ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್‌ಗೆ ಬಂದ ಸಂದೇಶದಿಂದ ಭಾನುವಾರ ಗೊಂದಲ ಸೃಷ್ಟಿಯಾದ ಪ್ರಕರಣ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಇಂಡಿಗೊ ವಿಮಾನಯಾನ ಸಂಸ್ಥೆಯ ವ್ಯವಸ್ಥಾಪಕ ಕೆ.ಪಿ.ಬೋಪಣ್ಣ ಅವರು ಈ ಕುರಿತು ಭಾನುವಾರ ರಾತ್ರಿ ಠಾಣೆಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ 505 1 (ಸಿ) ಮತ್ತು 505 (1 ಬಿ) ಸೆಕ್ಷನ್‌ಗಳ ಅಡಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
’ನಮ್ಮ ವಿಮಾನಯಾನ ಸಂಸ್ಥೆಯ ಸಹೋದ್ಯೋಗಿ ಸಿನಾನ್ ಅವರು ಭಾನುವಾರ ಕರೆ ಮಾಡಿ, ಬೆಳಿಗ್ಗೆ 11ಕ್ಕೆ ಮುಂಬೈಗೆ ಹೋಗುವ ವಿಮಾನದಲ್ಲಿ (6ಇ–5237) ಅನುಮಾನಾಸ್ಪದ ವ್ಯಕ್ತಿ ಪ್ರಯಾಣಿಸುತ್ತಿರುವ ಮಾಹಿತಿ ಬಂದಿದೆ’ ಎಂದು ತಿಳಿಸಿದರು. ನಾನು ತಕ್ಷಣವೇ ವಿಮಾನನಿಲ್ದಾಣಕ್ಕೆ ಧಾವಿಸಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಹಾಗೂ ವಿಮಾನದಲ್ಲಿ ಅನುಮಾನಿತ ವ್ಯಕ್ತಿ ಇರುವುದಾಗಿ ಮಾಹಿತಿ ನೀಡಿದ್ದ ಪ್ರಯಾಣಿಕರಾದ ಸಿಮ್ರಾನ್ ಶೆಟ್ಟಿ ಅವರನ್ನು ವಿಚಾರಿಸಿದ್ದೆ. ಸಿಮ್ರಾನ್ ಶೆಟ್ಟಿ ಅವರ ಎದುರಿನ ಸೀಟಿನಲ್ಲಿ ಕುಳಿತು ಪ್ರಮಾಣಿಸುತ್ತಿದ್ದ ದಿಪಿಯಾನ್ ಮಾಜಿ ಎಂಬವರ ಮೊಬೈಲ್‌ಗೆ ಸಿಮ್ರಾನ್ ಟಾಮ್ ಎಂಬುವರು ವಾಟ್ಸ್‌ಆ್ಯಪ್‌ನಲ್ಲಿ ’Among all the muslims you are the bomber' ಎಂದು ಸಂದೇಶ ಕಳುಹಿಸಿದ್ದರು. ಅದಕ್ಕೆ ದಿಪಿಯಾನ್ ಅವರು 'Can you see me?, did you see the selute. So cute, have a safe flight' ಎಂದು ಅನುಮಾನಾಸ್ಪದವಾಗಿ ಸಂದೇಶ ಕಳುಹಿಸಿದ್ದ ವಿಚಾರ ತಿಳಿಯಿತು’ ಎಂದು ಬೋಪಣ್ಣ ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ಸಿಐಎಸ್‌ಎಫ್, ಬಾಂಬ್ ಪತ್ತೆ ಮತ್ತು ವಿಲೇವಾರಿ ವ್ಯವಸ್ಥೆ (ಬಿಡಿಡಿಎಸ್) ಇಂಡಿಗೊ ಸೆಕ್ಯುರಿಟಿ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ನೆರವಿನಿಂದ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ರವಾನಿಸಿ, ಪ್ರತಿಯೊಬ್ಬ ಪ್ರಯಾಣಿಕರ ಸ್ವತ್ತುಗಳನ್ನು ಸೂಕ್ಷ್ಮವಾಗಿ ತಪಾಸಣೆಗೆ ಒಳಪಡಿಸಿದ್ದೇವೆ. ಯಾವುದೇ ಅನುಮಾನಾಸ್ಪದ ಸ್ವತ್ತುಗಳು ಪತ್ತೆಯಾಗಿಲ್ಲ’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಿಪಿಯಾನ್ ಹಾಗೂ ಅವರಿಗೆ ಮಾಹಿತಿ ಕಳುಹಿಸಿದ ಸಿಮ್ರಾನ್ ಟಾಮ್ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಬೋಪಣ್ಣ ಒತ್ತಾಯಿಸಿದ್ದಾರೆ.
ದಿಪಿಯಾನ್ ಅವರಿಗೆ ಸಿಮ್ರಾನ್ ಟಾಮ್ ಅವರು ಕಳುಹಿಸಿದ ವಾಟ್ಸ್ ಆ್ಯಪ್ ಸಂದೇಶವನ್ನು ಸಿಮ್ರಾನ್ ಶೆಟ್ಟಿ ಅವರು ಇಣುಕಿ ನೋಡಿ ವಿಮಾನಯಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಕೆಲಕಾಲ ಗೊಂದಲದ ವಾತಾವರಣವನ್ನು ಸೃಷ್ಟಿಯಾಗಿತ್ತು. ಭಾನುವಾರ ಬೆಳಿಗ್ಗೆ 11ಕ್ಕೆ ಮುಂಬೈಗೆ ಹೊರಡಬೇಕಿದ್ದ ವಿಮಾನವು ಸಂಜೆ 5ಕ್ಕೆ ಹೊರಟಿತ್ತು. ವಿಮಾನದಲ್ಲಿ 186 ಪ್ರಯಾಣಿಕರಿದ್ದರು. ಪ್ರಯಾಣವು 6 ಗಂಟೆ ವಿಳಂಬವಾಗಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದ್ದರು.
‘ಸಹಪ್ರಯಾಣಿಕನಿಗೆ ಬಂದ ಸಂದೇಶವನ್ನು ಮಹಿಳೆ ಕದ್ದು ನೋಡಿದ ಬಗ್ಗೆ ಯಾರೂ ದೂರು ನೀಡಿಲ್ಲ. ಹಾಗಾಗಿ ಆಕೆ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.