ADVERTISEMENT

ಜೀವಕಳೆ ಪಡೆದ ಚಿಕ್ಕಮಜ್ಜಿಗೇರಿ ಪುಷ್ಕರಣಿ

ಮಲ್ಲಿಕಾರ್ಜುನ ಕನ್ನಿಹಳ್ಳಿ
Published 14 ಅಕ್ಟೋಬರ್ 2017, 6:41 IST
Last Updated 14 ಅಕ್ಟೋಬರ್ 2017, 6:41 IST
ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮಜ್ಜಿಗೇರಿ ಗ್ರಾಮದಲ್ಲಿರುವ ಪುಷ್ಕರಣಿ ಸ್ವಚ್ಛತೆಗೆ ಮುನ್ನ ಕಂಡುಬಂದ ಸ್ಥಿತಿ.
ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮಜ್ಜಿಗೇರಿ ಗ್ರಾಮದಲ್ಲಿರುವ ಪುಷ್ಕರಣಿ ಸ್ವಚ್ಛತೆಗೆ ಮುನ್ನ ಕಂಡುಬಂದ ಸ್ಥಿತಿ.   

ಹರಪನಹಳ್ಳಿ: ಹಲವು ದಶಕಗಳ ಕಾಲ ಗಿಡಗಂಟಿಗಳಿಂದ ಮುಚ್ಚಿಹೋಗಿದ್ದ ತಾಲ್ಲೂಕಿನ ಚಿಕ್ಕಮಜ್ಜಿಗೇರಿ ಗ್ರಾಮದ ಐತಿಹಾಸಿಕ ಪುಷ್ಕರಣಿಯನ್ನು ಎಚ್‌ಪಿಎಸ್‌ ಪಿಯು ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದ್ದಾರೆ.

ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆ ಕಾಲೇಜು ಏಳು ದಿನಗಳ ಎನ್‌ಎಸ್‌ಎಸ್‌ ಶಿಬಿರವನ್ನು ಆಯೋಜಿಸಿತ್ತು. ಪುಷ್ಕರಣಿಗೆ ಇಳಿಯಲು ಸಾಧ್ಯವಾಗದ ರೀತಿಯಲ್ಲಿ ಗಿಡಗಂಟಿಗಳು ಬೆಳೆದು, ಹೂಳು ತುಂಬಿತ್ತು. ಸತತ ಎರಡು ದಿನ ಶ್ರಮದಾನ ಮಾಡಿ ಪುಷ್ಕರಣಿಯನ್ನು ಸ್ವಚ್ಛಗೊಳಿಸಿದ್ದಾರೆ.

80ಕ್ಕೂ ಹೆಚ್ಚು ಮೆಟ್ಟಲುಗಳಿರುವ ಪುಷ್ಕರಣಿ ಸುಭದ್ರ ಸ್ಥಿತಿಯಲ್ಲಿದೆ. ಕೆಳಗೆ ಇಳಿಯುತ್ತಾ ಹೋದಂತೆ ಹಾದಿ ಕಿರಿದಾಗುತ್ತಾ ಹೋಗುತ್ತದೆ. ಕೊನೆಯಲ್ಲಿ ಏಕ ಶಿಲೆಯ ಚೌಕಾರದ ತೊಟ್ಟಿ ನಿರ್ಮಿಸಲಾಗಿದೆ. ನಂತರದಲ್ಲಿ ಬಟ್ಟಲು ಆಕಾರದ ಬೃಹತ್‌ ಗಾತ್ರದ ದುಂಡನೆ ಆಕಾರ ಹೊಂದಿದೆ.

ADVERTISEMENT

ಗ್ರಾಮದ ಹೊರವಲಯದಲ್ಲಿರುವ ಮುರುಡು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪುಷ್ಕರಣಿ ಇದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ನೀಲಗುಂದ ಗ್ರಾಮದ ಐತಿಹಾಸಿಕ ಭೀಮೇಶ್ವರ ದೇವಸ್ಥಾದ ಕೆರೆ ಹಿನ್ನೀರಿನ ಭಾಗದ ಈ ಪುಷ್ಕರಣಿ 250 ಅಡಿ ಆಳವಿದೆ. 150 ಅಡಿ ಉದ್ದವಿದ್ದು, ಭೂಮಿ ಮಟ್ಟದಲ್ಲಿ ನೋಡಿದಾಗ ಶಿವಲಿಂಗದ ಆಕಾರದಲ್ಲಿ ಕಾಣುತ್ತದೆ.

ಪುಷ್ಕರಣಿಯಲ್ಲಿ ಅರ್ಧ ಭಾಗ ನೀರು ಸಂಗ್ರಹವಾಗುತ್ತಿತ್ತು. ಮಳೆ ಕೊರತೆಯಿಂದ ಒಣಗಿದೆ. ವಿದ್ಯಾರ್ಥಿಗಳು ಹೂಳು ತೆಗೆದು ಸ್ವಚ್ಛಗೊಳಿಸಿರುವುದರಿಂದ ಅಲ್ಪ ಪ್ರಮಾಣದಲ್ಲಿ ನೀರು ಬಂದಿದೆ. ಸರ್ಕಾರ ಪುಷ್ಕರಣಿಗೆ ಅನುದಾನ ನೀಡಿ ಸಂರಕ್ಷಿಸಬೇಕು ಎಂದು ಗ್ರಾಮದ ಮುಖಂಡ ಗುರುಪ್ರಸಾದ್‌ ತಿಳಿಸಿದ್ದಾರೆ.

‘ಏಳು ದಿನ ಗ್ರಾಮಸ್ಥರ ನೆರವಿನಿಂದ ದೇವಸ್ಥಾನ, ಶಾಲಾ ಆವರಣ, ರಸ್ತೆ ದುರಸ್ತಿ, ಸಸಿ ನೆಡುವುದು, ಚರಂಡಿ ನಿರ್ಮಾಣ, ಕೃಷಿ, ಜಾನುವಾರು, ಆರೋಗ್ಯ, ಶಿಕ್ಷಣ, ಕಾನೂನು ನೆರವು ಒಳಗೊಂಡಂತೆ ಗ್ರಾಮದಲ್ಲಿ ಅರಿವು ಮೂಡಿಸಿದ್ದೇವೆ’ ಎಂದು ಶಿಬಿರದ ಉಸ್ತುವಾರಿ ವಹಿಸಿಕೊಂಡಿದ್ದ ಕೆ.ಬಿ.ರವೀಂದ್ರ, ಮಂಜುನಾಥ್ ಮಾಳ್ಗಿ ತಿಳಿಸಿದ್ದಾರೆ.

ಪ್ರಾಂಶುಪಾಲರಾದ ಕೆ.ನೀಲಮ್ಮ ಮಾತನಾಡಿ, ‘ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಕ್ಷರಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ವೆಂಕಟೇಶ್‌ ರೆಡ್ಡಿ ಭೇಟಿ
ನೀಡಿ, ನೆರವು ನೀಡಿದ್ದಾರೆ. ನೀಲಗುಂದ ಜಂಗಮ ಪೀಠದ ಶಿವಯೋಗಿ ಸ್ವಾಮೀಜಿ ಅವರು ವಿದ್ಯಾರ್ಥಿಗಳೊಂದಿಗೆ ಬೆರೆತು ಶ್ರಮದಾನ ಮಾಡಿದ್ದಾರೆ’ ಎಂದು ಹೆಮ್ಮೆಯಿಂದ ಸ್ಮರಿಸುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.