ಮಂಗಳೂರು: ‘ಜಾಗತಿಕ ಬಂಟರ ಸಂಘಗಳ ಒಕ್ಕೂಟವು ನೊಂದವರು, ಕಷ್ಟದಲ್ಲಿರುವವರಿಗೆ ನೆರಳಾಗಿದೆ. ಸಂಪತ್ತು ಗಳಿಸಲು ನೂರಾರು ದಾರಿಗಳಿವೆ. ಆದರೆ, ಬಡವರಿಗೆ ದಾನ ಮಾಡುವ ಮನಸ್ಸಿರುವವರು ಸಿಗುವುದು ತುಂಬಾ ಕಷ್ಟ’ ಎಂದು ಚಲನಚಿತ್ರ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅಭಿಪ್ರಾಯಪಟ್ಟರು.
ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜದಿಂದ ಸಂಗ್ರಹಿಸಿದ ಹಣವನ್ನು ಸಮಾಜಕ್ಕೆ ನೀಡುವುದು ದೊಡ್ಡ ದಾನ ಹಾಗೂ ಇದೊಂದು ಸಮಾಜ ಸೇವಾ ಕಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಕಳ ಹರೀಶ್ ಶೆಟ್ಟಿ ಮಾತನಾಡಿ, ‘ಲಾಕ್‌ಡೌನ್ ಸಂದರ್ಭದಲ್ಲೂ ಸಹಾಯ ಕೇಳಿ ಅರ್ಜಿ ಹಾಕಿದವರನ್ನು ಹಿಂದೆ ಕಳುಹಿಸಲಿಲ್ಲ. ಒಕ್ಕೂಟದ ಸೇವಾ ಕಾರ್ಯ ನಿರಂತರ ನಡೆಯಲಿದೆ. ಮದುವೆ, ಶಿಕ್ಷಣ, ಆರೋಗ್ಯ, ಹೀಗೆ ಬೇರೆ ಬೇರೆ ಸಮಸ್ಯೆಗಳಿಗೆ ಸಂಬಂಧಿಸಿ ಒಕ್ಕೂಟಕ್ಕೆ ಬಂದ ಅರ್ಜಿಗಳೆಲ್ಲವನ್ನೂ ಪರಿಶೀಲಿಸಿ ಪ್ರಸಾದ ರೂಪದಲ್ಲಿ ಸಹಾಯ ಮಾಡಿದ್ದೇವೆ’ ಎಂದರು.
ಲಯನ್ಸ್ ಗವರ್ನರ್ ವಸಂತ ಶೆಟ್ಟಿ, ಒಕ್ಕೂಟದ ನಿರ್ದೇಶಕರಾದ ಪ್ರವೀಣ್ ಭೋಜ ಶೆಟ್ಟಿ, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಪೋಷಕ ರತ್ನಾಕರ ಶೆಟ್ಟಿ ಮುಂಡ್ಕೂರು, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಉಪಸ್ಥಿತರಿದ್ದರು.
ಪತ್ರಕರ್ತರಾದ ಮಾಲತಿ ಶೆಟ್ಟಿ ಮಾಣೂರು ಮತ್ತು ನಿಶಾಂತ್ ಶೆಟ್ಟಿ ಕಿಲೆಂಜೂರು ಅವರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಶಿಕ್ಷಣಕ್ಕೆ 10 ಜನರಿಗೆ, ಶಿಕ್ಷಣಕ್ಕೆ ಆರು ಜನರಿಗೆ, ಮೂವರಿಗೆ ಮದುವೆಗೆ, ಮನೆ ನಿರ್ಮಾಣ ಹಾಗೂ ದುರಸ್ತಿಗೆಂದು 18 ಫಲಾನುಭವಿಗಳಿಗೆ ಒಟ್ಟು ₹ 12 ಲಕ್ಷ ವಿತರಿಸಲಾಯಿತು. ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.