ADVERTISEMENT

ಮಾರುಕಟ್ಟೆಯಲ್ಲಿ ಅವರೆಕಾಯಿ ಅಬ್ಬರ

ತರಕಾರಿ ಬೆಲೆಯಲ್ಲಿ ಸ್ವಲ್ಪ ಇಳಿಕೆ; ಗ್ರಾಹಕರಲ್ಲಿ ಮೂಡಿದ ಮಂದಹಾಸ

ನಾಗರಾಜ ಕೆ.ಎಲ್
Published 13 ಡಿಸೆಂಬರ್ 2014, 11:11 IST
Last Updated 13 ಡಿಸೆಂಬರ್ 2014, 11:11 IST

ದಾವಣಗೆರೆ: ಹೇಳಿ ಕೇಳಿ ಇದು ಅವರೆಕಾಯಿ ಋತು, ಎಲ್ಲಿ ನೋಡಿದರೂ ಅವರೆಕಾಯಿ ರಾಶಿ. ಮಾರುಕಟ್ಟೆಯಲ್ಲಿ ಅವರೆಕಾಯಿಯ ಬೇಡಿಕೆಗೆ ತಕ್ಕ ಪೂರೈಕೆ ಇದ್ದು, ಗ್ರಾಹಕರು ಉಳಿದೆಲ್ಲಾ ತರಕಾರಿ ಬಿಟ್ಟು ಅವರೆಕಾಯಿ ಕೊಳ್ಳುವುದರಲ್ಲೇ ಮಗ್ನರಾಗಿರುವ ದೃಶ್ಯ ಈಗ ಸಾಮಾನ್ಯವಾಗಿದೆ.

ಡಿಸೆಂಬರ್ ತಿಂಗಳ ಆರಂಭದಲ್ಲಿ ಶುರುವಾದ ‘ಅವರೆ’ ಆರ್ಭಟ ಜನವರಿ ಅಂತ್ಯದವರೆಗೂ ಇರಲಿದೆ. ಇದರ ಪರಿಣಾಮ ಇನ್ನುಳಿದ ತರಕಾರಿ ಬೆಲೆ ಮೇಲೆ ನೇರವಾಗಿಯೇ ಪರಿಣಾಮ ಬೀರಿದೆ. ಕಳೆದ ವಾರದ ದರಕ್ಕೆ ಹೋಲಿಸಿದರೆ ತೆಂಗಿನಕಾಯಿ
ಹೊರತುಪಡಿಸಿ ಬಹುತೇಕ ತರಕಾರಿಗಳ ಬೆಲೆ ಗಣನೀಯವಾಗಿ ಇಳಿದಿದೆ.

ಕಳೆದ ವಾರಕ್ಕಿಂತ ಈ ವಾರ ಅವರೆಕಾಯಿ ದರವೂ ಇಳಿದಿದೆ. ಕಳೆದ ವಾರ ಸಗಟು ಮಾರುಕಟ್ಟೆಯಲ್ಲಿ ಒಂದು ಕೆಜಿ ಅವರೆಕಾಯಿ ಬೆಲೆ ₨20–22ರಷ್ಟಿತ್ತು. ಈ ವಾರ ₨10–15ಕ್ಕೆ ಇಳಿದಿದೆ.

‘ಎರಡು ವಾರದಿಂದ ಅವರೆಕಾಯಿಯ ಜತೆಗೆ ಇನ್ನಿತರೆ ತರಕಾರಿಗಳ ಪೂರೈಕೆಯೂ ಭರಪೂರವಾಗಿದೆ. ಮೊದಲೆಲ್ಲಾ ಇಲ್ಲಿಂದ ಹೊರರಾಜ್ಯಗಳಿಗೆ ತರಕಾರಿ ರಫ್ತಾಗುತ್ತಿತ್ತು. ಈಗ ಅಲ್ಲಿಂದಲೂ ಬೇಡಿಕೆ ಬಾರದ ಕಾರಣ ರಫ್ತು ವಹಿವಾಟು ನಿಂತು ಹೋಗಿದೆ. ಅಲ್ಲದೇ, ಸ್ಥಳೀಯ ಬೇಡಿಕೆಗಿಂತಲೂ ಹೆಚ್ಚಿನ ತರಕಾರಿ ಪೂರೈಕೆ ಆಗುತ್ತಿರುವುದೇ ಬೆಲೆ ಕುಸಿತಕ್ಕೆ ಬಹುಮುಖ್ಯ ಕಾರಣ. ಅವರೆಕಾಯಿಗೆ ಬೇಡಿಕೆ ಹೆಚ್ಚಿದ್ದು ಪೂರೈಕೆಯೂ ಸಾಕಷ್ಟಿದೆ. ಆದರೆ, ಉಳಿದ ತರಕಾರಿಗಳ ಪೂರೈಕೆ ಮಾತ್ರ ಮೊದಲಿನಂತೆಯೇ ಇದ್ದು, ಬೇಡಿಕೆ ಕುಸಿದಿದೆ.

ಹಾಗಾಗಿ ಬೆಲೆಯೂ ಸ್ವಲ್ಪ ಇಳಿಮುಖವಾಗಿದೆ’ ಎನ್ನುತ್ತಾರೆ ಎಪಿಎಂಸಿ ಆವರಣದಲ್ಲಿರುವ ಡಿಎನ್‌ಟಿ ತರಕಾರಿ ಮಳಿಗೆಯ ತಿಮ್ಮೇಶ್.
ಸೊಪ್ಪಿನ ಬೆಲೆಯೂ ಗಣನೀಯವಾಗಿ ಕುಸಿದಿದೆ. ಕೊತ್ತಂಬರಿ, ಸಬ್ಬಸ್ಗೆ, ಮೆಂತ್ಯ ಸೊಪ್ಪುಗಳ ಬೆಲೆ ಇಳಿಕೆ ಕಂಡಿದೆ. ಬೇಸಿಗೆಯ ಬಿಸಿಗೆ ಕೈಸುಡುವ ನಿಂಬೆಹಣ್ಣಿನ ದರವೂ ಈಗ ಇಳಿಕೆ ಕಂಡು ತರಕಾರಿ ಗ್ರಾಹಕರಿಗೆ ಸಂತಸ ತಂದಿದೆ. ಆದರೆ, ತೆಂಗಿನಕಾಯಿ ದರ ಮಾತ್ರ ಏರುಪೇರಾಗದೆ ಸ್ಥಿರತೆ ಕಾಯ್ದುಕೊಂಡಿದೆ.

ತೆಂಗಿನ ಇಳುವರಿ ಕಡಿಮೆ...

ತರಕಾರಿ ದರ ಇಳಿಕೆ ಅಲ್ಪಾವಧಿವರೆಗೂ ಮುಂದುವ ರಿಯಲಿದೆ. ಅವರೆಕಾಯಿ ಸೀಸನ್ ಮುಗಿದ ನಂತರ ಮತ್ತೆ ಬೆಲೆ ಹೆಚ್ಚಳ ಆದರೂ ಆಗಬಹುದು. ರಾಜ್ಯದಾದ್ಯಂತ ತೆಂಗಿನ ಇಳುವರಿ ಕಡಿಮೆ ಇದ್ದು ಬೇಡಿಕೆ ಹೆಚ್ಚಿದೆ.
–ಉಮೇಶ್ ಮಿರ್ಜಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು.

ಅವರೆಕಾಯಿ ಸೀಸನ್...

ಕಳೆದ ವಾರಕ್ಕಿಂತ ಈ ವಾರ ಬಹುತೇಕ ತರಕಾರಿಗಳ ಬೆಲೆ ಇಳಿದಿದೆ. ಅವರೆಕಾಯಿ ಕಾಲ ಆಗಿರುವುದರಿಂದ ಅದನ್ನೇ ಹೆಚ್ಚಾಗಿ
ಬಳಸುತ್ತಿದ್ದೇವೆ. ಅವರೆಕಾಯಿ ಬೆಲೆ ಕೂಡಾ ಕೈಗೆಟುಕುವಂತಿದೆ. ತೆಂಗಿನಕಾಯಿ ದರ ಹೊರತುಪಡಿಸಿದರೆ ಒಟ್ಟಾರೆ ತರಕಾರಿ ಬೆಲೆ ಇಳಿಕೆ ಸಮಾಧಾನ 
ತಂದಿದೆ.
–ಬಸವರಾಜು, ಸ್ಥಳೀಯ ಹೊಟೇಲ್ ಮಾಲೀಕ.

ವಿವಿಧ ತರಕಾರಿ ಸಗಟು ದರಪಟ್ಟಿ


ತರಕಾರಿ             ಕಳೆದ ವಾರ   ಈ ವಾರ

ADVERTISEMENT

ಈರುಳ್ಳಿ               ₨15–18  ₨14–16
ಕ್ಯಾರೆಟ್              ₨15–20  ₨16–18
ಬೀನ್ಸ್                 ₨35–38     ₨25–28
ಬೆಂಡೆಕಾಯಿ          ₨23–25  ₨16–18
ಹಸಿಮೆಣಸಿನಕಾಯಿ  ₨16–18  ₨13–16
ಆಲೂಗಡ್ಡೆ             ₨26–28  ₨26–28
ಸೌತೆಕಾಯಿ           ₨12–14  ₨08–10
ಹೂ ಕೋಸು           ₨15–20  ₨10–15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.