ADVERTISEMENT

ಡಯಾಲಿಸಿಸ್‌ಗಾಗಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 8:26 IST
Last Updated 21 ಡಿಸೆಂಬರ್ 2023, 8:26 IST
ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆ
ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆ   

ಮಂಗಳೂರು: ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ದಾಖಲಾಗಿದ್ದ ಮಹಿಳೆಯೊಬ್ಬರು ಬುಧವಾರ ಸಂಜೆ ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಅರ್ಕುಡೇಲು ನಿವಾಸಿ ಸುಮಿತ್ರಾ (35) ಮೃತ ಮಹಿಳೆ. ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ‘ಆಸ್ಪತ್ರೆ ಕಡೆಯಿಂದ ಲೋಪವಾಗಿಲ್ಲ’ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ.ಜೆಸಿಂತಾ ಪ್ರತಿಕ್ರಿಯಿಸಿದರು.

‘ಸುಮಿತ್ರಾ ಅವರು ಒಂದು ವರ್ಷದಿಂದಲೂ ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಅವರನ್ನು ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಿದ್ದೆವು. ಬುಧವಾರ ಸಂಜೆ 4 ಗಂಟೆವರೆಗೂ ಅವರು ಹುಷಾರಾಗಿಯೇ ಇದ್ದರು. ಡಯಾಲಿಸಿಸ್‌ಗೆ ಕರೆದೊಯ್ದ ಬಳಿಕ ಸಂಜೆ 5 ಗಂಟೆಗೆ ಸುಮಾರಿಗೆ ಅವರು ಕೊನೆಯುಸಿರೆಳೆದ್ದಾರೆ’ ಎಂದು ಕುಟುಂಬ ಮೂಲಗಳು ತಿಳಿಸಿವೆ.

ADVERTISEMENT

‘ತುರ್ತು ನಿಗಾ ಘಟಕದಲ್ಲಿ ಹಾಸಿಗೆ ಖಾಲಿ ಇರದ ಕಾರಣ ಸಮಸ್ಯೆ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ ನಾವು ಬೇರೆ ಆಸ್ಪತ್ರೆಗೆ ದಾಖಲಿಸುತ್ತಿದ್ದೆವು’ ಎಂದು ಮಹಿಳೆಯ ಕುಟುಂಬಸ್ಥರು ವೈದ್ಯರ ಜೊತೆ ವಾಗ್ವಾದ ನಡೆಸಿದ್ದಾರೆ.

‘ಸುಮಿತ್ರಾ ಮೃತ‍ಪಟ್ಟ ಬಳಿಕವೂ ರಾತ್ರಿಯವರೆಗೂ ಸಂಬಂಧಿಕರನ್ನು ಒಳಗೆ ಬಿಟ್ಟಿರಲಿಲ್ಲ. ಕರ್ತವ್ಯದಲ್ಲಿದ್ದ ವೈದ್ಯರಾಗಲೀ, ಶುಶ್ರೂಷಕಿಯರಾಗಲೀ ಈ ಬಗ್ಗೆ ನಮಗೆ ವಿವರಿಸಿಲ್ಲ. ನಾವು ಪ್ರಶ್ನೆ ಮಾಡಿದರೆ ಪೊಲೀಸರನ್ನು ಕರೆಸಿದ್ದಾರೆ’ ಎಂದು ಕುಟುಂಬಸ್ಥರು ದೂರಿದರು.

ಸುಮಿತ್ರಾ ಅವರಿಗೆ ಒಬ್ಬ ಮಗ ಇದ್ದು, ಆತ ಆರನೇ ತರಗತಿ ವಿದ್ಯಾರ್ಥಿ. ವರ್ಷದ ಹಿಂದೆ ಎರಡನೇ ಹೆರಿಗೆಯ ಸಂದರ್ಭದಲ್ಲಿ ಅವರ ಮೂತ್ರಪಿಂಡ ವೈಫಲ್ಯಕ್ಕೊಳಗಾಗಿತ್ತು. ಆ ಬಳಿಕ ಅವರು ನಿಯಮಿತವಾಗಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

‘ಡಯಾಲಿಸಿಸ್‌ ಕರೆದೊಯ್ಯುವ ವೇಳೆ ಸುಮಿತ್ರಾ ಅವರಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರ ಜೀವ ಉಳಿಸಿಕೊಳ್ಳಲು ಆಸ್ಪತ್ರೆ ವೈದ್ಯರು ತಮ್ಮಿಂದಾದ ಪ್ರಯತ್ನ ನಡೆಸಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ಕುಟುಂಬದವರಿಗೆ ಸರಿಯಾಗಿ ಮಾಹಿತಿ ನೀಡದ ಕಾರಣ ಗೊಂದಲ ಸೃಷ್ಟಿಯಾಗಿದೆ. ಸುಮಿತ್ರಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಲ್ಲ’ ಎಂದು ಡಾ.ಜೆಸಿಂತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.