ADVERTISEMENT

ಯುವಜನರಲ್ಲಿ ಮತಾಂಧತೆ ಹೆಚ್ಚಿಸಲು ಭ್ರಮೆಯ ಜಾಲ: ನ್ಯಾ. ನಾಗಮೋಹನದಾಸ್‌ ಕಳವಳ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 4:21 IST
Last Updated 26 ಫೆಬ್ರುವರಿ 2024, 4:21 IST
ಸಮ್ಮೇಳನವನ್ನು ನ್ಯಾ.ನಾಗಮೋಹನದಾಸ್‌ ಅವರು ಡೋಲು ಬಡಿಯುವ ಮೂಲಕ ಉದ್ಘಾಟಿಸಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ.ಬಿ.ಇಬ್ರಾಹಿಂ, ಡಿವೈಎಫ್‌ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ಕಾರ್ಯದರ್ಶಿ ಬಸವರಾಜ ಪೂಜಾರ್‌, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಬಜಾಲ್‌ ಮತ್ತಿತರರು ಭಾಗವಹಿಸಿದ್ದರು
ಸಮ್ಮೇಳನವನ್ನು ನ್ಯಾ.ನಾಗಮೋಹನದಾಸ್‌ ಅವರು ಡೋಲು ಬಡಿಯುವ ಮೂಲಕ ಉದ್ಘಾಟಿಸಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ.ಬಿ.ಇಬ್ರಾಹಿಂ, ಡಿವೈಎಫ್‌ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ಕಾರ್ಯದರ್ಶಿ ಬಸವರಾಜ ಪೂಜಾರ್‌, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಬಜಾಲ್‌ ಮತ್ತಿತರರು ಭಾಗವಹಿಸಿದ್ದರು   

‘ಯುವಜನರನ್ನು ದೇಶ ಕಟ್ಟಲು ಬಳಸಿಕೊಳ್ಳದೇ ಹೋದರೆ, ಇನ್ಯಾರೋ ಅವರನ್ನು ದೇಶ ಒಡೆಯುವ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಮತಾಂಧತೆ ಹೆಚ್ಚಿಸಲು ಅವರಲ್ಲಿ ಭ್ರಮೆಗಳನ್ನು ಬಿತ್ತುತ್ತಾರೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಹೇಳಿದರು.ಉಳ್ಳಾಲ (ದಕ್ಷಿಣ ಕನ್ನಡ): ‘ಯುವಜನರನ್ನು ದೇಶ ಕಟ್ಟಲು ಬಳಸಿಕೊಳ್ಳದೇ ಹೋದರೆ, ಇನ್ಯಾರೋ ಅವರನ್ನು ದೇಶ ಒಡೆಯುವ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಮತಾಂಧತೆ ಹೆಚ್ಚಿಸಲು ಅವರಲ್ಲಿ ಭ್ರಮೆಗಳನ್ನು ಬಿತ್ತುತ್ತಾರೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಹೇಳಿದರು.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೇಡರೇಷನ್ (ಡಿವೈಎಫ್ಐ)ನ ರಾಜ್ಯ ಮಟ್ಟದ ಮೂರು ದಿನಗಳ ಸಮ್ಮೇಳನವನ್ನು ಭಾನುವಾರ ಇಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

'ದೇಶದಲ್ಲಿ ನಿರುದ್ಯೋಗ ಸಮಸ್ಯೆ 50 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೇರಿದೆ. ಯುವಜನರು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ 21ರಷ್ಟು ಮಂದಿಗೆ ಶಿಕ್ಷಣವೇ ಮರೀಚಿಕೆಯಾಗಿದೆ.  ಶೇ 73ರಷ್ಟು ಮಂದಿಗೆ ಉನ್ನತ ಶಿಕ್ಷಣ ಸಿಗುತ್ತಿಲ್ಲ. ಶೇ 33ರಷ್ಟು ಮಂದಿಗೆ ವಸತಿ ಇಲ್ಲ. ಶೇ 40ರಷ್ಟು ಮಂದಿ ಕೌಟುಂಬಿಕ‌ ಸಮಸ್ಯೆ, ಮಾನಸಿಕ‌ ಒತ್ತಡಗಳಿಗೆ ಸಿಲುಕಿದ್ದಾರೆ. ಅವರ ಬುದ್ಧಿ ವಿಕಾಸಕ್ಕೂ ಅವಕಾಶಗಳೇ ಇಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಯುವಜನರು ಪ್ರತಿಭಟಿಸುತ್ತಿಲ್ಲ. ಏಕೆಂದರೆ ಅವರನ್ನು ಭ್ರಮೆಯ ಜಾಲದಲ್ಲಿ ಸಿಲುಕಿಸಲಾಗಿದೆ. ಅವರಲ್ಲಿ ಅರ್ಹತೆ ಇಲ್ಲ ಎಂದು ಜಾಹೀರು ಮಾಡಲಾಗುತ್ತಿದೆ. ಕೆಲಸ ಕೊಟ್ಟಂತೆ ಮಾಡಿ, ತಕ್ಕ ಸವಲತ್ತು ನೀಡದೇ ಅವರ ಶ್ರಮವನ್ನು ದೋಚಲಾಗುತ್ತಿದೆ. ಈ ಜಾಲದಲ್ಲಿ ಯುವಜನರನ್ನು ಸಿಲುಕಿಸಿದವರೇ ದೊಡ್ಡ ಜನರಂತೆ ಮೆರೆಯುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ನಿವೃತ್ತ ಐಎಎಸ್‌ ಅಧಿಕಾರಿ ಎ.ಬಿ.ಇಬ್ರಾಹಿಂ, ‘ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ‌ವು ದಶಕದಿಂದ ಈಚೆಗೆ ನಡೆಯುತ್ತಿದೆ. ಚಾತುರ್ವರ್ಣ ಜಾತಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರುವ ಷಡ್ಯಂತ್ರವಿದು. ಇದನ್ನು ಹಿಮ್ಮೆಟ್ಟಿಸಬೇಕಾದರೆ ಈ ಪಿತೂರಿ ಮಾಡುವವರ ವಿರುದ್ಧ ಜನರಲ್ಲಿ ತಿಳಿವಳಿಕೆ ಮೂಡಿಸುವ ಚಳವಳಿಯನ್ನು ನಿರಂತರ ಮುನ್ನಡೆಸಬೇಕು’ ಎಂದರು. ‌

ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಇದೇ 27ರಂದು ಸಮ್ಮೇಳನ ಸಮಾರೋಪ ನಡೆಯಲಿದ್ದು ಸಿಪಿಎಂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹಾಗೂ ನಟ ಪ್ರಕಾಶ್‌ ರಾಜ್‌ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.