ADVERTISEMENT

ಕಂಬಳ: ಮುಗಿಯುವುದೇ ಗೊಂದಲ?

ಮತ್ತೆ ನಿಯಮಾವಳಿ ಸಿದ್ಧ; ಮುಖ್ಯಮಂತ್ರಿ ಒಪ್ಪಿಗೆಗೆ ಕಾಯುತ್ತಿರುವ ಜಿಲ್ಲಾ ಸಮಿತಿ

ವಿಕ್ರಂ ಕಾಂತಿಕೆರೆ
Published 13 ಜುಲೈ 2024, 6:29 IST
Last Updated 13 ಜುಲೈ 2024, 6:29 IST
ಕಂಬಳ -ಪ್ರಜಾವಾಣಿ ಚಿತ್ರ
ಕಂಬಳ -ಪ್ರಜಾವಾಣಿ ಚಿತ್ರ   

ಮಂಗಳೂರು: ಕರಾವಳಿಯ ಅಸ್ಮಿತೆ ಕಂಬಳವನ್ನು ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಗೆ ಒಳಪಡಿಸುವ ಪ್ರಕ್ರಿಯೆ ‘ಸುದೀರ್ಘ’ ಅವಧಿ ಕಳೆದರೂ ಪೂರ್ಣಗೊಂಡಿಲ್ಲ. ಹೀಗಾಗಿ ಅನುದಾನ ಬಿಡುಗಡೆಯೂ ತಡವಾಗಿದೆ. ಹೊಸ ನಿಯಮಾವಳಿಗಳೊಂದಿಗೆ ಈಗ ಮತ್ತೊಮ್ಮೆ ಪ್ರಯತ್ನ ನಡೆಯುತ್ತಿದೆ.

ಕೃಷಿ ಚಟುವಟಿಕೆಯೊಂದಿಗೆ ಮಿಳಿತವಾಗಿರುವ ಅಪ್ಪಟ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ನೂತನ ದಾಖಲೆಗಳು ಆಗುತ್ತಿದ್ದಂತೆ ವೃತ್ತಿಪರ ಕ್ರೀಡಾಸಂಸ್ಥೆಗಳ ಪಟ್ಟಿಗೆ ಸೇರಿಸಲು ಸರ್ಕಾರ ಮುಂದಾಗಿತ್ತು. 2022ರ ಏಪ್ರಿಲ್‌ನಲ್ಲೇ ಈ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ನಿರಂತರ ಗೊಂದಲಗಳಿಂದಾಗಿ ಪೂರಕ ಫಲಿತಾಂಶ ಸಿಗಲಿಲ್ಲ.

ಕಂಬಳಕ್ಕೆ ಕ್ರೀಡೆಯ ಮಾನ್ಯತೆ ನೀಡಿ ರಾಜ್ಯ ಸಂಸ್ಥೆ ಆರಂಭಿಸಲು ಸರ್ಕಾರ ಮುಂದಾದ ವರ್ಷವೇ ಆ ಋತುವಿನ ಕಂಬಳ ದಿನಾಂಕ ನಿಗದಿ, ರೆಫರಿಗಳ ಆಯ್ಕೆ ಇತ್ಯಾದಿಗೆ ಸಂಬಂಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೋಣಗಳ ಮಾಲೀಕರನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿಯಲ್ಲಿ ಮನಸ್ತಾಪ ಉಂಟಾಗಿತ್ತು. ಆದ್ದರಿಂದ ಆ ವರ್ಷ ಪೂರಕ ಪ್ರಕ್ರಿಯೆಗಳು ಸಲೀಸಾಗಿ ನಡೆಯಲಿಲ್ಲ.

ADVERTISEMENT

ಕಳೆದ ವರ್ಷ ವಿಧಾನ ಪರಿಷತ್ತಿನಲ್ಲಿ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಅಂದಿನ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಕಂಬಳ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಪ್ರಕ್ರಿಯೆ ಆರಂಭಗೊಂಡಿದ್ದು ದಾಖಲೆಗಳೊಂದಿಗೆ ಕ್ರೀಡಾ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದ್ದರು. ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೋ ನಿಜ. ಆದರೆ ಮುಂದೆ ಯಾವ ಪ್ರಕ್ರಿಯೆಯೂ ಆಗಲಿಲ್ಲ.

ಈಗ ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ (ಸ್ಯಾಕ್‌) ಅಧ್ಯಕ್ಷರು ಇಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಆಯುಕ್ತರೂ ಇಲ್ಲ. ಕಂಬಳ ಸಮಿತಿಯವರು ಮುಖ್ಯಮಂತ್ರಿ ಭೇಟಿ ಮಾಡಿ ಸಂಸ್ಥೆ ಆರಂಭಕ್ಕೆ ಅಸ್ತು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಸಂಸ್ಥೆಯ ರೂಪುರೇಷೆ ಬಗ್ಗೆ ಸ್ಪಷ್ಟತೆ ಮೂಡಿಲ್ಲ.

‘ಕಂಬಳವನ್ನು ರಾಜ್ಯದ ಕ್ರೀಡೆ ಮಾಡಬೇಕೆಂದು ಮನವಿ ಬಂದಿದೆ. ಕಂಬಳ ಆಯೋಜನೆಗೆ ಹಣ ಬಿಡುಗಡೆ ಮಾಡಬೇಕು ಎಂಬುದಷ್ಟೇ ನಮಗೆ ಬಂದಿರುವ ಮಾಹಿತಿ. ಅದಕ್ಕೆ ತಕ್ಕಂತೆ ಬಜೆಟ್‌ ಸಭೆಯಲ್ಲಿ ಪ್ರಸ್ತಾವ ಕೊಡಲಾಗಿದೆ’ ಎಂದು ಇಲಾಖೆಯ ಜಂಟಿ ಆಯುಕ್ತ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಮಗೆ ಬಂದಿರುವ ಪ್ರಸ್ತಾವವನ್ನು ಸರ್ಕಾರದ ಮಟ್ಟಕ್ಕೆ ಕಳುಹಿಸಲಾಗಿದೆ’ ಎಂದು ಸ್ಯಾಕ್ ಮೂಲಗಳು ಹೇಳುತ್ತವೆ.

‘ಮೂಡುಬಿದಿರೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ನಿಯಮಾವಳಿಗಳನ್ನು ರೂಪಿಸಲಾಗಿದೆ. ಆಗಸ್ಟ್‌ನಲ್ಲಿ ಸಮಿತಿಯ ಮಹಾಸಭೆ ನಡೆಯಲಿದ್ದು ಅಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗುವುದು. ಅದಕ್ಕೂ ಮೊದಲು ಸರ್ಕಾರದ ಹಸಿರು ನಿಶಾನೆ ಸಿಗಬೇಕಿದೆ’ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ವಿವರಿಸಿದರು.

ಗರಿಷ್ಠ ಮೂರು ಜೊತೆ ಓಡಿಸಲು ಅವಕಾಶ

ರಾಜ್ಯ ಕಂಬಳ ಸಂಸ್ಥೆ ಅಸ್ತಿತ್ವಕ್ಕೆ ತರುವುದಕ್ಕೆ ಸಂಬಂಧಿಸಿ ಸಿದ್ಧ‍ಪಡಿಸಿದ ಪರಿಷ್ಕೃತ ನಿಯಮಾವಳಿಗಳಲ್ಲಿ ಒಬ್ಬರಿಗೆ ಗರಿಷ್ಠ ಮೂರು ಜೊತೆ ಕೋಣ ಓಡಿಸಲು ಮಾತ್ರ ಅವಕಾಶ ಎಂಬ ನಿಯಮವೂ ಸೇರಿದೆ. ‘ಐದು ವರ್ಷಗಳ ಹಿಂದೆ ಈ ನಿಯಮ ಜಾರಿಯಲ್ಲಿತ್ತು. ನಂತರ ಆದ ಬದಲಾವಣೆಯಲ್ಲಿ ಕೆಲವರು 12 ಜೊತೆ ಕೋಣಗಳನ್ನು ಓಡಿಸಿದ್ದೂ ಉಂಟು. ಇದರಿಂದ ಕಾಲಹರಣ ಆಗುತ್ತಿತ್ತು. ಓಡಿಸುವವರನ್ನು ಕಾದು ಕೋಣಗಳು ಸುಸ್ತಾಗುತ್ತಿದ್ದವು. ಹೀಗಾಗಿ ಈಗ ಓಡಿಸುವವರಿಗೂ ಕೋಣ ಬಿಡುವವರಿಗೂ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.   

ಎರಡು ಬಾರಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗಿದೆ. ದಾಖಲೆಪತ್ರಗಳಿಗೆ ಸಂಬಂಧಿಸಿದ ಕೆಲಸವೆಲ್ಲ ಮುಗಿದಿದ್ದು ಒಪ್ಪಿಗೆ ಸಿಗುವುದೊಂದೇ ಬಾಕಿ ಉಳಿದಿರುವ ಕಾರ್ಯ. 17 ಮಂದಿಯನ್ನು ಒಳಗೊಂಡ ಕಂಬಳ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ.
ಲೋಕೇಶ್ ಶೆಟ್ಟಿ, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.