ADVERTISEMENT

ದ.ಕ: ಪ್ರಾಣಹಾನಿ ತಡೆಗೆ ಶೂನ್ಯ ಸಹನೆ ನೀತಿ ಜಾರಿ

ಪ್ರಕೃತಿ ವಿಕೋಪ ನಿರ್ವಹಣೆಗೆ ಗ್ರಾಮಮಟ್ಟದಲ್ಲಿ ಕಾರ್ಯಪಡೆ: ಕಂದಾಯ ಸಚಿವ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 4:31 IST
Last Updated 27 ಜೂನ್ 2024, 4:31 IST
ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು. ಸಿದ್ಧಾರ್ಥ ಗೋಯಲ್‌, ಮುಲ್ಲೈ ಮುಗಿಲನ್ ಎಂ.ಪಿ, ರಶ್ಮಿ ಮಹೇಶ್‌, ಡಾ.ಆನಂದ ಕೆ., ಆನಂದ ಸಿ.ಎಲ್‌ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು. ಸಿದ್ಧಾರ್ಥ ಗೋಯಲ್‌, ಮುಲ್ಲೈ ಮುಗಿಲನ್ ಎಂ.ಪಿ, ರಶ್ಮಿ ಮಹೇಶ್‌, ಡಾ.ಆನಂದ ಕೆ., ಆನಂದ ಸಿ.ಎಲ್‌ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ   

ಮಂಗಳೂರು: ‘ಪ್ರಕೃತಿ ವಿಕೋಪದಿಂದ ಸಾವು ಸಂಭವಿಸುವುದನ್ನು ತಡೆಯಲು  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೂನ್ಯ ಸಹನೆ ನೀತಿಯನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ತಡೆಯಬಹುದಾದ ಒಂದೇ ಒಂದು ಸಾವು ಜಿಲ್ಲೆಯಲ್ಲಿ ಸಂಭವಿಸಿದರೂ ಸಹಿಸಲು ಸಾಧ್ಯವಿಲ್ಲ’ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಾಕೃತಿಕ ವಿಕೋಪದಿಂದ ಸಾವು–ನೋವು ತಡೆಯುವ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಬುಧವಾರ ಅವರು ಸಭೆ ನಡೆಸಿದರು.

‘ಗ್ರಾಮ ಪಂಚಾಯಿತಿ ಅಥವಾ ನಗರಾಡಳಿತದ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಸೂಕ್ಷ್ಮ ಪ್ರದೇಶಗಳಿವೆ ಎಂಬುದನ್ನು ಗುರುತಿಸಿ, ಪ್ರಾಕೃತಿಕ ವಿಕೋಪ ನಿರ್ವಹಣೆ ಯೋಜನೆಯನ್ನು ಗ್ರಾಮಮಟ್ಟಕ್ಕೆ ವಿಕೇಂದ್ರೀಕರಿಸಬೇಕು. ಇದರ ಜಾರಿಗೆ ಪ್ರತಿ ಗ್ರಾಮದಲ್ಲೂ ಕಾರ್ಯಪಡೆಯನ್ನು ರೂಪಿಸಿ, ಪಿಡಿಒ, ಎಂಜಿನಿಯರ್‌, ಪೊಲೀಸ್‌ ಅಥವಾ ಅಗ್ನಿಶಾಮಕ ಇಲಾಖೆಯವರನ್ನು ನೋಡಲ್‌ ಅಧಿಕಾರಿಗಳನ್ನಾಗಿ  ನೇಮಿಸಬೇಕು. ಬಿರುಸಿನ ಮಳೆಯಾಗುವಾಗ ಅವರು ತಮ್ಮ ವ್ಯಾಪ್ತಿಯ ಸೂಕ್ಷ ಪ್ರದೇಶದಲ್ಲಿ ‘ಹೈ ಅಲರ್ಟ್‌’ ಸ್ಥಿತಿಯಲ್ಲಿರಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ತೋಡು ತುಂಬಿ ಹರಿದು  ಅಪಾಯವಾಗುವಂತಿದ್ದರೆ ಅಂತಹ ಕಡೆ ಜನ ಸಂಚಾರ ನಿರ್ಬಂಧಿಸಬೇಕು. ಭೂಕುಸಿತ ಉಂಟಾಗುವ ಅಪಾಯಕಾರಿ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ಅಲ್ಲಿ ಮನೆ ಕುಸಿಯುವ ಅಪಾಯವಿದ್ದರೆ, ಕುಟುಂಬವನ್ನು  ಸುರಕ್ಷಿತ ಜಾಗಕ್ಕೆ ಕಳುಹಿಸಬೇಕು. ಜನರು ಸಹಕರಿಸದಿದ್ದರೆ ವಿಕೋಪ ನಿರ್ವಹಣೆ ಕಾಯ್ದೆಯಡಿ ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಸಂಪೂರ್ಣ ಅಧಿಕಾರ ಹಾಗೂ ಅಗತ್ಯ ಅನುದಾನ ಕೊಡುತ್ತೇವೆ’ ಎಂದರು. 

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ‌ ಮಹೇಶ್, ‘ಪ್ರಕೃತಿ ವಿಕೋಪದ ಮುನ್ಸೂಚನಾ ವ್ಯವಸ್ಥೆ ರಾಜ್ಯದಲ್ಲಿ ಸಮರ್ಥವಾಗಿದೆ. ಡಿಜಿಟಲ್ ಮೂಲಸೌಕರ್ಯದಲ್ಲೂ ಮುಂದಿದ್ದೇವೆ. ಆದರೂ ಕಾರ್ಯಯೋಜನೆಗಳ ಕೊನೆಯ ಹಂತದ ಅನುಷ್ಠಾನದಲ್ಲಿ ಎಡವುತ್ತಿದ್ದೇವೆ. ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ಪ್ರಾಣಹಾನಿಯ ವಿಚಾರದಲ್ಲಿ ಶೂನ್ಯ ಸಹನೆ ನೀತಿ ಜಾರಿ ಕಷ್ಟವಲ್ಲ. ಪಂಚಾಯಿತಿ ಮಟ್ಟದ ಕಾರ್ಯಪಡೆಗೆ ಅಧಿಕಾರ ವಿಕೇಂದ್ರೀಕರಿಸುವ ಬಗ್ಗೆ ಶೀಘ್ರವೇ ಆದೇಶ ಮಾಡಲಿದ್ದೇವೆ’ ಎಂದರು. 

ಪ್ರಾಕೃತಿಕ ವಿಕೋಪ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ವಿವರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ, ಪಾಲಿಕೆ ಆಯುಕ್ತ ಆನಂದ ಸಿ.ಎಲ್, ಡಿಸಿಪಿ ಸಿದ್ಧಾರ್ಥ ಗೊಯಲ್‌ ಭಾಗವಹಿಸಿದ್ದರು.

ತಹಶೀಲ್ದಾರ್ ತರಾಟೆಗೆ

ಪ್ರಶ್ನೆಯೊಂದಕ್ಕೆ ಸಮರ್ಪಕ ಉತ್ತರ ನೀಡದ ಪುತ್ತೂರು ತಹಶೀಲ್ದಾರ್‌ ಪುರಂದರ ಅವರ ವರ್ತನೆಯಿಂದ ಸಿಡಿಮಿಡಿಗೊಂಡ ಸಚಿವ ‘ನಿಮ್ಮದು ದಪ್ಪ ಚರ್ಮ. ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ನಿಮ್ಮದು. ಒಳ್ಳೆಯ ಮಾತಿನಲ್ಲಿ ಹೇಳಿದರೆ ಅರ್ಥವಾಗದಿದ್ದರೆ ನಿಮಗೆ ಅರ್ಥವಾಗುವ ಭಾಷೆಯನ್ನೇ ಬಳಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ‘ಒಡಿಷಾದಂತಹ ರಾಜ್ಯದಲ್ಲಿ ಪ್ರಕೃತಿ ವಿಕೋಪದ ಸಾವು ತಡೆಯಲು ಶೂನ್ಯ ಸಹನೆ ನೀತಿ  ಜಾರಿ ಸಾಧ್ಯವೆಂದಾದರೆ ಅವರಿಗಿಂತ ಸಾಕಷ್ಟು ಮುಂದಿರುವ ನಮಗೆ ಏಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕೇಳುತ್ತಿದ್ದಾರೆ. ಮನಸ್ಥಿತಿಯನ್ನು ಅಧಿಕಾರಿಗಳು ಮೊದಲು ಬದಲಿಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.