ಮಂಗಳೂರು: ಯಕ್ಷಗುರು, ಉಡುಪಿಯ ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ 2023 ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಯನ್ನು ಇಲ್ಲಿ ಮಂಗಳವಾರ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ.
ಯಕ್ಷಗಾನದ ತೆಂಕು ತಿಟ್ಟಿನ ಭಾಗವತ ಬೆಳ್ತಂಗಡಿಯ ದಿನೇಶ ಅಮ್ಮಣ್ಣಾಯ, ಮೂಡಲಪಾಯದ ಭಾಗವತ ಬೆಂಗಳೂರಿನ ನಾರಾಯಣಪ್ಪ ಎ.ಆರ್., ತೆಂಕು ಬಡಗು ತಿಟ್ಟುಗಳ ಭಾಗವತ ಮುಂಬೈನ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ತೆಂಕು ತಿಟ್ಟಿನ ವೇಷಧಾರಿ ಬಂಟ್ವಾಳದ ಚೆನ್ನಪ್ಪ ಗೌಡ ಸಜಿಪ, ಅರ್ಥಧಾರಿ ಪುತ್ತೂರಿನ ಎಂ. ಜಬ್ಬಾರ್ ಸಮೋ ಅವರಿಗೆ 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ₹ 50 ಸಾವಿರ ನಗದು ಹಾಗೂ ಪುರಸ್ಕಾರವನ್ನು ಒಳಗೊಂಡಿದೆ.
ಕಾಸರಗೋಡಿನ ತೆಂಕುತಿಟ್ಟಿನ ವೇಷಧಾರಿ ರಘುನಾಥ ಶೆಟ್ಟಿ ಬಾಯಾರು, ಪ್ರಸಾದನ ಕಲಾವಿದ ದಿವಾಕರ ದಾಸ ಕಾವಳಕಟ್ಟೆ, ತೆಂಕುತಿಟ್ಟಿನ ಬಣ್ಣದ ವೇಷಧಾರಿ ಸುಬ್ರಾಯ ಪಾಟಾಳಿ ಸಂಪಾಜೆ, ಬಡಗುತಿಟ್ಟು ವೇಷಧಾರಿ ಕುಂದಾಪುರದ ನರಾಡಿ ಭೋಜರಾಜ ಶೆಟ್ಟಿ, ಬಡಗುತಿಟ್ಟಿನ ಚೆಂಡೆವಾದಕ ಸದಾನಂದ ಪ್ರಭು ಬೈಂದೂರು, ಬಡಗುತಿಟ್ಟಿನ ಹಾಸ್ಯಗಾರ ಬೈಂದೂರಿನ ಹೊಳೆಮಗೆ ನಾಗಪ್ಪ ಮರಕಾಲ, ಬಡಗುತಿಟ್ಟು ವೇಷಧಾರಿ ಸಿದ್ದಾಪುರದ ಶಿರಳಗಿ ತಿಮ್ಮಪ್ಪ ಹೆಗಡೆ, ತೆಂಕು ಮತ್ತು ಬಡಗು ತಿಟ್ಟುಗಳ ವೇಷಧಾರಿ ಕುಂದಾಪುರದ ಬಾಬು ಕುಲಾಲ್ ಹಳ್ಳಾಡಿ, ಮೂಡಲಪಾಯ ಯಕ್ಷಗಾನದ ಭಾಗವತರಾದ ತುಮಕೂರಿನ ಶಿವಯ್ಯ ಮತ್ತು ಕೋಲಾರದ ಜೀಯಪ್ಪ ಅವರಿಗೆ 2023ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ₹ 25 ಸಾವಿರ ನಗದು ಹಾಗೂ ಪುರಸ್ಕಾರವನ್ನು ಒಳಗೊಂಡಿದೆ.
2023ನೆ ಸಾಲಿನ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಯನ್ನು ಬಡಗುತಿಟ್ಟು ಭಾಗವತ ಹೊನ್ನಾವರದ ಗೋಪಾಲಕೃಷ್ಣ ಶಂಕರ ಭಟ್ ಅವರಿಗೆ, 2023ನೇ ಸಾಲಿನ ಪುಸ್ತಕ ಬಹುಮಾನವನ್ನು ಉತ್ತರ ಕನ್ನಡದ ಸತೀಶ್ ಜಿ.ನಾಯ್ಕ ಹಾಗೂ ಉಡುಪಿಯ ಎಚ್.ಸುಜಯೀಂದ್ರ ಹಂದೆ ಅವರಿಗೆ, 2022ನೇ ಸಾಲಿನ ಪುಸ್ತಕ ಬಹುಮಾನವನ್ನು ಉಡುಪಿಯ ವಿದ್ವಾನ್ ಗಣಪತಿ ಭಟ್ ಹಾಗೂ ಬೆಂಗಳೂರಿನ ಮನೋರಮಾ ಬಿ.ಎನ್. ಅವರಿಗೆ ಹಾಗೂ 2021ನೇ ಸಾಲಿನ ಪುಸ್ತಕ ಪ್ರಶಸ್ತಿಯನ್ನು ಪ್ರಸಂಗ ಕರ್ತ ಪೊಳಲಿ ನಿತ್ಯಾನಂದ ಕಾರಂತ ಅವರಿಗೆ ಪ್ರದಾನ ಮಾಡಲಾಯಿತು.
ಮೇಯರ್ ಮನೋಜ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್., ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಭಾಗವಹಿಸಿದ್ದರು.
ನಾನು ಮೇಳಕ್ಕೆ ಸೇರಿದಾಗ ‘ಅವನನ್ನು ಚೌಕಿಗೆ ಬರಲಿಕ್ಕೆ ಬಿಡಬೇಡಿ’ ಎಂದ ಕಲಾವಿದರೇ ಹೆಚ್ಚು. ಪ್ರಸಾದ ನೀಡದ ಕಾರಣಕ್ಕೆ ನಾನು ವಾಪಾಸ್ ಬಂದಿದ್ದೆ. ಅಂತಹ ಕಲಾವಿದನಿಗೆ ಪಾರ್ತಿಸುಬ್ಬ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದಬನ್ನಂಜೆ ಸಂಜೀವ ಸುವರ್ಣ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಕಲಾವಿದ
ಗಣ್ಯರ ಗೈರು: ಪ್ರಶಸ್ತಿ ಪುರಸ್ಕೃತರಿಂದ ತರಾಟೆ ಪ್ರಶಸ್ತಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಆರು ಶಾಸಕರು ಐವರು ವಿಧಾನ ಪರಿಷತ್ ಸದಸ್ಯರ ಹೆಸರಿತ್ತು. ಸ್ಥಳೀಯ ಶಾಸಕ ಡಿ.ವೇದವ್ಯಾಸ ಕಾಮತ್ ಹಾಗೂ ಮೇಯರ್ ಮನೋಜ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಕೆಲಹೊತ್ತು ಇದ್ದು ನಿರ್ಗಮಿಸಿದರು. ಇವರ ಹೊರತಾಗಿ ಬೇರೆ ಯಾವೊಬ್ಬ ಜನಪ್ರತಿನಿಧಿಯೂ ಭಾಗವಹಿಸಿರಲಿಲ್ಲ. ಇದು ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ ಇರುಸು–ಮುರುಸು ಉಂಟು ಮಾಡಿತು. ಈ ಬಗ್ಗೆ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡ ಪ್ರಶಸ್ತಿ ಪುರಸ್ಕೃತ ಜಬ್ಬಾರ್ ಸಮೋ ‘ಇಷ್ಟೂ ಮಂದಿ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾವಗಹಿಸದಿರುವುದಕ್ಕೆ ಕಾರಣ ಹೇಳಬೇಕು. ಯಕ್ಷಗಾನ ಕ್ಷೇತ್ರದಲ್ಲಿ ಆರೂವರೆ ದಶಕ ಸಾಧನೆ ಮಾಡಿರುವ ಕಲಾವಿದರೂ ಇಲ್ಲಿದ್ದಾರೆ. ಇಂತಹವರಿಗೆ ಸರ್ಕಾರವು ಸಾಮಾಜಿಕ ಮನ್ನಣೆ ನೀಡುವ ಕಾರ್ಯಕ್ರಮ ಇದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಭರವಸೆ ನೀಡಿದವರು ಇಲ್ಲಿ ಇರಲೇಬೇಕಿತ್ತು. ಗೈರಾದುದಕ್ಕೆ ಅವರು ಕಾರಣವನ್ನು ಹೇಳಲೇಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.