ಉಪ್ಪಿನಂಗಡಿ: ಪಶ್ಚಿಮಘಟ್ಟದ ತಪ್ಪಲಿನ ಉದ್ದಕ್ಕೂ ಇರುವ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದ್ದು, ಶುಕ್ರವಾರ ಹಗಲಿನಲ್ಲೇ 4 ಮಂದಿ ಬೇಟೆಗಾರರು ಭಾರಿ ಗಾತ್ರದ ಕಾಡುಕೋಣವನ್ನು ಗುಂಡು ಹೊಡೆದು ಕೊಂದು ಹಾಕಿದ್ದಾರೆ ಎಂಬ ದೂರು ಕೇಳಿಬಂದಿದೆ.
ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಮೀಸಲು ಅರಣ್ಯದ ಅಂಚಿನಲ್ಲಿರುವ ತೋಟದಲ್ಲಿ ಕಾಡುಕೋಣವೊಂದನ್ನು ಗುಂಡಿಕ್ಕಿ ಕೊಂದು ಕಾಡಿನಲ್ಲೇ ಅದನ್ನು ಮಾಂಸ ಮಾಡಿ ಪಿಕ್ಅಪ್ ವಾಹನದ ಮೂಲಕ ಸಾಗಾಟ ಮಾಡಿರುವ ದೂರು ವ್ಯಕ್ತವಾಗಿದೆ.
ಗುಂಡೇಟು ತಗುಲಿ ಓಡಿತ್ತು: ಬೂಡುಜಾಲು ಅರಣ್ಯದ ಅಂಚಿನಲ್ಲಿ ಇರುವ ತೋಟಕ್ಕೆ ಕಾಡುಕೋಣ ಬರುತ್ತಿದ್ದ ಮಾಹಿತಿ ಅರಿತ ತಂಡ ಗುರುವಾರ ರಾತ್ರಿ ತೋಟದ ಮನೆಯೊಂದರಲ್ಲಿ ಕಾದು ಕುಳಿತಿತ್ತು. ಈ ವೇಳೆ ಬಂದ ಕಾಡು ಕೋಣದ ಮೇಲೆ ಹಾರಿಸಿದ 2 ಗುಂಡು ತಗುಲಿದ್ದು, ಅದು ಓಡಿ ಹೋಗಿತ್ತು. ಅದು ಎಲ್ಲಾದರೂ ಸತ್ತು ಬಿದ್ದಿರುವ ಸಾಧ್ಯತೆ ಬಗ್ಗೆ ಬೇಟೆಗಾರರು ಶುಕ್ರವಾರ ಬೆಳಿಗ್ಗೆ ಹುಡುಕಾಟ ಆರಂಭಿಸಿದ್ದು, ಸ್ವಲ್ಪ ದೂರದಲ್ಲಿ ಕಾಡುಕೋಣ ಬಿದ್ದಿತ್ತು. ಮತ್ತೆ ಗುಂಡು ಹಾರಿಸಿ ಅದನ್ನು ಕೊಲ್ಲಲಾಗಿದೆ ಎಂದು ಗೊತ್ತಾಗಿದೆ.
ಪಿಕ್ಅಪ್ ವಾಹನದಲ್ಲಿ ಸಾಗಾಟ: ಕೊಂದ ಕಾಡುಕೋಣವನ್ನು ಕತ್ತರಿಸಿ ಶಿಬಾಜೆಯ ಪಿಕ್ಅಪ್ ವಾಹನದಲ್ಲಿ ಕೃತ್ಯದ ಪ್ರಮುಖ ಆರೋಪಿ ರಾಜು ಎಂಬುವರ ಮನೆಗೆ ಸಾಗಿಸಿ ಅಲ್ಲಿ ಮಾಂಸ ಮಾಡಿ ಶೇಖರಿಸಿ ಇಡಲಾಗಿದೆ ಎಂದು ದೂರಲಾಗಿದೆ.
‘ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿ ಇರುವ ನಿಡ್ಲೆ, ಶಿಬಾಜೆ, ಶಿರಾಡಿ ಪರಿಸರದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆಯಾಡುವ ತಂಡ ಕಾರ್ಯಾಚರಿಸುತ್ತಿದೆ. ಅವರು ಪ್ರಾಣಿಗಳನ್ನು ಮಾಂಸ ಮಾಡಿ ಒಣಗಿಸಿ 3, 5 ಹಾಗೂ 10 ಕೆ.ಜಿ.ಯ ಪ್ಯಾಕ್ ಮಾಡಿ ಕೇರಳಕ್ಕೆ ಸಾಗಿಸುತ್ತಿದ್ದಾರೆ. ಈ ರೀತಿಯಾಗಿ ಒಣಗಿಸಿದ ಮಾಂಸ 1 ಕೆ.ಜಿ.ಗೆ ₹ 1,300ರಿಂದ ₹ 1,500ರವರೆಗೆ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯವಾಗಿಯೂ ಕೆಲವು ವ್ಯಕ್ತಿಗಳಿಗೆ ಇದೇ ದರದಲ್ಲಿ ಮಾರಾಟ ಮಾಡಲಾಗುತ್ತದೆ’ ಎಂದು ದೂರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.