ADVERTISEMENT

ಮೂಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ

​ಪ್ರಜಾವಾಣಿ ವಾರ್ತೆ
Published 13 ಮೇ 2024, 16:04 IST
Last Updated 13 ಮೇ 2024, 16:04 IST
ಅಭಿಲಾಶ್
ಅಭಿಲಾಶ್   

ಮೂಲ್ಕಿ: ಇಲ್ಲಿನ ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು, ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.

ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್ (24) ನಾಪತ್ತೆಯಾದವರು.

ಬಜಪೆ ಸಮೀಪದ ಆದ್ಯಪಾಡಿಯ ಸುಮಾರು ಹತ್ತು ಮಂದಿಯ ಯುವಕರ ತಂಡ ಚಿಪ್ಪು ಮತ್ತು ಏಡಿ ಹಿಡಿಯಲು ಮೂಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ತೆರಳಿದ್ದರು. ಶಾಂಭವಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದರಿಂದ ಸುಮಾರು ಎರಡು ಕಿ.ಮೀ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ADVERTISEMENT

ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ನೀರಿನಲ್ಲಿ ಮುಳುಗಿದ್ದಾರೆ. ಈಜು ಅರಿತಿದ್ದ ಅಭಿಲಾಶ್ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಅವರನ್ನು ರಕ್ಷಿಸುವ ವೇಳೆ ಮುಳುಗಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ಅವರ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್ ಧಾವಿಸಿ ಧನುಷ್ ಮತ್ತು ಜೀವನ್ ಅವರನ್ನು ರಕ್ಷಿಸಿದ್ದಾರೆ. ಆದರೆ, ನೀರಿನಲ್ಲಿ ಮುಳುಗಿದ ಅಭಿಲಾಶ್ ಪತ್ತೆಯಾಗಿಲ್ಲ. ಅಭಿಲಾಶ್ ಅವಿವಾಹಿತನಾಗಿದ್ದು, ಮಂಗಳೂರು ರೈಲ್ವೆಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ.

ಅಭಿಲಾಶ್ ಪತ್ತೆಗೆ ಎಸ್‌ಡಿಆರ್‌ಎಫ್ ತಂಡ, ಕರಾವಳಿ ಕಾವಲು ಪಡೆಯ ಹೆಜ್ಜಮಾಡಿ, ಮೂಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.