ಉಳ್ಳಾಲ: ಭಾರತ ಪ್ರಜಾಸತ್ತಾತ್ಮಕ ಯುವ ಜನ ಒಕ್ಕೂಟದಿಂದ (ಡಿವೈಎಫ್‌ಐ) ಮೂರು ದಿನಗಳ ಇಲ್ಲಿ ನಡೆದ ರಾಜ್ಯ ಮಟ್ಟದ 12ನೇ ಸಮ್ಮೇಳನವು ಮಂಗಳವಾರ ಸಂಪನ್ನಗೊಂಡಿತು. ಈ ಪ್ರಯುಕ್ತ ಕುತ್ತಾರಿನಿಂದ ತೊಕ್ಕೊಟ್ಟಿನವರೆಗೆ ಯುವ ಜನರ ಪಥಸಂಚಲನ ನಡೆಯಿತು. ಕೈಯಲ್ಲಿ ಡಿವೈಎಫ್ಐನ ಬಿಳಿಬಾವುಟ ಬೀಸುತ್ತಾ, ಸಮಾನತೆ ಆಶಯ ಹೊತ್ತ ಘೋಷಣೆಗಳನ್ನು ಕೂಗುತ್ತಾ ಡಿವೈಎಫ್‌ಐ ಕಾರ್ಯಕರ್ತರು ಬಿಡುಬೀಸಾಗಿ ಹೆಜ್ಜೆ ಹಾಕಿದರು.
ತುಳುನಾಡಿನ ಸಾಂಸ್ಕೃತಿಕ ನಾಯಕರಾದ ಕೋಟಿ ಚೆನ್ನಯರು, ಉಳ್ಳಾಲದ ರಾಣಿ ಅಬ್ಬಕ್ಕ, ಶೋಷಿತರ ಆಶಾಕಿರಣವಾಗಿದ್ದ ಕುದ್ಮುಲ್ ರಂಗರಾಯರು, ಬ್ರಹ್ಮಶ್ರೀ ನಾರಾಯಣ ಗುರುಗಳು, ಮಹಾತ್ಮ ಗಾಂಧಿಜಿ, ಭಗತ್ ಸಿಂಗ್, ಬಿ.ಆರ್.ಅಂಬೇಡ್ಕರ್, ಜ್ಯೋತಿ ಬಾ ಪುಲೆ ಮತ್ತು ಸಾವಿತ್ರಿ ಬಾಯಿ ಪುಲೆ ಮೊದಲಾದ ಮಹಾನೀಯರ ಭಾವಚಿತ್ರಗಳು ನಡಿಗೆಯ ಆಶಯವನ್ನು ಬಿಂಬಿಸಿದವು. ಗಾರುಡಿ ಗೊಂಬೆಗಳು, ಚೆಂಡೆ ವಾದನ, ತಾಲೀಮು, ದಫ್ ಕುಣಿತಗಳು, ಸ್ತಬ್ಧಚಿತ್ರಗಳು ಹಾಡುಗಳು ಮೆರವಣಿಗೆಗೆ ಮೆರುಗು ತುಂಬಿದವು.
ಬಳಿಕ ಸಮ್ಮೇಳನದ ಅಂಗವಾಗಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಎ.ಎ.ರಹೀಂ, ‘ಮುಂಬರುವ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಧನೆ ಹೇಳಿಕೊಳ್ಳಲು ಏನೂ ಇಲ್ಲ. ನೋಟು ರದ್ದತಿ, ಕೋವಿಡ್‌ನಿಂದಾದ ಸಾವುಗಳ ಸರಣಿ, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ನೆರೆಹೊರೆಯ ದೇಶಗಳಿಗಿಂತಲೂ ಕೆಳಗೆ ಭಾರತ ಕುಸಿದಿರುವುದು ಸಾಧನೆಯೇ’ ಎಂದು ಪ್ರಶ್ನಿಸಿದರು.
‘ಇತಿಹಾಸದಿಂದ ಗಾಂಧೀಜಿಯ ಹೆಸರನ್ನು ಅಳಿಸುವ, ಸಂವಿಧಾನವನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದ್ದು, ಅದಕ್ಕೆ ಅವಕಾಶ ನೀಡೆವು’ ಎಂದರು.
ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ‘ಕೂಳೂರು ಸೇತುವೆ ಅರ್ಧಕ್ಕೆ ನಿಂತಿವೆ. ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಲಾಗಿದೆ. ಇಲ್ಲಿನ ಬ್ಯಾಂಕ್‌ಗಳು ಮೋದಿಯವರ ಗೆಳೆಯರ ಪಾಲಾಗಿವೆ. ಯುವಜನರಿಗೆ ಶಿಕ್ಷಣ ಸಿಗುತ್ತಿಲ್ಲ. ಆರೋಗ್ಯ ಕ್ಷೇತ್ರ ದಿವಾಳಿಯಾಗಿದೆ. ಒಎಂಪಿಎಲ್‌ನಲ್ಲಿ ಉದ್ಯೋಗಿಗಳು ವೇತನಕ್ಕಾಗಿ ಧರಣಿ ಕುಳಿತಿದ್ದಾರೆ. ಎಂಎಸ್‌ಇಜೆಡ್‌ನಲ್ಲಿ ಉದ್ಯೋಗಕ್ಕಾಗಿ ಸ್ಥಳೀಯರು ಪ್ರತಿಭಟನೆ ಮಾಡಿದಾಗ ಅಲ್ಲಿಗೆ ಶಾಸಕರು, ಸಂಸದರು ಹೋಗಿಲ್ಲ. ಆದರೆ ಅಮಾಯಕ ಶಿಕ್ಷಕಿಯ ಅಮಾನತಿಗಾಗಿ ಶಾಸಕರು ಧರಣಿ ಕೂರುತ್ತಾರೆ. ಯಾರಾದರೂ ಬೀದಿ ಹೆಣವಾದರೆ ಧರ್ಮ ದಂಗಲ್ ನಡೆಸುವ ಇವರಿಗೆ ಯವಜನರ ಸಮಸ್ಯೆಗಳೇ ಕಾಣಿಸುತ್ತಿಲ್ಲ’ ಎಂದು ಟೀಕಿಸಿದರು.
‘ಕಲ್ಲಡ್ಕ ಪ್ರಭಾಕರ ಭಟ್ಟರ ಭಾಷಣಕ್ಕೆ ಕುಣಿದು ಕುಪ್ಪಳಿಸಿದ ಮಾತ್ರಕ್ಕೆ ಸಮಸ್ಯೆ ನಿವಾರಣೆಯಾಗದು. ಇದನ್ನು ತುಳುನಾಡಿನ ಜನ ಅರ್ಥ ಮಾಡಿಕೊಳ್ಳಬೇಕು. ಅಮಲಿನ ಭಾಷಣಗಳಿಗೆ ಚಪ್ಪಾಳೆ ಹೊಡೆಯುವ ಬದಲು ಪ್ರಶ್ನಿಸಲು ಆರಂಭಿಸಬೇಕು’ ಎಂದರು.
ಡಿವೈಎಫ್‌ಐ ಕೇಂದ್ರ ಸಮಿತಿ ಸದಸ್ಯ ಜಾಕ್ ಸಿ.ಥಾಮಸ್, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ರಾಜ್ಯ ಸಮಿತಿ ಪ್ರಮುಖರಾದ ಲವಿತ್ರ ಕಲಬುರಗಿ, ರೇಣುಕಾ ಕಹಾರ್, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್, ಸಮ್ಮೇಳನದ ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್, ಸದಸ್ಯರಾದ ರಾಮಚಂದ್ರ ಬಬ್ಬುಕಟ್ಟೆ, ಜೀವನ್ ರಾಜ್ ಕುತ್ತಾರ್, ಕೃಷ್ಣಪ್ಪ ಕೊಂಚಾಡಿ ಮತ್ತಿತರರು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.