ಮಂಗಳೂರು: ಬೆಳಕು ಮೂಡುವ ಮೊದಲು ಇವರ ಕೆಲಸ ಆರಂಭವಾಗುತ್ತದೆ. ಕತ್ತಲಲ್ಲೇ ಬಂದು ಅರೆಬರೆ ಬೆಳಕಿನಲ್ಲಿ ಸಿದ್ಧತೆ ಮಾಡಿಕೊಂಡು ದುಡಿಯಲು ಶುರು ಮಾಡಿದರೆ ಮಧ್ಯಾಹ್ನದ ವರೆಗೆ ಪುರುಸೊತ್ತಿಲ್ಲ. ಅದರ ಮಧ್ಯೆ ದೇಹಬಾಧೆ ತೀರಿಸಿಕೊಳ್ಳಬೇಕೆಂದರೆ ಪಡಿಪಾಟಲು. ಹಣ, ಪರ್ಸ್, ಮೊಬೈಲ್ ಫೋನ್ ಕಳೆದುಹೋಗದಂತೆ ಇಟ್ಟುಕೊಳ್ಳುವುದು ಮತ್ತೊಂದು ಸವಾಲು. ಎಲ್ಲ ಸಹಿಸಿದರೂ ಕೊನೆಗೆ ಸಿಗುವುದು ‘ಬಿಡಿಗಾಸು’ ಮಾತ್ರ...
ಕೋಟ್ಯಂತರ ಮೊತ್ತದ ವಾಣಿಜ್ಯ ವಹಿವಾಟು ನಡೆಯುವ ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ದುಡಿಯುವ ಮಹಿಳೆಯರು ಕರುಳು ಚುಂಯ್ ಎನ್ನುವಂತೆ ಸಂಕಟವನ್ನು ಬಿಚ್ಚಿಡುತ್ತಾರೆ. ಆದರೆ ಅವರ ನೋವಿನ ದನಿ ಸಂಬಂಧಪಟ್ಟವರ ಕಿವಿಗೆ ಇನ್ನೂ ಬಿದ್ದಿಲ್ಲ, ಬಿದ್ದರೂ ಪರಿಹಾರ ಕಾಣುವ ಗೋಜಿಗೆ ಅಡೆತಡೆ ಒಂದೆರಡಲ್ಲ.
ಬಂದರಿನ ಮೀನುಗಾರಿಕೆ ಧಕ್ಕೆ ಮುಂಜಾನೆ ಮೂರೂವರೆ ವೇಳೆಗೆ ಚುರುಕಾಗುತ್ತದೆ. ಮೀನು ಹಿಡಿದುಕೊಂಡು ಬರುವ ಬೋಟ್‌ಗಳು ದಡ ಸೇರುವ ಸಮಯ ಅದು. ಬೋಟ್‌ಗಳು ಬಂದ ಕೂಡಲೇ ಪುರುಷರ ತಂಡ ಮೇಲೇರಿ ಮೀನು ಇಳಿಸುತ್ತಾರೆ. ಬುಟ್ಟಿಗಳಿಗೆ ‘ಕೈನೀಡಿ’ ಏಲಂ ನಡೆಯುವ ಜಾಗಕ್ಕೆ ತೆಗೆದುಕೊಂಡು ಹೋಗುವುದು ಮಹಿಳೆಯರು. ಇನ್ನೂ ಸ್ವಲ್ಪ ಹೊತ್ತಾದರೆ ಮೀನು ಖರೀದಿ ಆರಂಭವಾಗುತ್ತದೆ. ಹೋಟೆಲ್‌ನವರು ಕೆಜಿಗಟ್ಟಲೆ ಮೀನು ಕತ್ತರಿಸಿಕೊಂಡೇ ಇಲ್ಲಿಂದ ತೆಗೆದುಕೊಂಡು ಹೋಗುತ್ತಾರೆ. ಇಲ್ಲೂ ಮಹಿಳೆಯರದು ಪ್ರಮುಖ ಕೆಲಸ. ಈ ಎಲ್ಲ ಕೆಲಸಗಳಲ್ಲಿ ಕಡಿಮೆ ಎಂದರೂ 500ರಷ್ಟು ಮಹಿಳಾ ಕಾರ್ಮಿಕರು ಇದ್ದಾರೆ. ಆದರೆ ಅವರ ಅಗತ್ಯಕ್ಕೆ ಬೇಕಾದ ಸೌಕರ್ಯಗಳು ಇಲ್ಲ.
ಕುದ್ರೋಳಿಯಿಂದ ಬರುವ ‘....’ (ಹೆಸರು ಹೇಳಲು ಆತಂಕ) ಮುಂಜಾನೆ ಮೂರೂವರೆಗೆ ಮನೆಯಿಂದ ಹೊರಡುತ್ತಾರೆ. ಬಂದರಿನ ಸಮೀಪ ತಲುಪುತ್ತಿದ್ದಂತೆ ಕೆಲವು ಕಡೆ ಕತ್ತಲು, ಕೆಲವೆಡೆ ಮಂದ ಬೆಳಕು. ಇವರಿಗೆ ಮೀನು ಕತ್ತರಿಸುವ ಕೆಲಸ. ಕುಳಿತುಕೊಳ್ಳುವ ಜಾಗ ಸ್ವಚ್ಛ ಮಾಡಲು ನೀರಿನ ವ್ಯವಸ್ಥೆ ಇಲ್ಲ. ದೂರದಿಂದ ನೀರು ತೆಗೆದುಕೊಂಡು ಬರಬೇಕು. ಮಳೆಗಾಲದಲ್ಲಿ ಕಾಲುಜಾರಿ ಬೀಳುವ ಆತಂಕ.
‘ನಾಲ್ಕು ಗಂಟೆಯ ವೇಳೆ ಕೆಲಸ ಆರಂಭವಾಗುತ್ತದೆ. ನಮಗೆ ನಿರ್ದಿಷ್ಟ ಹೋಟೆಲ್‌ಗಳ ಗಿರಾಕಿಗಳಿದ್ದಾರೆ. 16 ವರ್ಷಗಳಿಂದ ಇದೇ ಕೆಲಸ. ಆರಂಭದಲ್ಲಿ ಇದ್ದ ಕೆಜಿಗೆ ₹ 10 ಈಗಲೂ ಮುಂದುವರಿಯುತ್ತಿದೆ. ಸ್ವಲ್ಪ ಹೆಚ್ಚು ಕೊಡಿ ಎಂದರೆ ಬೇರೆ ಕಡೆಗೆ ಹೋಗುತ್ತೇವೆ ಎನ್ನುತ್ತಾರೆ. ಬೇರೆ ಗತಿ ಇಲ್ಲದೆ ಒಪ್ಪಿಕೊಳ್ಳುತ್ತೇವೆ’ ಎಂದು ‘ಪ್ರಜಾವಾಣಿ’ಗೆ ಆ ಮಹಿಳೆ ಹೇಳಿದರು.
ಕಳ್ಳರು, ಪುಂಡರ ಹಾವಳಿ
‘ಪರ್ಸ್, ಮೊಬೈಲ್ ಫೋನ್ ಕಳವು ಇಲ್ಲಿ ಸಾಮಾನ್ಯ. ಕಷ್ಟಪಟ್ಟು ದುಡಿದು ತೆಗೆದಿಟ್ಟ ಹಣವನ್ನು ಎಷ್ಟೋ ಬಾರಿ ಕಳೆದುಕೊಂಡಿದ್ದೇವೆ. ಪುಂಡರ ಕಾಟವೂ ಇದೆ. ಹೀಗಾಗಿ ಕತ್ತಲಿರುವ ಕಡೆ ಒಬ್ಬಿಬ್ಬರು ಓಡಾಡುವುದಿಲ್ಲ. ಬಾತ್‌ರೂಮ್‌ನಲ್ಲಿ ಸ್ವಚ್ಛತೆ ಎಂಬುದು ಇಲ್ಲವೇ ಇಲ್ಲ. ಕೆಲವೊಮ್ಮೆ ನಮಗೆ ಮೀಸಲಿರುವ ಬಾತ್‌ರೂಂನಲ್ಲಿ ಪುರುಷರು ಕುಳಿತುಕೊಂಡಿರುತ್ತಾರೆ. ಅಪಾಯಕ್ಕೆ ಸಿಲುಕುವುದು ಬೇಡ ಎಂದು ಬೆಳಕು ಹರಿಯುವ ಮೊದಲು ಎಲ್ಲ ಬಾಧೆಯನ್ನೂ ಅದುಮಿಟ್ಟುಕೊಂಡು ಕೆಲಸ ಮಾಡುತ್ತೇವೆ’ ಎಂದು ಮೀನು ಬುಟ್ಟಿಗೆ ‘ಕೈ ನೀಡುವ’ ಬೋಳಾರದ ‘...’ ತಿಳಿಸಿದರು.
ಪೊಲೀಸ್ ಗಸ್ತು ಸಮರ್ಪಕವಾಗಿದೆ. ಕೆಲವು ಕಡೆಗಳಲ್ಲಿ ಬೀದಿದೀಪ ಮತ್ತು ಸಿಸಿಟಿವಿ ವ್ಯವಸ್ಥೆ ಆಗಬೇಕು. ಈ ಬಗ್ಗೆ ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಗುರುರಾಜ್, ಮಂಗಳೂರು ದಕ್ಷಿಣ ಇನ್‌ಸ್ಪೆಕ್ಟರ್
ಮುಂಜಾನೆ ಬರಲು ಸಾಧ್ಯವಾಗದ ಕೆಲವು ಮಹಿಳೆಯರು ರಾತ್ರಿ ಬಂದು ಇಲ್ಲೇ ತಂಗುತ್ತಾರೆ. ಅವರಿಗೆ ಪ್ರತ್ಯೇಕ ಕೊಠಡಿಗಳಾಗಲಿ, ಮರೆಯಾಗಲಿ ಇಲ್ಲ. ಕೆಲಸ ಆರಂಭಿಸುವ ಮೊದಲು ಮತ್ತು ನಂತರ ಬಟ್ಟೆ ಬದಲಿಸುವುದಕ್ಕೂ ಒಂದಿಷ್ಟು ಖಾಸಗಿ ಜಾಗ ಇಲ್ಲ. ಈ ಕೆಲಸವಲ್ಲದೆ ಬೇರೆ ಕೆಲಸ ಇಲ್ಲ. ಬದುಕು ಬಹಳ ದುಸ್ತರ. ಆದ್ದರಿಂದ ಎಲ್ಲವನ್ನೂ ಸಹಿಸುತ್ತಿದ್ದೇವೆ ಎನ್ನುತ್ತಾರೆ, ಕೃಷ್ಣಾಪುರದಿಂದ ಬಂದು ತಂಗುವ ಉತ್ತರ ಕರ್ನಾಟಕದ ಒಬ್ಬರು ಮಹಿಳೆ.
ಬೋಟೊಂದಕ್ಕೆ ಸಂಬಂಧಿಸಿ ಒಟ್ಟು 30 ಮಂದಿ ಕೆಲಸಕ್ಕೆ ಇರುತ್ತಾರೆ. 10 ಮಂದಿ ಮೀನು ಹಿಡಿಯಲು ಹೋಗುತ್ತಾರೆ. 10 ಮಂದಿ ಮೀನು ಇಳಿಸುತ್ತಾರೆ. 10 ಮಂದಿ ಮೀನು ತುಂಬಿದ ಬುಟ್ಟಿ ತೆಗೆದುಕೊಂಡು ಹೋಗುತ್ತಾರೆ. ಅವರು ಮಹಿಳೆಯರು. ಬೋಟ್ ಮಾಲೀಕರು ಕೊಟ್ಟ ಹಣವನ್ನು ಮೂರು ಹಂತದ ಕಾರ್ಮಿಕರು ಹಂಚಿಕೊಳ್ಳುತ್ತಾರೆ. ಈ ಪೈಕಿ ಮಹಿಳೆಯರಿಗೆ ಸಿಗುವ ಪಾಲು ಕಡಿಮೆ ಎಂಬ ದೂರು ಕೂಡ ಇದೆ.
ದಕ್ಕೆಗೆ ಬಂದ ನಂತರ ಗಟ್ಟಿಯಾಗಿದ್ದೇನೆ
‘ಇಲ್ಲಿನ ಸಮಸ್ಯೆಗಳಿಂದ ಬಳಲಿ ಮನಸ್ಸು ಗಟ್ಟಿಯಾಗಿದೆ. ನಾನು ಜನ್ಮತಃ ಮೃದು ಸ್ವಭಾವದವಳು. ಇಲ್ಲಿ ಬಂದು ಹೋರಾಡಿ ಈಗ ಜೋರಾಗಿದ್ದೇನೆ. ಹೊರರಾಜ್ಯದಿಂದ ಈಚೆಗೆ ನೂರಾರು ಮಂದಿ ಬಂದು ಇಲ್ಲಿ ತಮ್ಮ ನೆಲೆ ಗಟ್ಟಿಗೊಳಿಸಿದ್ದಾರೆ. ಅವರು ನಮ್ಮನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಾವು ಸುಮ್ಮನಿದ್ದರೆ ಕೆಲಸ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗಬಹುದು. ಹೀಗಾಗಿ ಪ್ರತಿರೋಧಕ್ಕೆ ಮುಂದಾಗಿದ್ದೇವೆ’ ಎಂದು ಮಹಿಳಾ ಕಾರ್ಮಿಕರೊಬ್ಬರು ಹೇಳಿದರು.
ಬೆಳಕು ಸಿಸಿಟಿವಿ ಕ್ಯಾಮೆರಾ ಬೇಕು
ಬಂದರು ಪ್ರದೇಶದ ಶೇಕಡಾ 50ರಷ್ಟು ಭಾಗದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ಮಳಿಗೆಯವರು ಹಾಕಿರುವ ಸಿಸಿಟಿವಿ ಕ್ಯಾಮೆರಾ ಬಿಟ್ಟರೆ ಅಧಿಕೃತ ಕ್ಯಾಮೆರಾ ಇಲ್ಲ. ಹೀಗಾಗಿ ಇಲ್ಲಿ ಅಕ್ರಮ ಚಟುವಟಿಕೆ ಹೆಚ್ಚು ನಡೆಯುತ್ತದೆ. ಬೋಟ್‌ಗಳಲ್ಲೇ ಕಳ್ಳತನ ಆದದ್ದಿದೆ. ಇಲ್ಲಿ ಪೊಲೀಸ್ ಚೌಕಿ ಆರಂಭಿಸಬೇಕು ಇಲ್ಲವಾದರೆ ಗಸ್ತು ಹೆಚ್ಚಿಸಬೇಕು ಎಂದು ಟ್ರೋಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಆಗ್ರಹಿಸಿದರು. ‘ವಿಧಾನಸಭಾಧ್ಯಕ್ಷ ಮತ್ತು ಮೀನುಗಾರಿಕಾ ಸಚಿವರ ಜೊತೆ ಈಚೆಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದೆ. ಧಕ್ಕೆಯ ಮೂರನೇ ಹಂತದ ಕಾಮಗಾರಿ ಆರಂಭವಾದರೆ ಸಮಸ್ಯೆಗಳಿಗೆ ಒಂದೊಂದಾಗಿ ಪರಿಹಾರ ಸಿಗಲಿದೆ’ ಎಂದು ಅವರು ಹೇಳಿದರು.
3 ಹಂತದ ಅಭಿವೃದ್ಧಿಯೇ ಆಗಬೇಕೇ?
ಬಂದರಿನ 12 ಮತ್ತು 3ನೇ ಹಂತದ ಕಾಮಗಾರಿ ಅನಿಶ್ಚಿತವಾಗಿದೆ. ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗಾಗಿ ಈ ಕಾಮಗಾರಿಗಾಗಿಯೇ ಕಾಯಲಾಗುತ್ತಿದೆ. ಸದ್ಯದ ಪರಿಸ್ಥಿತಿಗೆ ಇದುವೇ ಕಾರಣ ಎನ್ನುತ್ತಾರೆ ಮೀನುಗಾರರು. ‘ಮೂರನೇ ಹಂತದ ಅಭಿವೃದ್ಧಿ ಕಾಮಗಾರಿಯ ಕೊನೆಯ ಹಂತಕ್ಕಾಗಿ ₹ 49.5 ಕೋಟಿ ಬಿಡುಗಡೆಗೆ ಅನುಮೋದನೆ ಆಗಿದೆ. ಇದಕ್ಕೆ ಟೆಂಡರ್ ಕರೆದಿದ್ದು ಯಾವ ಕಂಪನಿಯೂ ಅರ್ಜಿ ಸಲ್ಲಿಸಲಿಲ್ಲ. ಈ ಕಾಮಗಾರಿ ಆರಂಭಗೊಂಡರೆ ಒಂದಿಷ್ಟು ಅಭಿವೃದ್ಧಿ ಕಾಮಗಾರಿಗಳು ಆಗುತ್ತವೆ. 1 ಮತ್ತು 2ನೇ ಹಂತದ ಕಾಮಗಾರಿಗಾಗಿ ₹ 38.5 ಕೋಟಿಗೆ ಅನುಮೋದನೆ ಆಗಿದೆ. ಆದರೆ ಇದಕ್ಕೆ ಸಿಆರ್‌ಝಡ್ ಅನುಮತಿ ಬೇಕು. ಮಹಿಳೆಯರ ಸಮಸ್ಯೆ ಗಮನಕ್ಕೆ ಬಂದಿದೆ. ಆದರೆ ದೊಡ್ಡ ಮೊತ್ತದ ಕಾಮಗಾರಿಗಳು ನಡೆಯುವ ಜಾಗದಲ್ಲಿ ತಾತ್ಕಾಲಿಕವಾಗಿ ಏನನ್ನಾದರೂ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಕಾದುನೋಡುತ್ತಿದ್ದೇವೆ’ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.