ಉಜಿರೆ: ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಬಿ.ಯಶೋವರ್ಮ (67) ಅವರ ನಿಧನ ಸುದ್ದಿ ಉಜಿರೆ ಹಾಗೂ ಸುತ್ತಲಿನ ಜನರನ್ನು ಶೋಕದಲ್ಲಿ ಮುಳುಗಿಸಿದೆ.
ವಿದ್ಯಾ ಸಂಸ್ಥೆಗಳ ಪುನಶ್ಚೇತನದಲ್ಲಿ ಅವರ ಹೆಜ್ಜೆ ಗುರುತು ಅಳಿಸಲಾಗದ್ದು. ಉತ್ತಮ ವಾಗ್ಮಿ, ಶಿಸ್ತಿನ ಸಿಪಾಯಿ, ನೇರ ನಡೆ-ನುಡಿಯ ದಕ್ಷ ಆಡಳಿತಗಾರ ರಾಗಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಜೈನ್ ಮಿಲನ್ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲ್ಲೂಕು ಘಟಕದ ಅಧ್ಯಕ್ಷ ರಾಗಿ, ಧರ್ಮಸ್ಥಳದಲ್ಲಿ ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೇಳನ ಸಮಿತಿಯ ಕಾರ್ಯದರ್ಶಿಯಾಗಿ, ಮಂಗಳೂರು ವಿವಿ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರದು ಬಹುಮುಖಿ ವ್ಯಕ್ತಿತ್ವ.
ಎಸ್‌ಡಿಎಂ ಕಾಲೇಜಿನಲ್ಲಿ ‘ನಿನಾದ’ ಬಾನುಲಿ ಕೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ಹೈಟೆಕ್ ಸ್ಪರ್ಶ, ಆಸಕ್ತಿಯ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ, ವೃತ್ತಿ ಮಾರ್ಗದರ್ಶನ ಘಟಕ, ಇ- ಬುಕ್ ರೀಡಿಂಗ್, ಆಪ್ತ ಸಲಹಾ ಕೇಂದ್ರ, ಆನ್‌ಲೈನ್ ಮಾಹಿತಿ, ಯಕ್ಷಗಾನ ಮತ್ತು ನಾಟಕ ತರಬೇತಿ ಹೀಗೆ ಹಲವಾರು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದವರು ಯಶೋವರ್ಮ.
ಔಷಧ ಗಿಡಮೂಲಿಕೆಗಳ ಸಸ್ಯೋದ್ಯಾನ, ಈಜುಕೊಳ, ನೀರು ಮತ್ತು ಆಹಾರದ ಹಿತ- ಮಿತ ಬಳಕೆ, ಶ್ರಮ ಸಂಸ್ಕೃತಿ ಬಗ್ಗೆ ಮಾರ್ಗ ದರ್ಶನ ಇವು ಯಶೋವರ್ಮರ ಕಲ್ಪನೆಯಲ್ಲಿ ಮೂಡಿಬಂದ ಕಾರ್ಯಕ್ರಮ ಗಳಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಉಜಿರೆಗೆ ಭೇಟಿ ನೀಡಿದಾಗ ಅವರು ಮಾಡಿದ ಕಾರ್ಯಕ್ರಮ ನಿರೂಪಣೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಜ್ಞಾನ ಕಾಶಿಯನ್ನು ಸಸ್ಯಕಾಶಿಯಾಗಿ ರೂಪಿಸಿದ ಹೆಗ್ಗಳಿಕೆ ಇವರದಾಗಿದೆ.
ಬೆಳಿಗ್ಗೆ ಬೆಂಗಳೂರಿಗೆ: ಯಶೋವರ್ಮರ ಮೃತದೇಹ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಸಿಂಗಪುರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ. ಅಲ್ಲಿಂದ ಆಂಬುಲೆನ್ಸ್ ಮೂಲಕ ಚಾರ್ಮಾಡಿಗೆ ತಲುಪಲಿದೆ. ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಿಂದ ಉಜಿರೆ ವೃತ್ತದವರೆಗೆ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಉಜಿರೆ ವೃತ್ತದಿಂದ ಎಸ್‌ಡಿಎಂ ಕಾಲೇಜಿನವರೆಗೆ ಅಭಿಮಾನಿ ಗಳ ಪಾದಯಾತ್ರೆಯ ಮೆರವಣಿಗೆಯಲ್ಲಿ ಕರೆತಂದು, ಕಾಲೇಜಿನಲ್ಲಿ ಮಧ್ಯಾಹ್ನ 2ರಿಂದ 5.30ರವರೆಗೆ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಯಶೋವರ್ಮ ಅವರ ಅಂತಿಮ ದರ್ಶನ ವ್ಯವಸ್ಥೆಯ ಕುರಿತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. ಮೃತರ ಗೌರವಾರ್ಥ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉಜಿರೆ ಪೇಟೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದಾಗಿ ವರ್ತಕ ಸಂಘದ ಅಧ್ಯಕ್ಷ ಅರವಿಂದ್ ಕಾರಂತ ತಿಳಿಸಿದ್ದಾರೆ.ಉಜಿರೆ ಪೇಟೆಯಲ್ಲಿ ಹರತಾಳ ಆಚರಿಸುವುದಾಗಿ ಉಜಿರೆ ಆಟೊ ರಿಕ್ಷಾ ಮಾಲೀಕ ಚಾಲಕ ಸಂಘ ಮತ್ತು ಗ್ಯಾರೇಜ್ ಮಾಲೀಕರ ಸಂಘವು ನಿರ್ಧರಿಸಿದೆ.
ಸಭೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ‘ನಾಡಿನ ಶಿಕ್ಷಣ ವ್ಯವಸ್ಥೆಗೆ ಯಶೋವರ್ಮ ಅವರು ಅನನ್ಯ ಕಾಣಿಕೆ ನೀಡಿದ್ದು, ಅವರ ಅಂತಿಮ ಯಾತ್ರೆಯನ್ನು ಗೌರವಯುತವಾಗಿ ನಡೆಸಲು ಸಹಕಾರ ನೀಡಬೇಕು’ ಎಂದು ಕೋರಿದರು.
ಸಭೆಯಲ್ಲಿ ಯೋಜನೆಯ ಅಧಿಕಾರಿಗಳು, ಶರತ್‍ಕೃಷ್ಣ ಪಡ್ವೆಟ್ನಾಯ, ಲಕ್ಷ್ಮೀ ಗ್ರೂಪ್ಸ್‌ನ ಮೋಹನ್, ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ವೀರೇಂದ್ರ ಹೆಗ್ಗಡೆ ಸಂತಾಪ
‘ನಮ್ಮ ಬಂಧು ಹಾಗೂ ಎಸ್‌ಡಿಎಂ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಆಗಿದ್ದ ಡಾ.ಬಿ. ಯಶೋವರ್ಮನ ಅಕಾಲಿಕ ನಿಧನದಿಂದ ಆಘಾತವಾಗಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.
‘ಶಿಕ್ಷಣ ಸಂಸ್ಥೆಗಳ ಪ್ರಗತಿಯಲ್ಲಿ ಅವನ ಅಪಾರ ಶ್ರಮವಿದೆ ಮತ್ತು ಕೊಡುಗೆ ಇದೆ. ಸಮಸ್ಯೆಗಳು ಬಂದಾಗ ಕುಗ್ಗದೆ, ಯಶಸ್ಸು ಬಂದಾಗ ಹಿಗ್ಗದೆ ಸಮಚಿತ್ತವನ್ನು ಕಾಪಾಡಿಕೊಂಡು ಹೋಗುವ ನಿಜವಾದ ಜ್ಞಾನಿಯಾಗಿದ್ದ ಎನ್ನಬಹುದು. ಆತನ ನಿಧನ ನಮ್ಮ ಕುಟುಂಬಕ್ಕೂ, ಕ್ಷೇತ್ರಕ್ಕೂ ಎಲ್ಲಾ ಸಂಸ್ಥೆಗಳಿಗೂ ತುಂಬಲಾರದ ನಷ್ಟವಾಗಿದೆ’ ಎಂದು ಕಂಬನಿ ಮಿಡಿದಿದ್ದಾರೆ.
ಗಣ್ಯರ ಸಂತಾಪ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಕೆ.ಪ್ರತಾಪಸಿಂಹ ನಾಯಕ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶ್ರೀನಾಥ್ ಎಂ.ಪಿ., ಮಾಜಿ ಶಾಸಕ ಕೆ. ವಸಂತ ಬಂಗೇರ,ಎಸ್‌ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.