಗಳ ಹಿಂದೆ ಕೊಟ್ಟರು. ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಸಂಬಳ ಇನ್ನೂ ಕೈಸೇರಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳ ಬೇಕು– ಬೇಡಗಳನ್ನು ನೋಡಿಕೊಳ್ಳುವ ನಾವು ನಮ್ಮ ಹೆಂಡತಿ ಮಕ್ಕಳ ಕಷ್ಟ ಸುಖದ ಬಗ್ಗೆಯೂ ಗಮನ ಹರಿಬೇಕಲ್ಲವೇ’ ಎಂದು ಮಂಗಳೂರು ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಸಿಬ್ಬಂದಿಯೊಬ್ಬರು ಪ್ರಶ್ನಿಸಿದರು.
‘ಭವಿಷ್ಯನಿಧಿ, ಇಪಿಎಫ್ ಕಡಿತಗೊಳಿಸಿ ನಮಗೆ ಕೈಗೆ ಸಿಗುವುದು ತಿಂಗಳಿಗೆ ₹ 15,700 ಮಾತ್ರ. ಈಗಿನ ಬೆಲೆ ಏರಿಕೆಯ ದಿನಗಳಲ್ಲಿ ಇದು ಯಾವುದಕ್ಕೂ ಸಾಲದು. ಈ ಮೊತ್ತವನ್ನೂ ಸರಿಯಾದ ಸಮಯಕ್ಕೆ ಪಾವತಿಸದಿದ್ದರೆ ನಾವು ಬದುಕುವುದಾದರೂ ಹೇಗೆ’ ಎಂದರು.
‘ನಾನು ₹3 ಲಕ್ಷ ಸಾಲ ಮಾಡಿದ್ದೆ. ತಿಂಗಳಿಗೆ ₹7 ಸಾವಿರ ಅದರ ಕಂತು ಕಟ್ಟಬೇಕು. ಕಂತು ಕಟ್ಟುವುದು ತಡವಾದರೆ ವಿಪರೀತ ಬಡ್ಡಿಹಾಕುತ್ತಾರೆ. ವರ್ಷಕ್ಕೆ ನನಗೆ ₹3 ಸಾವಿರದಷ್ಟು ಹಣ ಹೆಚ್ಚುವರಿ ಬಡ್ಡಿ ಪಾವತಿಗೆ ಹೋಗುತ್ತಿದೆ’ ಎಂದು ಮತ್ತೊಬ್ಬರು ಸಿಬ್ಬಂದಿ ಸಮಸ್ಯೆ ಹೇಳಿಕೊಂಡರು.
ಹಾಸ್ಟೆಲ್‌ಗಳ ಅಡುಗೆ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ವೇತನ ಪಾವತಿ ವಿಳಂಬವಾಗಿರುವುದನ್ನು ಇಲಾಖೆಯ ಅಧಿಕಾರಿಗಳೂ ಒಪ್ಪಿಕೊಳ್ಳುತ್ತಾರೆ. ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾಗಿದ್ದರಿಂದ ಸಮಸ್ಯೆಯಾಗಿದೆ. 2023–24ನೇ ಸಾಲಿನ ₹ 1.80 ಕೋಟಿ ಅನುದಾನ 2024–25ನೇ ಸಾಲಿನಲ್ಲಿ ಬಿಡುಗಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲಾಖೆಯ 78 ವಿದ್ಯಾರ್ಥಿನಿಲಯಗಳಿವೆ. ಅವುಗಳಲ್ಲಿ ಸುಮಾರು 7 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಈ ಹಾಸ್ಟೆಲ್‌ಗಳ ನಿರ್ವಹಣೆಗೆ 2024–25ನೇ ಸಾಲಿಗೆ ₹ 7 ಕೋಟಿ ಬೇಕು ಎಂದು ಜಿಲ್ಲೆಯಿಂದ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ, ಮಂಜೂರಾಗಿದ್ದು ₹ 3.5 ಕೋಟಿ ಮಾತ್ರ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ಸಂಖ್ಯೆ ಹೆಚ್ಚು ಇದೆ. ಹೆಚ್ಚುವರಿ ಅನುದಾನ ನೀಡದಿದ್ದರೆ ಹಾಸ್ಟೆಲ್‌ಗಳ ನಿರ್ವಹಣೆ ಬಹಳ ಕಷ್ಟವಾಗುತ್ತದೆ ಎಂದು ಇಲ್ಲಿನ ಅಧಿಕಾರಿಗಳು ಮನವರಿಕೆ ಮಾಡಿದ ಬಳಿಕ, ₹ 1.5 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಲು ಇಲಾಖೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆದರೆ ಈ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿಗೆ ವೇತನ ವಿಳಂಬದ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ, ‘ಅಡುಗೆ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಸಂಬಳ ಪಾವತಿ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಧಿಕಾರಿಗಳ ಜೊತೆ ಹಾಗೂ ಗುತ್ತಿಗೆ ಏಜೆನ್ಸಿಯಾಗಿರುವ ಪ್ರೈವೇಟ್ ಎಂಪ್ಲಾಯೀಸ್ ಬ್ಯೂರೊದವರ ಜೊತೆ ಮಾತನಾಡಿದ್ದೇನೆ. ಒಂದೆರಡು ವಾರಗಳಲ್ಲಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.