ADVERTISEMENT

ಕದ್ರಿ ದೇವಸ್ಥಾನದಲ್ಲಿ ಯುವಕನಿಂದ ದಾಂದಲೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 5:42 IST
Last Updated 10 ಜುಲೈ 2024, 5:42 IST
ಕದ್ರಿ ಮಂಜುನಾಥ ದೇವಸ್ಥಾನದ ಪ್ರಾಂಗಣಕ್ಕೆ ಯುವಕ ಚಲಾಯಿಸಿಕೊಂಡು ಬಂದಿದ್ದ ಬೈಕ್‌
ಕದ್ರಿ ಮಂಜುನಾಥ ದೇವಸ್ಥಾನದ ಪ್ರಾಂಗಣಕ್ಕೆ ಯುವಕ ಚಲಾಯಿಸಿಕೊಂಡು ಬಂದಿದ್ದ ಬೈಕ್‌   

ಮಂಗಳೂರು: ನಗರದ ಕದ್ರಿ ಮಂಜುನಾಥ ದೇವಸ್ಥಾನದ ಸನ್ನಿಧಿಯಲ್ಲಿ ಯುವಕನೊಬ್ಬ ಅರ್ಚಕರಿಗೆ ಹಲ್ಲೆ ನಡೆಸಿ, ಗರ್ಭ ಗುಡಿಗೆ ನುಗ್ಗಲು ಯತ್ನಿಸಿ, ತೀರ್ಥಮಂಟಪದ ಚಾವಣಿ ಏರಿ ಮಂಗಳವಾರ ಬೆಳಿಗ್ಗೆ ದಾಂಧಲೆ ನಡೆಸಿದ್ದಾನೆ. ಯುವಕ ನಡೆಸಿದ ರಂಪಾಟ ಕಂಡು ದೇವಸ್ಥಾನದ ಅರ್ಚಕರು ಹಾಗೂ ಸ್ಥಳದಲ್ಲಿದ್ದ ಭಕ್ತರು ದಿಕ್ಕೇತೋಚದಂತಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಯುವಕ ಬೆಳಿಗ್ಗೆ 7 ಗಂಟೆ ಸುಮಾರಿಗೆ ದೇವಸ್ಥಾನದ ಪ್ರಾಂಗಣಕ್ಕೆ ಬೈಕ್ ಚಲಾಯಿಸಿಕೊಂಡು ಪ್ರವೇಶಿಸಿದ್ದ.  ಬಳಿಕ ಪ್ರಮುಖ ದ್ವಾರದ ಮೂಲಕ ಮಂಜುನಾಥ ಸ್ವಾಮಿ ದೇವಸ್ಥಾನದ ಒಳಗೆ ಪ್ರವೇಶಿಸಿದ್ದ. ಬಳಿಕ ಅಣ್ಣಪ್ಪ ಪಂಜುರ್ಲಿ ಗುಡಿಯ ಬಾಗಿಲು ಒದ್ದಿದ್ದ. ತಡೆಯಲು ಬಂದ ಅರ್ಚಕರ ಮೇಲೂ ಹಲ್ಲೆ ನಡೆಸಿದ್ದ. ಅಣ್ಣಪ್ಪ ಪಂಜುರ್ಲಿ ದೈವದ ಖಡ್ಸಲೆಯನ್ನು (ಖಡ್ಗ) ಕೈಗೆತ್ತಿಕೊಂಡಿದ್ದ. ನಂದಿ ಮಂಟಪ ಮತ್ತು ಪ್ರವೇಶ ದ್ವಾರದ ನಡುವಿನ ಪುಟ್ಟ ಚಾವಣಿಯ ಮೇಲೆ ಹತ್ತಿದ್ದ. ಅಲ್ಲಿ ಸೇರಿದ್ದ ಅರ್ಚಕರು ಹಾಗೂ ಭಕ್ತರು ಯುವಕನನ್ನು ಹಿಡಿದು ಹಗ್ಗದಿಂದ ಕಟ್ಟಿಹಾಕಿ ಪೊಲೀಸರ ವಶಕ್ಕೆ ಒಪ್ಪಿಸಿದರು’ ಎಂದು ಅವರು ಮಾಹಿತಿ ನೀಡಿದರು.

ಯುವಕ ನಗರದ ಆಸ್ಪತ್ರೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ಮಾನಸಿಕ ಅಸ್ವಸ್ಥತೆಯಿಂದ ಈ ರೀತಿ ವರ್ತಿಸಿದ್ದಾನೆ ಎಂದು ಗೊತ್ತಾಗಿದೆ. 

ADVERTISEMENT

ಈ ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು  ದೇವಸ್ಥಾನದ ಆಡಳಿತ ಕಚೇರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಈ ಘಟನೆ ಬಗ್ಗೆ ಆಡಳಿತ ಮಂಡಳಿಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.