ಮಂಗಳೂರು: ‘ರಾಜ್ಯದಲ್ಲಿ ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ವಿವಾದಾತ್ಮಕ ಆದೇಶವನ್ನು ಹಿಂಪಡೆಯಬೇಕು’ ಎಂದು ಬುಧವಾರ ಇಲ್ಲಿ ನಡೆದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ 30ನೇ ವಾರ್ಷಿಕ ಮಹಾಸಮ್ಮೇಳನ ಆಗ್ರಹಿಸಿತು.
ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಮರ ಮೀಸಲಾತಿ ಪ್ರಮಾಣವನ್ನು ಶೇ 4 ರಿಂದ ಶೇ7 ಕ್ಕೆ ಹೆಚ್ಚಿಸಬೇಕು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ಧಪಡಿಸಿರುವ ಜಾತಿ ಗಣತಿ ವರದಿಯನ್ನು ಬಿಡುಗಡೆಮಾಡಿ, ಅದರ ಶಿಫಾರಸು ಜಾರಿಗೆ ತರಬೇಕು ಎಂಬುದು ಸೇರಿದಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಮಂಗಳೂರಿನಲ್ಲಿ 2019ರ ಗೋಲಿಬಾರ್‌ನಲ್ಲಿ ಮೃತರಾದ ವ್ಯಕ್ತಿಗಳ ಎರಡು ಕುಟುಂಬಗಳಿಗೆ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಮಂಗಳೂರು ಗೋಲಿಬಾರ್, ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಹಾಗೂ ಹುಬ್ಬಳ್ಳಿಯ ಗಲಭೆಗಳಲ್ಲಿ ಅನೇಕ ಅಮಾಯಕರನ್ನು ಬಂಧಿಸಲಾಗಿದೆ. ಅಂತಹವರು ಯಾವುದೇ ಜಾತಿಯವರಾದರೂ ತಕ್ಷಣ ಬಿಡುಗಡೆ ಮಾಡಬೇಕು. ಅಮಾಯಕರ ವಿರುದ್ಧ ದಾಖಲಾದ ಸುಳ್ಳು ಪ್ರಕರಣ ಹಿಂಪಡೆಯಬೇಕು. ಬಾಬಾಬುಡನ್ ಗಿರಿ ಸಮಿತಿಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡದೇ ಅನ್ಯಾಯ ಮಾಡಲಾಗಿದ್ದು, ಅದನ್ನು ಸರಿಪಡಿಸಬೇಕು. ಬಜೆಟ್ ಗಾತ್ರದ ಶೇ 10 ರಷ್ಟು ಅನುದಾನವನ್ನು ಮುಸ್ಲಿಮರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ಎಲ್ಲ ಜಾತಿ ಧರ್ಮಗಳನ್ನು ಒಟ್ಟಿಗೆ ಕರೆದೊಯ್ಯುವ ಸರ್ಕಾರ ನಮ್ಮದು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿಮ್ಮ ಪರವಾಗಿ ನಿಲ್ಲಲಿದೆ. ನಿಮ್ಮ ರಕ್ಷಣೆಗೆ ಬದ್ಧವಾಗಿದೆ' ಎಂದರು.
ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಸಯ್ಯಿದ್ ಖಲೀಲುಲ್ ಬುಖಾರಿ ತಂಙಳ ಉಪನ್ಯಾಸ ನೀಡಿದರು.
ಸ್ವಾಗತ ಸಮಿತಿ ಖಜಾಂಚಿ ಕೆ.ಎಂ. ಶಾಫಿ ಸಅದಿ ನಿರ್ಣಯ ಮಂಡಿಸಿದರು. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಹಜ್ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮದ್, ಮಂಜುನಾಥ ಭಂಡಾರಿ, ಬಿ.ಎಂ.ಫಾರೂಕ್ ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.