ADVERTISEMENT

ಚುನಾವಣೆಗೊಂದು ಪಕ್ಷ, ಇದು ನಿಷ್ಠೆನಾ?

ಭಿನ್ನಮತೀಯ ಮುಖಂಡರಿಗೆ ಜಾಧವ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 6:47 IST
Last Updated 10 ಮಾರ್ಚ್ 2018, 6:47 IST
ಯಶವಂತರಾವ್ ಜಾಧವ್
ಯಶವಂತರಾವ್ ಜಾಧವ್   

ದಾವಣಗೆರೆ: ‘ನಾವು ನಿಷ್ಠಾವಂತರು, ನಮ್ಮನ್ನು ದೂರ ಇಟ್ಟಿದ್ದಾರೆಂದು ಅಳಲು ತೋಡಿಕೊಳ್ಳುವವರು ಪಕ್ಷದ ಮುಖಂಡರಿಗೆ ಎಷ್ಟು ಬಾರಿ ಅಹವಾಲು ಸಲ್ಲಿಸಿದ್ದಾರೆ. ಎಷ್ಟು ಬಾರಿ ಪಕ್ಷದ ಕಚೇರಿಗೆ ಬಂದು ಚರ್ಚಿಸಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್‌ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಈಗ ಭಿನ್ನಮತದ ಮುಖಂಡತ್ವ ವಹಿಸಿ ಹೊರಟವರು ಪಕ್ಷಕ್ಕೆ ಎಷ್ಟು ನಿಷ್ಠಾವಂತರು ಎಂಬುದು ತಿಳಿದಿದೆ. ಐದಾರು ತಿಂಗಳ ಕೆಳಗೆ ವಿಧಾನ ಪರಿಷತ್ತಿಗೆ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ನಡೆಯಿತು. ಆಗ ಅವರು ಯಾವ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಒಬ್ಬ ಅಣ್ಣ ನಿಂತರೆ ಪಕ್ಷೇತರ, ಇನ್ನೊಬ್ಬ ಅಣ್ಣ ನಿಂತರೆ ಜೆಡಿಎಸ್‌ ಪರ ಪ್ರಚಾರ ಮಾಡಿದ್ದರು. ಇಂತಹ ನೀವು ಬಿಜೆಪಿಯ ನಿಷ್ಠಾವಂತರಾ’ ಎಂದು ಮುಖಂಡ ಎಚ್‌.ಎಸ್‌.ನಾಗರಾಜ್‌ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

‘ಈ ಹಿಂದೆ ಪಕ್ಷ ಲೋಕೇಶ್ ಅವರಿಗೆ ಟಿಕೆಟ್‌ ಕೊಟ್ಟಾಗ ನೀವೇಕೆ ಚುನಾವಣಾ ಪ್ರಚಾರಕ್ಕೆ ಬಂದಿಲ್ಲ. ನಾನು ಪಕ್ಷದ ಏಜೆಂಟ್‌ ಆಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದ ವಿಚಾರಗಳನ್ನು ಪಕ್ಷದ →ಒಳಗಡೆಯೇ →ಬಗೆಹರಿಸಿ →ಕೊಳ್ಳಬೇಕು. ಹೀಗೆ ಬಹಿರಂಗವಾಗಿ →ಚರ್ಚಿಸುವುದು ಸಲ್ಲದು. ನಾನು ಯಾರಿಗೂ ಬೇಲಿ ಹಾಕಿಲ್ಲ. ಪಕ್ಷದ ಕಚೇರಿಗೆ ಬಂದು ಮುಕ್ತವಾಗಿ ಚರ್ಚಿಸಿ’ ಎಂದು ಆಹ್ವಾನ ನೀಡಿದರು.

ADVERTISEMENT

ಚುನಾವಣೆ ಬಂದಾಗ ನಿಷ್ಠಾವಂತ ಕಾರ್ಯಕರ್ತರು!

‘ಹಿಂದೆ ರವೀಂದ್ರನಾಥ್‌ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅಹವಾಲು ಇಟ್ಟಿದ್ದರು. ಆಗ ರಾಜ್ಯಾಧ್ಯಕ್ಷರು ಯಶವಂತರಾವ್‌ ಜಾಧವ್‌ ಜಿಲ್ಲಾಧ್ಯಕ್ಷರು ಎಂದು ಘೋಷಣೆ ಮಾಡಿದರು. ಆದು ಆದ ಮೇಲೆ ಬ್ರಿಗೇಡ್‌ ಹುಟ್ಟಿಕೊಂಡಿತು. ಇವರ್ಯಾರೂ ಒಂದು ವರ್ಷ ಮೂರು ತಿಂಗಳು ಪಕ್ಷದ ಕಚೇರಿಗೆ ಬರಲಿಲ್ಲ’ ಎಂದರು.

‘ರವೀಂದ್ರನಾಥ್‌ ಪಕ್ಷದ ಕಚೇರಿಗೆ ಬಾರದಿರುವುದಕ್ಕೆ ಕಾರಣ ಇದೆ. ಅವರಿಗೆ ಅನ್ಯಾಯವಾಗಿತ್ತು; ಅದನ್ನು ವಿರೋಧಿಸಿ ದೂರ ಇದ್ದಿದ್ದು ಸತ್ಯ. ಅದನ್ನು ನಾವೂ ಒಪ್ಪಿಕೊಳ್ಳುತ್ತೇವೆ. ಆದರೆ, ನಾಗರಾಜ್‌, ಕೃಷ್ಣಮೂರ್ತಿ ಪವಾರ್‌ಗೆ ಏನು ಅನ್ಯಾಯವಾಗಿತ್ತು? ಇವರೆಲ್ಲ ಏಕೆ ದೂರ ಇದ್ದರು. ಇವರೆಲ್ಲ ಪಕ್ಷದ ಸಂಘಟನೆ ಮಾಡಬೇಕಿತ್ತು. ಚುನಾವಣೆ ಬಂದ ತಕ್ಷಣ ಅಭ್ಯರ್ಥಿಯಾಗಬೇಕೆಂದು ಸಂದಿಮೂಲೆಗೆ ಹೋಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಂದು ಹೇಳುತ್ತಿರುವುದು ಸರಿಯಲ್ಲ’ ಎಂದು ಟೀಕಿಸಿದರು.

‘ಸಮಸ್ಯೆ ಬಗೆಹರಿಯಬೇಕೆಂದರೆ ನೇರವಾಗಿ ಪಕ್ಷದ ಕಚೇರಿಗೆ ಬರಬೇಕು. ಅವರು ಕೇಳುವ ಪ್ರಶ್ನೆಗೆ ನಾನು ಸಮಂಜಸ ಉತ್ತರ ನೀಡದಿದ್ದರೆ ಮುಂದಿನ ದಾರಿಯನ್ನು ಅವರು ನೋಡಿಕೊಳ್ಳಲಿ’ ಎಂದು ಸವಾಲು ಹಾಕಿದರು.

**

‘ದೇವಸ್ಥಾನದಲ್ಲಿ ಗಂಟೆ ಹೊಡೆಯಲಿ’

ದಾವಣಗೆರೆ ದಕ್ಷಿಣ ಅಥವಾ ಉತ್ತರದಲ್ಲಿ ಪಕ್ಷ ಯಾರಿಗೇ ಟಿಕೆಟ್‌ ಕೊಟ್ಟರೂ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ದುರ್ಗಾಂಬಿಕಾ ದೇವಸ್ಥಾನದಲ್ಲಿ ಗಂಟೆ ಹೊಡೆದು ಪ್ರಮಾಣ ಮಾಡಲಿ. ಇದಕ್ಕೆ ನಾನು ಸಿದ್ಧನಿದ್ದೇನೆ. ಅವರೂ ಗಂಟೆ ಹೊಡೆದು ತಮ್ಮ ಪಕ್ಷ ನಿಷ್ಠೆ ತೋರಿಸಲಿ ಎಂದು ಯಶವಂತರಾವ್‌ ಜಾಧವ್ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.