ಸಂಸ್ಕೃತದಲ್ಲಿ ಸುಪ್ತ ಎಂದರೆ ಮಲಗುವುದು. ವೀರಾ ಎಂದರೆ ಶ್ರೇಷ್ಠ ವ್ಯಕ್ತಿ ಅಥವಾ ಹೀರೊ. ಆಸನ ಎಂದರೆ ದೇಹದ ನಿಲುಮೆ ಯಾ ಭಂಗಿ ಆಗಿದೆ. ಇದು ಹೀರೊ ಪೋಸ್‍ನ ಸುಪೈನ್ ರೂಪಾಂತರವಾಗಿದ್ದು, ಸೊಂಟದ ಭಾಗುವಿಕೆಗಳು, ತೊಡೆಗಳು ಮತ್ತು ಪಾದಗಳನ್ನು ಮತ್ತಷ್ಟು ವಿಸ್ತರಿಸುತ್ತದೆ. ಇದೊಂದು ಮಧ್ಯಂತರ ಮಟ್ಟದ ಭಂಗಿಯಾಗಿದೆ.
ಅಭ್ಯಾಸ ಕ್ರಮ: ಜಮಖಾನದ ಮೇಲೆ ವೀರಾಸನ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಆಮೇಲೆ ಉಸಿರನ್ನು ಬಿಡುತ್ತಾ ನಿಧಾನವಾಗಿ ಕೈಗಳ ಸಹಾಯದಿಂದ ಬೆನ್ನು ಮತ್ತು ತಲೆಯನ್ನು ಹಿಂದಕ್ಕೆ ಬಾಗಿಸಿ ನೆಲಕ್ಕೆ ಒರಗಿಸಬೇಕು. ಆಮೇಲೆ ಎರಡೂ ಕೈಗಳನ್ನು ತಲೆ ಹಿಂದಕ್ಕೆ ನೇರವಾಗಿ ಚಾಚಬೇಕು. (ಚಿತ್ರದಲ್ಲಿರುವಂತೆ) ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಮ ಉಸಿರಾಟದಲ್ಲಿ ನೆಲೆಸಿ ಆಮೇಲೆ ಎದ್ದು ಕುಳಿತುಕೊಳ್ಳಿ.
ಉಪಯೋಗಗಳು: ಉಸಿರಾಟದ ಸಮಸ್ಯೆಗಳಿಂದ ಸಂಧಿವಾತದವರೆಗಿನ ಹಲವಾರು ದೈಹಿಕ ಕಾಯಿಲೆಗಳನ್ನು ಸರಿಪಡಿಸಲು ಈ ಭಂಗಿ ಸೂಕ್ತವಾಗಿರುತ್ತದೆ. ಜೀರ್ಣ ಕ್ರಿಯೆಯನ್ನು ಬಹಳವಾಗಿ ಸುಧಾರಿಸುತ್ತದೆ. ಮಲಗುವ ಅಸ್ವಸ್ಥತೆ ನಿವಾರಿಸುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಇದು ಸಹಾಯ ಮಾಡುತ್ತದೆ. ಮುಟ್ಟಿನ ನೋವು ನಿಯಂತ್ರಣವಾಗುತ್ತದೆ. ಉಬ್ಬಿರುವ ರಕ್ತನಾಳಗಳು ಪರಿಸ್ಥಿತಿಯನ್ನು ಗುಣಪಡಿಸಲು ಈ ಆಸನ ಸಹಕಾರಿ ಆಗುತ್ತದೆ. ಅಸ್ಥಿರಜ್ಜುಗಳು ಮತ್ತು ಮೊಣಕಾಲಿನ ಅನೇಕ ಸಣ್ಣ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಸುಪ್ತ ವೀರಾಸನ ಅಭ್ಯಾಸ ಮಾಡುವುದರಿಂದ ಕಾಲಿನ ನರಗಳ ಸೆಳೆತ ಮತ್ತು ದೋಷ ನಿವಾರಣೆಯಾಗುತ್ತವೆ. ಬೆನ್ನು ನೋವು ಮತ್ತು ಕಿಬ್ಬೊಟ್ಟೆ ನೋವು ನಿವಾರಣೆಯಾಗಲು ಈ ಆಸನ ಸಹಕಾರಿ.
ವಿ.ಸೂ: ಬೆನ್ನು, ಮೊಣಕಾಲು ಅಥವಾ ಪಾದದ ಸಮಸ್ಯೆಗಳ ಇತಿಹಾಸವಿರುವವರು ವೈದ್ಯರೊಂದಿಗೆ ಸಮಾಲೋಚಿಸಿ, ತೀವ್ರ ನೋವಿದ್ದಾಗ ಈ ಆಸನ ಅಭ್ಯಾಸ ಮಾಡಬಾರದು. ಅಗತ್ಯವಿದ್ದಲ್ಲಿ ಪರಿಕರಗಳನ್ನು ಬಳಸಿ ಗುರುಗಳ ಮೂಲಕ ಯೋಗಾಭ್ಯಾಸ ಕಲಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.