ಮಂಗಳೂರು: ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಯೆನೆಪೋಯ ದಂತವೈದ್ಯ ಕಾಲೇಜಿನ ಬಾಯಿ ಮತ್ತು ರೇಡಿಯಾಲಜಿ ವಿಭಾಗದ ಆಶ್ರಯದಲ್ಲಿ ಭಾರತೀಯ ಬಾಯಿ ವೈದ್ಯಕೀಯ ಮತ್ತು ರೇಡಿಯಾಲಜಿ ಅಕಾಡೆಮಿಯ 35ನೇ ರಾಷ್ಟ್ರೀಯ ಸಮ್ಮೇಳನ ಇದೇ 22ರಿಂದ 24ರವರೆಗೆ ವಿಶ್ವವಿದ್ಯಾಲಯದ ದೇರಳಕಟ್ಟೆಯ ಪ್ರಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಸಮ್ಮೇಳನ ಸಂಘಟನಾ ಅಧ್ಯಕ್ಷ ಡಾ.ಪ್ರಶಾಂತ್ ಶೆಣೈ, ‘ಇದೇ 22ರಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನವನ್ನು ವಿಶ್ವವಿದ್ಯಾಲಯದ ಕುಲಪತಿ ಅಬ್ದುಲ್ಲ ಕುಂಞಿ ಉದ್ಘಾಟಿಸುವರು. ‘ತಂಬಾಕು ನಿಷೇಧದ ರಾಷ್ಟ್ರೀಯ ನಕ್ಷೆ' ಕುರಿತು ಬೆಂಗಳೂರಿನ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ವಿಚಾರ ಮಂಡಿಸುವರು. ಇಂಟರ್‌ಪೋಲ್ ಫೋರೆನ್ಸಿಕ್ ಓಡೊಂಟಾಲಜಿ ಘಟಕದ ಸದಸ್ಯೆ ಡಾ.ಹೇಮಲತಾ ಪಾಂಡೆ, ಅಮೆರಿಕನ್ ಅಕಾಡೆಮಿಯ ಓರಲ್ ಮತ್ತು ಮ್ಯಾಕ್ಸಿಲೊ ಫೇಷಿಯಲ್ ರೇಡಿಯಾಲಜಿಯ ಮಾಜಿ ಅಧ್ಯಕ್ಷ ಡಾ. ಸಂಜಯ ಮಲ್ಯ, ಯೆನೆಪೋಯ ವಿವಿ ಉಪಕುಲಪತಿ ಡಾ. ವಿಜಯಕುಮಾರ್ ಭಾಗವಹಿಸುವರು’ ಎಂದರು.
‘ಬಾಯಿ ಆರೋಗ್ಯದಲ್ಲಿ ತಾಂತ್ರಿಕ ಪ್ರಗತಿ, ಆರಂಭಿಕ ಹಂತದ ಬಾಯಿ ಕ್ಯಾನ್ಸರ್ ಪತ್ತೆ, ರೇಡಿಯಾಲಜಿ ಮತ್ತು ಫೊರೆನ್ಸಿಕ್ ಓಡೊಂಟಾಲಜಿ ಕುರಿತು ಸಂವಾದಗಳು, ಜ್ಞಾನ ವಿನಿಮಯ, ಹೊಸ ಸಂಶೋಧನೆಗಳ ಪ್ರಸ್ತುತಿಗಳಿಗೆ ಸಮ್ಮೇಳನ ವೇದಿಕೆ ಕಲ್ಪಿಸಲಿದೆ. ದೇಶ-ವಿದೇಶಗಳ 900ಕ್ಕೂ ಹೆಚ್ಚು ಪ್ರತಿನಿಧಿಗಳು, ತಜ್ಞರು, ಸಂಶೋಧಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸುವರು’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ರಚನಾ ಪ್ರಭು, ವಿಜ್ಞಾನ ಸಮಿತಿ ಅಧ್ಯಕ್ಷೆ ಡಾ.ವೀಣಾ ಕೆ.ಎಂ. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.