ADVERTISEMENT

ಶೋಷಣೆಮುಕ್ತ ಸಮಾಜ ನಿರ್ಮಿಸಿ

ಬಾಲ್ಯವಿವಾಹ ನಿಷೇಧ ಕಾಯ್ದೆ ಅನುಷ್ಠಾನ ಸಮಾಲೋಚನಾ ಸಭೆಯಲ್ಲಿ ಎಸ್ಪಿ ಚೇತನ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 8:02 IST
Last Updated 5 ಜೂನ್ 2018, 8:02 IST

ದಾವಣಗೆರೆ: ಮಹಿಳಾ ಶೋಷಣೆಮುಕ್ತ ಸಮಾಜವನ್ನು ನಿರ್ಮಿಸಲು ಪೊಲೀಸ್‌ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಮನವಿ ಮಾಡಿದರು.

ಜಿಲ್ಲಾಡಳಿತ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ದಿ ಹಂಗರ್‌ ಪ್ರಾಜೆಕ್ಟ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಬಾಲ್ಯವಿವಾಹ ನಿಷೇಧ ಕಾಯ್ದೆ ಅನುಷ್ಠಾನಗಳಲ್ಲಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳು’ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷ ಪ್ರಧಾನ ಸಮಾಜದಲ್ಲಿ ಹಿಂದಿನಿಂದಲೂ ಮಹಿಳೆಗೆ ಸಾಕಷ್ಟು ಸ್ವಾತಂತ್ರ್ಯ ನೀಡಿಲ್ಲ. ಸರ್ಕಾರ ಹೆಣ್ಣು ಭ್ರೂಣ ಹತ್ಯೆ ನಿಷೇಧ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಂತಹ ಹಲವು ಕಾನೂನುಗಳನ್ನು ರಚಿಸಿದ್ದರೂ ಶೇ 100ರಷ್ಟು ದೌರ್ಜನ್ಯ ತಡೆಯಲು ಇನ್ನೂ ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ADVERTISEMENT

ಶಾಲೆ– ಕಾಲೇಜುಗಳಿಗೆ ತೆರಳಿ ಬಾಲ್ಯವಿವಾಹ ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರ ನೆರವು ಪಡೆಯಬೇಕು. ‘ಹೆಣ್ಣು ಸಮಾಜಕ್ಕೆ ಹೊರೆಯಲ್ಲ; ಮನೆಗೆ ಶೋಭೆ’ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪೊಕ್ಸೊ ಕಾಯ್ದೆಯಡಿಯೂ ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬುದನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ಟಿ.ಎಂ. ಕೊಟ್ರೇಶ್‌ ಮಾತನಾಡಿ, ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ದೂರು ದಾಖಲಿಸುವ ವಿಚಾರದಲ್ಲಿ ಪೊಲೀಸರು ಸಹಕಾರ ನೀಡುವುದಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ‘ಪ್ರತಿ ಪೊಲೀಸ್‌ ಠಾಣೆಯಲ್ಲೂ ಒಬ್ಬ ಎಎಸ್‌ಐ ಅನ್ನು ಮಕ್ಕಳ ರಕ್ಷಣಾಧಿಕಾರಿಯಾಗಿ ನೇಮಿಸಲಾಗಿದೆ. ಜೊತೆಗೆ ಜಿಲ್ಲಾ ಮಟ್ಟದಲ್ಲಿ ನೋಡಲ್‌ ಅಧಿಕಾರಿ ಇರುತ್ತಾರೆ. ತಕ್ಷಣವೇ ದೂರು ದಾಖಲಿಸಿಕೊಳ್ಳುವಂತೆ ಎಲ್ಲ ಠಾಣೆಗಳಿಗೂ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರಕರಣದಲ್ಲಿ ಸಾಕ್ಷಿದಾರರನ್ನು ಹುಡುಕಿಕೊಡುವಲ್ಲಿ ನಿಮ್ಮದೂ ಜವಾಬ್ದಾರಿ ಇರುತ್ತದೆ. ಸಮರ್ಪಕವಾದ ಸಾಕ್ಷ್ಯಾಧಾರ ಇದ್ದಾಗ ಮಾತ್ರ ಶಿಕ್ಷೆ ಕೊಡಿಸಲು ಸಾಧ್ಯ’ ಎಂದು ಹೇಳಿದರು.

ಬೀದರ್‌ ಜಿಲ್ಲೆಯ ಚಿಟ್ಟ ಗ್ರಾಮ ಪಂಚಾಯಿತಿ ಸದಸ್ಯೆ ಜಗದೇವಿ, ಗ್ರಾಮ ಪಂಚಾಯಿತಿ ಸದಸ್ಯೆಯರು ಮನೆ–ಮನೆಗೆ ತೆರಳಿ ಬಾಲ್ಯವಿವಾಹದ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ರೂಪನಾಯ್ಕ, ‘2006ರಿಂದಲೇ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದರೂ ಈ ಅನಿಷ್ಟ ಪದ್ಧತಿ ಇನ್ನೂ ನಿಂತಿಲ್ಲ. ಬಾಲ್ಯವಿವಾಹ ಮುಕ್ತ ಜಿಲ್ಲೆ, ರಾಜ್ಯವನ್ನಾಗಿ ಮಾಡುವ ಸವಾಲು ನಮ್ಮೆದುರಿಗೆ ಇದೆ. ಕಾಯ್ದೆಯ ತಿದ್ದುಪಡಿ ಬಳಿಕ ಪೊಲೀಸರಿಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮಲೆಕ್ಕಿಗ, ಪಿಡಿಒ, ಶಾಲೆಯ ಮುಖ್ಯೋಪಾಧ್ಯಾಪಕ, ಆರೋಗ್ಯಾಧಿಕಾರಿಯೂ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್‌ ಯರ್ರಿಸ್ವಾಮಿ, ಮಕ್ಕಳ ರಕ್ಷಣಾಧಿಕಾರಿ ಪೂರ್ಣಿಮಾ, ದಿ ಹಂಗರ್‌ ಪ್ರಾಜೆಕ್ಟ್‌ನ ರಾಜ್ಯ ಸಂಯೋಜಕ ಸೋಮಶೇಖರ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.