ಮಂಗಳೂರು: ಸಮವಸ್ತ್ರ ಧರಿಸಿ ಶಿಸ್ತಿನಿಂದ ಕುಳಿತಿದ್ದ ನೂರಾರು ವಿದ್ಯಾರ್ಥಿಗಳು, ಸ್ವಾಮಿ ವಿವೇಕಾನಂದರ ಸಂದೇಶಗಳಿಗೆ ಕಿವಿಯಾದರು. ವೇದಿಕೆಯಲ್ಲಿದ್ದವರು, ವಿವೇಕಾನಂದರ ದೃಷ್ಟಿಯಲ್ಲಿ ಭಾರತ ಮತ್ತು ಭಾರತೀಯ ಯುವ ಜನರ ಕರ್ತವ್ಯ, ನವ ಯುಗಕ್ಕೆ ಅವರ ನವ ಸಂದೇಶ, ವಿವೇಕ ಪಥದ ಬಗ್ಗೆ ಅಸ್ಖಲಿತವಾಗಿ ಮಾತನಾಡುತ್ತಿದ್ದರೆ, ಕೆಳಗೆ ಕುಳಿತ ವಿದ್ಯಾರ್ಥಿ ಸಮೂಹದಿಂದ ಚಪ್ಪಾಳೆಯ ಸುರಿಮಳೆ.
ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಗುರುವಾರ ಇಲ್ಲಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಿದ್ದ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಿವನಹಳ್ಳಿ ರಾಮಕೃಷ್ಣ ಮಿಷನ್‍ನ ಸ್ವಾಮಿ ಮಂಗಳನಾಥಾನಂದಜೀ, ವೃಶಾಂಕ್ ಭಟ್ ಹಾಗೂ ಅಕ್ಷಯಾ ಗೋಖಲೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಥಬೀದಿ ಕಾಲೇಜಿನ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸವನ್ನು ಸ್ಫೂರ್ತಿಯಿಂದ ಆಲಿಸಿದರು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಣವೆಂದರೆ ಕೇವಲ ಅಂಕ ಗಳಿಕೆಯಲ್ಲ, ಶಿಕ್ಷಣದಿಂದ ಸಂಸ್ಕೃತಿ, ಸಂಸ್ಕಾರ ಸಿಗಬೇಕು. ನಮ್ಮ ಹಿರಿಯರು ಸಂಸ್ಕೃತಿ, ಸಂಸ್ಕಾರದ ಮೂಲಕವೇ ಸಮಾಜದಲ್ಲಿ ಪ್ರೀತಿ, ಉನ್ನತ ಗೌರವ ಗಳಿಸಿದ್ದರು. ಯುವ ಜನರು ಕೂಡ ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದರು.
ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜೀ ಮಾತನಾಡಿ, ‘ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗುವ ಶಿಕ್ಷಣವನ್ನು ಯುವ ಜನರಿಗೆ ನೀಡಿದರೆ, ಭಾರತ ಆದರ್ಶ ರಾಷ್ಟ್ರವಾಗಿ ನಿರ್ಮಾಣವಾಗಲು ಸಾಧ್ಯವೆಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಸ್ವಾಮಿಗಳ ಆಶಯದಿಂದ ಈಗ ಸಾರ್ವತ್ರಿಕ ಶಿಕ್ಷಣ ದೊರೆಯುತ್ತಿದೆ. ಆದರೆ, ಶಿಕ್ಷಣದ ಜತೆಗೆ ಶೀಲವಂತ, ಜವಾಬ್ದಾರಿ ಅರಿಯುವ ವ್ಯಕ್ತಿತ್ವ ನಿರ್ಮಾಣ ಮಾಡುವ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ’ ಎಂದರು.
ರಥಬೀದಿ ಕಾಲೇಜಿನ ಪ್ರಾಂಶುಪಾಲ ಜಯಕರ ಭಂಡಾರಿ ಇದ್ದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ರಂಜನ್ ಬೆಳ್ಳರ್ಪಾಡಿ ವಂದಿಸಿದರು. ರಾಜೇಶ್ ಶೆಟ್ಟಿ ನಿರೂಪಿಸಿದರು.
ಯುವ ದಿನಾಚರಣೆ
ಮುಡಿಪು: ವಿವೇಕಾನಂದರು ಯುವ ಜನತೆಯ ಆದರ್ಶ ವ್ಯಕ್ತಿ. ಭಾರತೀಯತೆ, ದೇಶಪ್ರೇಮ ಮೈಗೂಡಿಸಿಕೊಂಡಿದ್ದ ಅವರ ಚಿಂತನೆ, ಮೌಲ್ಯಗಳು ಜಗತ್ತಿಗೆ ಮಾದರಿಯಾಗಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದರು.
ಮಂಗಳೂರು ವಿವಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಮಂಗಳಾನಾಥಾನಂದಜಿ ಮಾತನಾಡಿ, ‘ಹುಟ್ಟಿನಿಂದಲೂ ಸ್ವಾಮಿ ವಿವೇಕಾನಂದರು ನಕಾರಾತ್ಮಕ ಭಾವನೆ ಹೊಂದಿದವರಲ್ಲ. ಧನಾತ್ಮಕ ಚಿಂತನೆಯಿಂದ ನಮ್ಮ ಮೌಲ್ಯಗಳು ಹೆಚ್ಚುತ್ತದೆ ಎಂಬುದಕ್ಕೆ ಅವರು ಉದಾಹರಣೆ’ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಪತ್ರಕರ್ತ ವೃಶಾಂಕ್ ಭಟ್ ಮಾತನಾಡಿದರು. ಪ್ರೊ. ಮಂಜುನಾಥ ಪಟ್ಟಾಭಿ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಡಾ. ಪರಮೇಶ್ವರ್ ವಂದಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.