ಮಂಗಳೂರು: ‘ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ಹಿಂದೆ ಎಸ್‌ಎಸ್‌ಎಸ್‌ಸಿ ಪರೀಕ್ಷೆ ವೇಳೆ ಸಾಮೂಹಿಕ ನಕಲು ನಡೆಯುತ್ತಿದ್ದುದು ನಿಜ. ಪರೀಕ್ಷೆ ಕೊಠಡಿಯಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೆ ನಾವು ವಿಧಾನ ಪರಿಷತ್ತಿನಲ್ಲಿ ಒತ್ತಾಯಿಸಿದ್ದರಿಂದ ಈ ಪರಿಪಾಟಕ್ಕೆ ಕಡಿವಾಣ ಬಿದ್ದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಅರ್ಹವಾಗಿ ಮೊದಲ ಎರಡು ಸ್ಥಾನಗಳನ್ನು ಗಳಿಸಿವೆ’ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್– ಬಿಜೆಪಿ ಮೈತ್ರಿ ಕೂಟದ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಭರವಸೆ ನೀಡಿ ಅಧಿಕಾರ ಪಡೆದ ಕಾಂಗ್ರೆಸ್, ವಾಗ್ದಾನವನ್ನು ಮರೆತಿದೆ. ೀ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ. ಖಾಸಗಿ ಹಾಗೂ ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣದ ನಿಯಮಗಳನ್ನೂ ಸಡಿಲಗೊಳಿಸುವ ಅಗತ್ಯವಿದೆ. ಶಾಲಾ ಶಿಕ್ಷಕರ ನೇಮಕಾತಿ ನನೆಗುದಿಗೆ ಬಿದ್ದಿದ್ದು, ಇದು ಶಿಕ್ಷಣದ ಗುಣಮಟ್ಟದ ಮಲೆ ಪರಿಣಾಮ ಬೀರುತ್ತಿದೆ’ ಎಂದರು.
‘ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವ ಬಿಜೆಪಿಯ ಮುಖಂಡರನ್ನು ವರಿಷ್ಠರು ಮನವೊಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಉಚಿತ ಶಿಕ್ಷಣ ಹಾಗೂ ಉಚಿತ ಆರೋಗ್ಯ ಪ್ರಜೆಗಳ ಹಕ್ಕು. ಸರ್ಕಾರ ಒಂದಾದರೂ ಮಾದರಿ ಶಾಲೆಯನ್ನು ರೂಪಿಸಿ ತೋರಿಸಲಿ’ ಎಂದು ಸವಾಲು ಹಾಕಿದರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ‘ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ನಾನು ಆರ್‌ಎಸ್‌ಎಸ್‌ನಲ್ಲಿ ಸಕ್ರಿಯನಾಗಿದ್ದೆ. 36 ವರ್ಷಗಳಿಂದ ಸಂಘಟನೆಯ ಜೊತೆಯಲ್ಲಿದ್ದೇನೆ. ಬಿಜೆಪಿಯ ಹಿರಿಯ ನಾಯಕರು ಸಮಾಲೋಚನೆ ನಡೆಸಿಯೇ ನನಗೆ ಟಿಕೆಟ್ ನೀಡಿದ್ದು, ಗೆಲ್ಲುವ ವಿಶ್ವಾಸವಿದೆ’ ಎಂದರು.
‘ಶಿವಮೊಗ್ಗದಲ್ಲಿ ಹರ್ಷ ಕೊಲೆ ನಡೆದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮತ್ತು ಸಾರ್ವಕರ್ ಅವರನ್ನು ವಿರೋಧಿಸುವ ಪಕ್ಷಗಳ ಜೊತೆ ಧನಂಜಯ ಸರ್ಜಿ ಶಾಂತಿ ಮೆರವಣೀಗೆ ನಡೆಸಿದ್ದರು’ ಎಂದು ಬಿಜೆಪಿಯ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಮಾಡಿದ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸರ್ಜಿ, ‘ಗಲಭೆಯಿಂದಾಗಿ ಉದ್ದಿಮೆಗಳೆಲ್ಲ ಮುಚ್ಚಿದ್ದಾಗ ವಿವಿಧ ಸಂಘಟನೆಗಳ ಜೊತೆ ಸೇರಿ ಹಮ್ಮಿಕೊಂಡಿದ್ದ ಶಾಂತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ನಿಜ. ಇದು ಬಿಜೆಪಿ ವರಿಷ್ಠರಿಗೂ ಗೊತ್ತಿದೆ. ಹರ್ಷ ಕುಟುಂಬವೂ ಚಿಕಿತ್ಸೆ ಪಡೆಯುತ್ತಿದ್ದುದು ನಮ್ಮ ಆಸ್ಪತ್ರೆಯಲ್ಲೇ. ನಮ್ಮ ಆಸ್ಪತ್ರೆಯಲ್ಲಿ ಅನೇಕ ಯೋಧರಿಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಕುಂಪಲ, ಪಕ್ಷದ ಮುಖಂಡರಾದ ದತ್ತಾತ್ರೇಯ, ಗಣೇಶ ಕಾರ್ಣಿಕ್, ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.