ADVERTISEMENT

ಮಂಗಳೂರು: ನಸುಕಿನಿಂದ ರಾತ್ರಿವರೆಗೆ ‘ಯೋಗ ವೈವಿಧ್ಯ‘

‘ಯೋಗ ಏಕಾಹ 2024’ ಸಂಪನ್ನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 4:39 IST
Last Updated 30 ಸೆಪ್ಟೆಂಬರ್ 2024, 4:39 IST
ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ಆಯೋಜಿಸಿದ್ದ ‘ಯೋಗ ಏಕಾಹ 2024' ಕಾರ್ಯಕ್ರಮದಲ್ಲಿ ಆವಿಷ್ಕಾರ ಯೋಗ ತಂಡದವರು ಯೋಗಾಸನ ಪ್ರದರ್ಶಿಸಿದರು : ಪ್ರಜಾವಾಣಿ ಚಿತ್ರ
ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ಆಯೋಜಿಸಿದ್ದ ‘ಯೋಗ ಏಕಾಹ 2024' ಕಾರ್ಯಕ್ರಮದಲ್ಲಿ ಆವಿಷ್ಕಾರ ಯೋಗ ತಂಡದವರು ಯೋಗಾಸನ ಪ್ರದರ್ಶಿಸಿದರು : ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದ ಮಣ್ಣಗುಡ್ಡೆಯ ಪ್ರತಾಪನಗರದ ಸಂಘ ನಿಕೇತನದಲ್ಲಿ ಸೂರ್ಯೊದಯದಿಂದ ಗೋಧೂಳಿ ಸಮಯದವರೆಗೆ ಯೋಗದ ವಿವಿಧ ಆಸನಗಳ ಪ್ರದರ್ಶನ ನಿರಂತರವಾಗಿ ನಡೆಯಿತು. ಮಕ್ಕಳಿಂದ ವಯೋವೃದ್ಧರವರೆಗೆ ನೂರಾರು ಮಂದಿ ಸೂರ್ಯ ನಮಸ್ಕಾರ,  ನೃತ್ಯ ಯೋಗ, ಯೋಗ ಗುಚ್ಛ, ಚಂದ್ರ ನಮಸ್ಕಾರದಂತಹ ಸಾಮೂಹಿಕ ಯೋಗ ಪ್ರಯೋಗಗಳ ಮೂಲಕ ಯೋಗವನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡಿದರು.

ಕರ್ನಾಟಕ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಮತ್ತು ಪ್ರತಾಪನಗರದ ಕೇಶವ ಯೋಗ ಕೇಂದ್ರದ ಆಶ್ರಯದಲ್ಲಿ ಸಂಘನಿಕೇತನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಯೋಗ ಏಕಾಹ 2024’ ಈ ವಿಶೇಷ ಕಾರ್ಯಕ್ರಮಕ್ಕೆ ವೇದಿಕೆ ಕಲ್ಪಿಸಿತು. ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದವರ ಸೂರ್ಯ ನಮಸ್ಕಾರದ ಮೂಲಕ  ಆರಂಭವಾದ ಕಾರ್ಯಕ್ರಮ  ಗೋಧೂಳಿ ಸಮಯದಲ್ಲಿ ಚಂದ್ರ ನಮಸ್ಕಾರದ ಮೂಲಕ ಸಂಪನ್ನವಾಯಿತು.

ನಗರದ ಆವಿಷ್ಕಾರ ಯೋಗ ಕೇಂದ್ರ, ದೇಲಂಪಾಡಿ ಯೋಗ ಪ್ರತಿಷ್ಠಾನ, ಶಾರದಾ ವಿದ್ಯಾಲಯ, ಪ್ರತಾಪನಗರದ ಕೇಶವ ಯೋಗ ಕೇಂದ್ರ,  ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಪ್ರೌಢಶಾಲೆ, ತಪಸ್ವಿ ಯೋಗ ಕೇಂದ್ರ, ಪತಂಜಲಿ ಯೋಗ ಸಮಿತಿ, ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾಲಯ, ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವಿದ್ಯಾಲಯ, ಸಂಜನಾ ಮೂರ್ತಿಯವರ ತಂಡ, ಕಾರ್ಕಳದ ಉದ್ಭವ್‌, ನಗರದ ಮಾನ್ವಿ, ಲಾವಣ್ಯ, ಸೂರಿಂಜೆಯ ನಿಭಾ ಮತ್ತು ಲಜ್ಜಾ, ಕುಂದಾಪುರದ ಲಾಸ್ಯ, ನಗರದ ಅರುಣ್‌ ಕುಮಾರ್‌ ಯೋಗಾಸನಗಳನ್ನು ಪ್ರದರ್ಶಿಸಿದರು. 

ADVERTISEMENT

ಸಮಾರೋಪದಲ್ಲಿ ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ‘ಶರೀರ ಮತ್ತು ಮನಸ್ಸನ್ನು ಬಾಗಿಸುವ ಯೋಗ ಪದ್ಧತಿ ಭಾರತೀಯ ಹಿರಿಯರ ಸಂಶೋಧನೆ. ನಮ್ಮ ಪ್ರಾಣ ಶಕ್ತಿಯನ್ನು ಉಳಿಸಿ ಬೆಳಸಲು ಆಸನ ಮತ್ತು ಪ್ರಾಣಾಯಾನ ಮುಖ್ಯ. ಧ್ಯಾನ, ಪ್ರಾಣಾಯಾಮ, ಯೋಗ ಜೀವನದ ಅಂಗವಾಗಬೇಕು. ನಮ್ಮ ಪರಂಪರಾಗತ ಯೋಗ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಭಾರತೀಯ ಪದ್ಧತಿಯನ್ನು ಉಳಿಸಿಕೊಳ್ಳಬೇಕಿದೆ. ಪರಸ್ಪರ ವಿನಿಮಯ ಮಾಡುವ ಮೂಲಕ ಭಾರತೀಯ ಜೀವನ ಪದ್ಧತಿ ಚಿರಾಯುವಾಗುವಂತೆ ಮಾಡಬೇಕು. ಜೊತೆಗೆ ವಿದೇಶೀಯರಿಗೂ ಹಂಚಬೇಕು’ ಎಂದರು.  

‘ಮನುಷ್ಯ ಬದುಕಲು ಉಸಿರಾಟ ಮುಖ್ಯ. ಉಸಿರಾಡುವ ಆಮ್ಲಜನಕದ ಸಂಪೂರ್ಣ ಸದ್ವನಿಯೋಗ ಆಗಲು ಪ್ರಾಣಾಯಾಮದಲ್ಲಿ ಪ್ರಭುತ್ವ ಪಡೆಯಬೇಕು. ಸಾಮಾನ್ಯ ಮನುಷ್ಯ ಒಂದು ದಿನದಲ್ಲಿ  21,600 ಸಲ ಉಸಿರಾಟ ನಡೆಸುತ್ತಾನೆ. ಉಸಿರಾಟವು ನಿಧಾನವಾದಂತೆ ಆಯಸ್ಸು ಜಾಸ್ತಿ. ಒಂದು ಉಸಿರಿನ ಅವಧಿಯನ್ನು ನಾಲ್ಕು ಸೆಕೆಂಡ್‌ ಬದಲು ಎರಡು ಸೆಕೆಂಡ್‌ಗೆ ಇಳಿಸಿದರೆ ಆಯಸ್ಸು ಅರ್ಧಕ್ಕೆ ಇಳಿದೀತು. ನಾಲ್ಕರ ಬದಲು ಎಂಟು ಸೆಕೆಂಡ್‌ಗೆ ಹೆಚ್ಚಿಸಿದರೆ ಆಯಸ್ಸು ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತದೆ. ಆಸನದಲ್ಲಿ ಸ್ಥಿರತೆ ಸಾಧಿಸಿ, ನಂತರ ರೇಚಕ, ಕುಂಭಕ, ಪೂರಕವನ್ನು ಒಳಗೊಂಡ ಪ್ರಣಾಯಾಮ ಮಾಡುವುದನ್ನು ಸಿದ್ಧಿಸಿಕೊಳ್ಳಬೇಕು.  ಆಸನ ಸಿದ್ಧಿಸದೇ ಪ್ರಾಣಾಯಾಮ ಮಾಡಿದರೆ ಅಡ್ಡ ಪರಿಣಾಮ ಆಗಬಹುದು. ಇವತ್ತು ಜನ ಆಮ್ಲಜನಕವನ್ನು  ಪೂರ್ತಿ ಒಳಗೆ ತೆಗೆದುಕೊಳ್ಳುತ್ತಲೂ, ಇಂಗಾಲದ ಡಯಾಕ್ಸೈಡ್‌ ಅನ್ನು ಪೂರ್ತಿ ಹೊರಗೆ ಬಿಡುತ್ತಲೂ ಇಲ್ಲ’ ಎಂದರು.

‘ಯೋಗವು ಸಾತ್ವಿಕತೆ ಸಂಪಾದನೆಗೆ ಸಾಧನವಾಗಬೇಕು. ಕ್ರೌರ್ಯ ಮತ್ತು ಖಡ್ಗದಿಂದ ಧರ್ಮ ಸಂಸ್ಥಾಪನೆ ಮಾಡುವ ವರ್ಗವೊಂದಿದೆ.  ದುರ್ಬಲ ಎನಿಸುವಷ್ಟು ಸಾತ್ವಿಕತೆಯು ಬೇಡ. ಆತ್ಮರಕ್ಷಣೆಗೆ ಬೇಕಾದ ತರಬೇತಿ ಅಗತ್ಯವೂ ಇದೆ. ಹೆಣ್ಣು ಮಕ್ಕಳೂ ಸ್ವಯಂರಕ್ಷಣೆಗಾಗಿ ಭರತನಾಟ್ಯದ ಜೊತೆ ಕರಾಟೆಯಂತಹ ಶಿಕ್ಷಣವನ್ನೂ  ಪಡೆಯುವ ಅಗತ್ಯವಿದೆ.  ಆತ್ಮ ರಕ್ಷಣೆಯ ಜೊತೆಗೆ ಸಮಾಜದ ಹಾಗೂ ಬಂಧುಗಳ ರಕ್ಷಣೆಗಾಗಿ ತರಬೇತಿ ಪಡೆಯುವ ಯುವ ಜನರನ್ನು ರೂಪಿಸಬೇಕು‘ ಎಂದರು.  

ಕೇಶವ ಸ್ಮೃತಿ ಸಂವರ್ಧನ ಸಮಿತಿ ಕಾರ್ಯದರ್ಶಿ ಗಜಾನನ ಪೈ,‘ಶರೀರ, ಬುದ್ಧೀ ಮನಸ್ಸು ಆತ್ಮವನ್ನು ಪರಸ್ಪರ ಸಂಯೋಜನೆ ಮಾಡಿ ಸ್ವಸ್ಥ ಶರೀರ ಮತ್ತು ಸ್ವಸ್ತ ಮನಸ್ಸನ್ನು ಸಾಧಿಸುವುದೇ ಯೋಗದ ಉದ್ದೇಶ. ಶರೀರದ ಜೊತೆ ಸಮಾಜ ಹಾಗೂ ದೇಶವೂ ಸ್ವಸ್ಥವಾಗಿರಬೇಕು’ ಎಂದರು.

‘ಕುಟುಂಬ ಸಮಾಜ ವೃಕ್ಷದ ಬೇರು ಕುಟುಂಬ. ಅದು ಸ್ವಸ್ಥವಾಗಿದ್ದರೆ ಸಮಾಜ ವೃಕ್ಷವೂ ಆರೋಗ್ಯಯುತವಾಗಿರುತ್ತದೆ. ಪ್ರತಿಯೊಂದು ಕುಟುಂಬ ಹಿಂದೂ ಸಂಸ್ಕೃತಿ ಬಿಂಬಿಸುವಂತೆ ಮನೆಯ ವಾತಾವರಣ ಇರಬೇಕು. ಮನೆ ಸಂಸ್ಕಾರ ಕೊಡುವ ವಿದ್ಯಾಲಯ, ಪ್ರೇರಣೆ ನೀಡುವ ದೇವಾಲಯ ಆಗಬೇಕು. ಅವಶ್ಯಕತೆ ಇರುವವರಿಗೆ ಸೇವೆ ಮಾಡುವ ಸೇವಾಲಯ ಅತಿಥಿ ಸತ್ಕಾರದ ಆದರಾಲಯ ಆಗಬೇಕು’ ಎಂದರು. 

‘ಸಮಾಜದಲ್ಲಿ ದೋಷ, ಕೊರತೆಗಳನ್ನು ಕಾಣುತ್ತಿದ್ದೇವೆ. ಎಲ್ಲರಿಗೂ ಸಮಪಾಲು ಸಮಬಾಳು ನೀಡುವ ನಿಟ್ಟಿನಲ್ಲಿ ಕುಟುಂಬಗಳು ಸಮಾಜದ ಜೊತೆ ಜೋಡಿಸಬೇಕು. ಎಲ್ಲರ ಬಾಳು ನೆಮ್ಮದಿ, ಸೌಹಾರ್ದದಿಂದ ಇರುವಂತೆ ಸಾಮರಸ್ಯದ ಸಮಾಜ ನಿರ್ಮಾಣವಾಗುವಂತೆ ಶ್ರಮಿಸಬೇಕು. ಪರಿಸರಕ್ಕೆ ಹಾನಿ ಆಗದಂತೆ ಪ್ಲಾಸ್ಟಿಕ್ ನಿರ್ಮೂಲನೆ, ನೀರಿನ ಸಂರಕ್ಷಣೆ, ಮರ ನೆಟ್ಟು ಪರಿಸರ ಸಂರಕ್ಷಿಸುವುದು ಧ್ಯೇಯವಾಗಬೇಕು’ ಎಂದರು.

ಸಮಾರೋಪದಲ್ಲಿ ಪತಂಜಲಿ ಯೋಗ ಶಿಕ್ಷಣ  ಪ್ರತಿಷ್ಠಾನದ ಅಧ್ಯಕ್ಷ ಏಕನಾಥ ಬಾಳಿಗ, ಕಾರ್ಯದರ್ಶಿ ಧನಂಜಯ ಕೆ. ಕೇಶವ ಯೋಗಕೇಂದ್ರದ ಅಧ್ಯಕ್ಷ ವಾಮನ ಶೆಣೈ,  ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಕಾವೂರು, ಪರಮೇಶ್ವರ ಪೂಜಾರಿ ಭಾಗವಹಿಸಿದ್ದರು.ಕಾರ್ಗಿಲ್ ಹೋರಾಟದಲ್ಲಿ ಭಾಗವಹಿಸಿದ್ದ ಯೋಧ ಪ್ರವೀಣ್‌ ಶೆಟ್ಟಿ ಪಿಲಾರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.