ಮಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಗ್ರಾಮೀಣ ಶಾಖೆಗಳಲ್ಲೂ, ಕನ್ನಡ, ತುಳು ಬರುವ ಅಧಿಕಾರಿಗಳು ಏಕಿಲ್ಲ?
ದಿಶಾ ಸಮಿತಿ ಸಭೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಲೀಡ್ ಬ್ಯಾಂಕ್ ಅಧಿಕಾರಿ ಮುಂದಿಟ್ಟ ಪ್ರಶ್ನೆ ಇದು. ‘ಸ್ಥಳೀಯ ಭಾಷೆಯನ್ನು ಬಲ್ಲ ಒಬ್ಬ ಅಧಿಕಾರಿಯಾದರೂ ಶಾಖೆಯಲ್ಲಿ ಇರಬೇಕಲ್ಲವೇ. ಅಧಿಕಾರಿಗಳು ಹೇಳಿದ್ದು ಗ್ರಾಹಕರಿಗೆ ಅರ್ಥವಾಗುತ್ತಿಲ್ಲ. ಗ್ರಾಹಕರ ಸಮಸ್ಯೆ ಅವರಿಗೆ ತಿಳಿಯುತ್ತಿಲ್ಲ. ಇದು ಕೆಲವೆಡೆ ಸಂಘರ್ಷಕ್ಕೂ ಕಾರಣವಾಗುತ್ತಿದೆ’ ಎಂದರು.
‘ಬ್ಯಾಂಕ್‌ಗಳ ಈ ಧೋರಣೆಯಿಂದಾಗಿಯೇ, ಗ್ರಾಮೀಣ ಪ್ರದೇಶದ ಜನರು ರಾಷ್ಟ್ರೀಕೃತ ಬ್ಯಾಂಕ್‌ಗಳ ಬದಲು ಸಹಕಾರಿ ಬ್ಯಾಂಕ್‌ಗಳಲ್ಲೇ ವಹಿವಾಟು ನಡೆಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕ್‌ಗಳಿಗೆ ನಿಗದಿಪಡಿಸಿದ ಗುರಿ ಸಾಧನೆ ಮಾಡಲು ಸಾಧ್ಯವಾಗದೇ ಇರುವುದಕ್ಕೂ ಇದೇ ಕಾರಣ’ ಎಂದು ತರಾಟೆಗೆ ತೆಗೆದುಕೊಂಡರು.
‘ಕನ್ನಡ ಅಥವಾ ತುಳು ಬಲ್ಲ ಒಬ್ಬ ಅಧಿಕಾರಿಯಾದರೂ ಬ್ಯಾಂಕ್ ಶಾಖೆಗಳಲ್ಲಿ ಇರಬೇಕು. ಗ್ರಾಹಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು’ ಎಂದರು.
ಮುದ್ರ, ಪಿಎಂ ಸ್ವನಿಧಿ ಮೊದಲಾದ ಕೇಂದ್ರದ ಸಾಲ ಯೋಜನೆಗಳಿಗೆ ಬ್ಯಾಂಕ್‌ಗಳಿಗೆ ಶಾಕಾ ವಾರು ಗುರಿ ನೀಡಬೇಕು. ಪಲಾನುಭವಿಗಳ ಆಯ್ಕೆಗೆ ಸಮಾವೇಶ ಆಯೋಜಿಸಲು ದಿನಾಂಕ ನಿಗದಿಪಡಿಸುವಂತೆ ನಳಿನ್ ಸೂಚಿಸಿದರು.
‘ಕೇಂದ್ರ ಸರ್ಕಾರದ ಯೋಜನೆಯಡಿ ಸಾಲ ನೀಡುವಾಗಲೂ ಕೆಲವು ಬ್ಯಾಂಕ್ ಅಧಿಕಾರಿಗಳು ಫಲಾನುಭವಿಗಳ ಸಿಬಿಲ್ ಸ್ಕೋರ್ ನೋಡುತ್ತಿದ್ದಾರೆ. ಇದು ಸರಿಯಲ್ಲ. ಈ ಬಗ್ಗೆ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೂ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿನಲ್ ಎಂಪಿ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.