ಮಂಗಳೂರು:‘ಸಹ ಕಲಾವಿದರ ಮೇಲಿನ ದೌರ್ಜನ್ಯ ಪ್ರಶ್ನಿಸಿದ ಕಾರಣಕ್ಕಾಗಿ ನನ್ನನ್ನು ಅವಮಾನಿಸಿ, ಕಟೀಲು ಯಕ್ಷಗಾನ ಮೇಳದಿಂದ ಹೊರ ಕಳಿಸಿರುವ ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಮತ್ತು ಬಳಗದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವೆಂಬರ್ 22ರಂದು ಮೇಳದ ಪ್ರಥಮ ಸೇವೆಯಾಟದ ದಿನ ನಡೆದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಮಾನನಷ್ಟ ಮೊಕದ್ದಮೆ ಹೂಡುವೆ. ಹೈಕೋರ್ಟ್‌ನಲ್ಲೂ ಮೊಕದ್ದಮೆ ಹೂಡುವೆ’ ಎಂದರು.
2017ರಿಂದ ಕಲಾವಿದರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಮೇಳದಿಂದ ಹೊರಹಾಕಿದ ಕಲಾವಿದರ ಪರ ಧ್ವನಿ ಎತ್ತಿದ್ದಕ್ಕಾಗಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಯಿತು. ನ್ಯಾಯ ಕೇಳಿದವರನ್ನು ಶಾಶ್ವತವಾಗಿ ಮೇಳದಿಂದ ಹೊರಹಾಕಲಾಯಿತು. ಅದರ ಮುಂದುವರಿದ ಭಾಗವೇ ಈಗ ನಡೆದಿರುವ ಘಟನೆ ಎಂದರು.
‘19 ವರ್ಷಗಳ ಅವಧಿಯಲ್ಲಿ ನಾನು ಯಾವುದೇ ಬೇಡಿಕೆ ಇರಿಸಿಲ್ಲ. ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಅವರು ನೀಡಿದ ಎಲ್ಲ ಸೂಚನೆಗಳನ್ನು ಪಾಲಿಸಿಕೊಂಡು ಬಂದಿದ್ದೇನೆ. ಯಾವತ್ತೂ, ಯಾವುದೇ ವಿಚಾರದಲ್ಲೂ ಬೇಡಿಕೆ ಇಟ್ಟಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಆಧಾರರಹಿತ’ ಎಂದು ಹೇಳಿದರು.
ಇದನ್ನೂ ಓದಿ:ಕಟೀಲು ಮೇಳದಿಂದ ಭಾಗವತ ಪಟ್ಲ ಹೊರಕ್ಕೆ
ತನ್ನ ವಿರುದ್ಧ ಆರೋಪ ಮಾಡಿರುವ ದೇವಿ ಪ್ರಸಾದ್ ಶೆಟ್ಟಿ ಮತ್ತು ಹರಿನಾರಾಯಣ ಆಸ್ರಣ್ಣ ಅವರು ಯಾವುದೇ ಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ. ಜೀವನದಲ್ಲಿ ಯಾವುದೇ ಕಲಾವಿದರಿಗೂ ಇಂತಹ ಅವಮಾನ ಆಗಬಾರದು ಎಂದರು.
ಕಟೀಲು ಮೇಳದಲ್ಲಿ ಕಲಾವಿದರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮೇಳವನ್ನು ಸರ್ಕಾರವೇ ಸುಪರ್ದಿಗೆ ತೆಗೆದುಕೊಳ್ಳಬೇಕು. ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಕಲಾವಿದರ ಹಿತವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಮೇಳದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗೂ ದೇವಿ ಪ್ರಸಾದ್ ಶೆಟ್ಟಿ ಅವರ ಅಳಿಯ ಸುಪ್ರೀತ್ ರೈ ನೇರ ಕಾರಣ. ಮೇಳದಲ್ಲಿ ಯಾವುದೇ ಜವಾಬ್ದಾರಿ ಹೊಂದಿರದ ಅವರು ಕಲಾವಿದರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸತಿಶ್ ಶೆಟ್ಟಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.