ADVERTISEMENT

ಯಕ್ಷಗಾನದ ತೆಂಕು ತಿಟ್ಟಿನ ಹೆಸರಾಂತ ಭಾಗವತ ಬಲಿಪ ನಾರಾಯಣ ಭಾಗವತ ನಿಧನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 2:07 IST
Last Updated 17 ಫೆಬ್ರುವರಿ 2023, 2:07 IST
ಬಲಿಪ ನಾರಾಯಣ ಭಾಗವತ
ಬಲಿಪ ನಾರಾಯಣ ಭಾಗವತ    

ಮಂಗಳೂರು: ತೆಂಕು ತಿಟ್ಟಿನ ಹೆಸರಾಂತ ಭಾಗವತ ಹಾಗೂ ಕಂಚಿನ ಕಂಠದ ‘ಬಲಿಪ ಶೈಲಿ’ಯ ಹಾಡುಗಾರಿಕೆಗೆ ಖ್ಯಾತವಾಗಿರುವ ಬಲಿಪ ನಾರಾಯಣ ಭಾಗವತ (85) ಅವರು ಗುರುವಾರ ನಿಧನರಾದರು.

ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 1938ರ ಮಾರ್ಚ್ 13ರಂದು ಜನಿಸಿದ್ದ ಬಲಿಪ ನಾರಾಯಣ ಭಾಗವತರು ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ ದಂಪತಿಯ ಪುತ್ರ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಾರೂರು ನೂಯಿಯಲ್ಲಿ ವಾಸವಿದ್ದರು.

ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದೇ ಖ್ಯಾತವಾಗಿರುವ ಬಲಿಪರು ತೆಂಕುತಿಟ್ಟಿನ ಹಿರಿಯ ಭಾಗವತರು. 13ನೇ ವಯಸ್ಸಿಗೆ ಯಕ್ಷಗಾನ ರಂಗವನ್ನು ಪ್ರವೇಶಿಸಿದ್ದರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಯಕ್ಷಗಾನದ ಹಲವಾರು ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನದ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದಾರೆ. ಯಕ್ಷಗಾನದ ಪ್ರಸಂಗಗಳ ಪದ್ಯಗಳು ಅವರಿಗೆ ಕಂಠಪಾಠವಾಗಿದ್ದವು. ಅನಗತ್ಯ ಆಲಾಪನೆಗಳಿಲ್ಲದೇ, ರಾಗ ವಿಸ್ತಾರ ಮಾಡದೇ ಯಕ್ಷಗಾನ ಪ್ರಸಂಗದ ಛಂದಸ್ಸಯ ಹಾಗೂ ತಾಳಕ್ಕೆ ಪೂರಕವಾಗಿ ಶುದ್ಧ ಯಕ್ಷಗಾನೀಯ ಶೈಲಿಯಲ್ಲಿ ಹಾಡುತ್ತಿದ್ದರು.

ADVERTISEMENT

ಬಲಿಪ ಅವರ ಅಜ್ಜ ಬಲಿಪ ನಾರಾಯಣ ಭಾಗವತರೂ ಯಕ್ಷಗಾನದ ಹೆಸರಾಂತ ಭಾಗವತರಾಗಿದ್ದು, ಬಲಿಪ ಶೈಲಿಯ ಹಾಡುಗಾರಿಕೆಯನ್ನು ‌ಹುಟ್ಟು ಹಾಕಿದ್ದರು. ಆ ಪರಂಪರೆಯನ್ನು ಮೊಮ್ಮಗನೂ ಮುಂದುವರಿಸಿದ್ದರು. ಬಲಿಪ ನಾರಾಯಣ ಭಾಗವತರ ಅವರ ಇಬ್ಬರು ಪುತ್ರರಾದ ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪ ಅವರೂ ಭಾಗವತರಾಗಿ ಈ ಶೈಲಿಯನ್ನು ಮುಂದುವರಿಸಿದ್ದರು.

ಐದು ದಿನಗಳ ಕಾಲ ಪ್ರದರ್ಶಿಸುವ ‘ದೇವೀ ಮಹಾತ್ಮೆ’ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದಾರೆ. ಯಕ್ಷಗಾನದ ಮಹತ್ವದ ಕೃತಿ ಇದಾಗಿದೆ. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಅವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಅಭಿಮಾನಿಗಳು ಸೇರಿ ಅವರ ಮನೆಯ ಸಮೀಪ ‘ಬಲಿಪ ಅಮೃತ ಭವನ’ವನ್ನು ನಿರ್ಮಿಸುವ ಮೂಲಕ ಗೌರವ ಸಲ್ಲಿಸಿದ್ದರು. ಅವರಿಗೆ ಸಂದ ಪ್ರಶಸ್ತಿ, ಸ್ಮರಣಿಕೆ, ಅವರ ಕೃತಿಗಳ ಸಂಗ್ರಹ ಈ ಭವನದಲ್ಲಿದೆ.

ನಾಲ್ವರ ಪುತ್ರರಲ್ಲಿ ಪ್ರಸಾದ ಭಟ್‌ ಬಲಿಪ ಅವರು ಕಳೆದ ವರ್ಷ ಅನಾರೋಗ್ಯದಿಂದ ನಿಧನರಾಗಿದ್ದರು. ಬಲಿಪ ಅವರ ಪುತ್ರರಾದ ಮಾಧವ ಬಲಿಪ ಹಿಮ್ಮೇಳ ಕಲಾವಿದರಾಗಿದ್ದಾರೆ. ಶಿವಶಂಕರ ಬಲಿಪರು ಭಾಗವತರಾಗಿದ್ದಾರೆ. ಇನ್ನೊಬ್ಬ ಪುತ್ರ ಶಶಿಧರ್ ಬಲಿಪ ಕೃಷಿಕರಾಗಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಗ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ' ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ, 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ 'ಪ್ರಶಸ್ತಿ, `ಅಗರಿ ಪ್ರಶಸ್ತಿ' ಶೇಣಿ ಪ್ರಶಸ್ತಿ, ಕವಿ ಮುದ್ದಣ ಪುರಸ್ಕಾರ, ಪಾರ್ತಿಸುಬ್ಬ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಬಲಿಪ ಅವರಿಗೆ ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.