ದಾವಣಗೆರೆ: ಸಮಾನ ಮನಸ್ಕ ಸಾಮಾಜಿಕ ಕಾರ್ಯಕರ್ತರ ರಾಜ್ಯ ಮಟ್ಟದ ಚಿಂತನಾ ಸಮಾವೇಶ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನತೆಗಾಗಿ ಜನಾಂದೋಲನ ವೇದಿಕೆ ಹೆಸರಿನಲ್ಲಿ ಆ.15 ಮತ್ತು 16 ರಂದು ಶಾಮನೂರು ಜಯದೇವಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ (ಬಿಐಟಿ ಕಾಲೇಜು ಹತ್ತಿರ) ಎರಡು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ ತಿಳಿಸಿದರು. ಕರ್ನಾಟದ ಹೋರಾಟ ಧಾರೆಗಳಾದ ರೈತ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ, ಯುವಜನ, ಅಲ್ಪಸಂಖ್ಯಾತ, ಪರಿಸರ, ಕೋಮುವಾದ ವಿರೋಧಿ, ಭ್ರಷ್ಟಾಚಾರ ವಿರೋಧಿ ಹೋರಾಟ ಶಕ್ತಿಗಳು ಒಗ್ಗೂಡುವ ಆಶಯದಿಂದ ಚಿಂತನಾ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಆ.15 ಬೆಳಿಗ್ಗೆ 11ಕ್ಕೆ ವಿವಿಧ ಹೋರಾಟದ ಧಾರೆಗಳ ಕಾರ್ಯಕರ್ತ ಪ್ರತಿನಿಧಿಗಳು ಒಗ್ಗೂಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ‘ಸಮಾನತೆ ಹಾಗೂ ಸ್ವಾತಂತ್ರ್ಯದ ಸೇನಾಗಳಿಗೆ ಹೋರಾಟದ ನಮನಗಳು’ ವಿಷಯ ಕುರಿತು ಚಿಂತಕ ಜಿ.ರಾಮಕೃಷ್ಣ ಮಾತನಾಡಲಿದ್ದಾರೆ.
ಸಂಸ್ಕೃತಿಕ ಚಿಂತಕ ರಹಮತ್ ತರೀಕರೆ, ಕೆ.ನೀಲಾ, ಇಂದೂಧರ ಹೊನ್ನಾಪುರ, ಕಡಿದಾಳು ಶಾಮಣ್ಣ ಆಶಯದ ನುಡಿಗಳನ್ನಾಡಲಿದ್ದಾರೆ. ‘ವಿವಿಧ ಧಾರೆಯ ಚಳವಳಿಗಳು ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಕೂಡಿ ಕಂಡುಕೊಳ್ಳಬೇಕಾದ ಪರಿಹಾರಗಳು’ ಚಿಂತನಾ ಗೋಷ್ಠಿಯ ವಿಷಯ ಕುರಿತು ಬಂಜಗೆರೆ ಜಯಪ್ರಕಾಶ್ ಮಾತನಾಡಲಿದ್ದಾರೆ.
ನಂತರ ವೀರ ಸಂಗಯ್ಯ, ಅನಂತ ಸುಬ್ಬರಾವ್, ಮಾವಳ್ಳಿ ಶಂಕರ್, ಎಚ್.ಎಸ್ ಅನುಪಮಾ, ಅನೀಸ್ ಪಾಷಾ, ಪೋಷಿಣಿ, ಬಾಲ ಗುರುಮೂರ್ತಿ, ವಿಠಲ್ ಹೆಗಡೆ, ರವಿಕೃಷ್ಣಾರಡ್ಡಿ, ಎಂ.ಡಿ. ಒಕ್ಕುಂದ, ನಿರಂಜನಾರಾಧ್ಯ, ಕೇಸರಿ ಹರವೂ, ಸನತ್ ಕುಮಾರ್ ಬೆಳಗಲಿ ವಿವಿಧ ವಿಷಯಗಳ ಕುರಿತು ಅನುಭವ ಮತ್ತು ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಸಂಜೆ 7.30ಕ್ಕೆ ಜನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಎ.ಕೆ.ಸುಬ್ಬಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಆ.16 ಬೆಳಿಗ್ಗೆ 9ಕ್ಕೆ ‘ಒಗ್ಗೂಡಿ ಇಡಬೇಕಾದ ಮುಂದಿನ ಹೆಜ್ಜೆಗಳು’ ವಿಷಯ ಕುರಿತು ಕೆ.ಫಣಿರಾಜ್, ದೇವನೂರ ಮಹದೇವ, ನೂರ್ ಶ್ರೀಧರ್ ಮಾತನಾಡಲಿದ್ದಾರೆ. ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 2 ಕ್ಕೆ ಸಮಾರೋಪ ಗೋಷ್ಠಿ ನಡೆಯಲಿದ್ದು ‘ಕಾಣಬಹುದಾದ ಕನಸು’ ವಿಷಯ ಬಗ್ಗೆ ಎಸ್.ಆರ್.ಹಿರೇಮಠ್, ಕೆ.ರಾಮಯ್ಯ, ಚಸರ, ಗೌರಿ ಲಂಕೇಶ್, ಮೀನಾಕ್ಷಿ ಬಾಳಿ, ಕೋಡಿಹಳ್ಳಿ ಚಂದ್ರಶೇಖರ್, ಎಚ್.ವಿ ವಾಸು, ಎಚ್.ಕೆ ರಾಮಚಂದ್ರಪ್ಪ, ಬಿ.ಟಿ.ಲಲಿತಾ ನಾಯಕ್, ರಂಜಾನ್ ದರ್ಗಾ, ಎಸ್.ಕೆ ಕಾಂತಾ, ಮಾಯಣ್ಣ, ಎನ್.ವೆಂಕಟೇಶ್, ಎಚ್.ಆರ್. ಬಸವ ರಾಜಪ್ಪ, ಎಚ್.ಎನ್.ಬಡಿಗೇರ, ಮರಿಯಪ್ಪ, ಮಾರಪ್ಪ, ವಿಜಯಮ್ಮ, ಕೆ.ಎಲ್ ಅಶೋಕ್ ಮಾತನಾಡಲಿದ್ದಾರೆ. ಸಮಾವೇಶದ ಸಂದೇಶ ಬಗ್ಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಮಾತನಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಅನೀಸ್ ಪಾಷಾ, ಜಿಲ್ಲಾ ಘಟಕದ ಸಂಚಾಲಕ ಸೈಯದ್ ಇಸ್ಮಾಯಿಲ್ ದೊಡ್ಡಮನೆ, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.