ಸಾಸ್ವೆಹಳ್ಳಿ: ಹೊನ್ನಾಳಿ ತಾಲ್ಲೂಕಿನ ಪ್ರಮುಖ ಹೋಬಳಿಯಾದ ಸಾಸ್ವೆಹಳ್ಳಿ ಆಸುಪಾಸಿನ ಹಲವು ಗ್ರಾಮಗಳು ಸರ್ಕಾರಿ ಬಸ್ ಸಂಚಾರನ್ನೇ ಕಂಡಿಲ್ಲ! ಹೋಬಳಿ ವ್ಯಾಪ್ತಿಯ ಬೈರನಹಳ್ಳಿ, ಹನುಮನಹಳ್ಳಿ, ಮಾವಿನಕೋಟೆ, ಹುರಳಹಳ್ಳಿ, ಬಾಗೇವಾಡಿ, ಕರಡಿಕ್ಯಾಂಪ್, ತ್ಯಾಗದಕಟ್ಟೆ, ಚನ್ನಮುಂಭಾಪುರ, ಚಿಕ್ಕಬಾಸೂರು, ಅಂಜಾನಪುರ, ಘಂಟ್ಯಾಪುರ ಗ್ರಾಮಗಳ ಜನರು ಈಗಲೂ ಪ್ರತಿನಿತ್ಯ ನಾಲ್ಕೈದು ಕಿಲೋಮೀಟರ್ ನಡೆದೇ ಬಸ್ ಹತ್ತುತ್ತಾರೆ.
ಇಲ್ಲಿನ ಗ್ರಾಮಗಳ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ದಿನನಿತ್ಯ ನಡೆದೆ ಹೋಗುತ್ತಾರೆ. ಆಟೊ ಸಿಕ್ಕರೆ ಅಲ್ಲಿ ವಿದ್ಯಾರ್ಥಿಗಳನ್ನು ಕುರಿ ತುಂಬಿಸಿದಂತೆ ತುಂಬಿಸಲಾಗುತ್ತದೆ. ಅದರಲ್ಲೂ ಜಾಗ ಸಿಗದವರು ಹಿಂದಿನ ಸ್ಟಾಂಡ್ ಮೇಲೆ ನಿಂತು ಕಸರತ್ತು ಮಾಡಬೇಕಾಗಿದೆ. ಹುಡುಗಿಯರ ಗೋಳು ಇದಕ್ಕಿಂತ ಚಿಂತಾಜನಕ ಎಂದು ಭೈರನಹಳ್ಳಿಯ ಗಣೇಶ್ ಅಳಲು ವ್ಯಕ್ತಪಡಿಸುತ್ತಾರೆ.
ಹಳ್ಳಿಗರು ದಿನನಿತ್ಯ ತರಕಾರಿ, ದಿನಸಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಹತ್ತಿರದ ಹೋಬಳಿ ಕೇಂದ್ರಕ್ಕೆ ನಡದೆ ಹೋಗುತ್ತಾರೆ. ಬೇರೆ ಊರುಗಳಿಗೆ ಹೋಗಬೇಕಾದರೂ ಮುಖ್ಯ ರಸ್ತೆಗೆ ಅಥವಾ ಬಸ್ ಸಂಚಾರವಿರುವ ಗ್ರಾಮಗಳಿಗೆ ನಡೆದು ಹೋಗಿ ಬಸ್ ಹತ್ತಬೇಕು. ಹೆಣ್ಣು ಹೆತ್ತ ತಂದೆ ತಾಯಂದಿರು ತಮ್ಮ ಮಗಳನ್ನು ಈ ಗ್ರಾಮಗಳಿಗೆ ಕೊಡಲು ಹಿಂದೇಟು ಹಾಕುತ್ತಾರೆ ಎಂದು ಹುರಳಹಳ್ಳಿಯ ರಾಮಪ್ಪ ಹೇಳುತ್ತಾರೆ.
ಹೊನ್ನಾಳಿ ತಾಲ್ಲೂಕಿಗೆ ಕೆಎಸ್‌ಅರ್‌ಟಿಸಿ ಬಸ್ ಘಟಕ ಪ್ರಾರಂಭವಾಗಿ ವರ್ಷ ಉರುಳಿದರೂ ಈ ಹೋಬಳಿ ಕೇಂದ್ರಕ್ಕೆ ಇದುವರೆಗೂ ಒಂದೂ ಸರ್ಕಾರಿ ಬಸ್ ಸಂಚರಿಸಿದೇ ಇರುವುದು ವಿಪರ್ಯಾಸದ ಸಂಗತಿ. ಸಾವಿರಾರು ವಿದ್ಯಾರ್ಥಿಗಳು, ಬಡವರು, ಅಂಗವಿಕಲರು, ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಸರ್ಕಾರ ಬಸ್ ದರದಲ್ಲಿ ನೀಡಿರುವ ರಿಯಾಯ್ತಿ ಈ ಹೋಬಳಿ ಕೇಂದ್ರದ ಜನತೆಗೆ ಉಪಯೋಗಕ್ಕೆ ಬಾರದಂತೆ ಆಗಿದೆ.
ಈ ಭಾಗದಲ್ಲಿ ಖಾಸಗಿ ಬಸ್‌ಗಳದ್ದೇ ದರಬಾರು ಆಗಿದೆ. ಗಂಟೆಗೊಂದು ಬಸ್ ಬರುತ್ತದೆ. ತಿಳಿದಷ್ಟು ಬಸ್ ದರ, ಸರಿಯಾದ ಸಮಯಕ್ಕೆ ಬಸ್ ಸಂಚರಿಸದೆ ಇರುವುದು, ಬಸ್ಸಿನಲ್ಲಿ ಜನರನ್ನು ದನದ ರೀತಿಯಲ್ಲಿ ತುಂಬುವುದು, ವಿದ್ಯಾರ್ಥಿಗಳನ್ನು ಬಸ್‌ಟಾಪ್‌ನಲ್ಲಿ ಕೂರಿಸಿ ಕರೆದುಕೊಂಡು ಹೋಗುವುದು ಹೀಗೆ ಹಲವು ರೀತಿಯಲ್ಲಿ ತೊಂದರೆಯನ್ನು ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
‘ನಾನು ದಿನನಿತ್ಯ ಶಿವಮೊಗ್ಗ ಕಾಲೇಜಿಗೆ ತೆರುಳುತ್ತೇನೆ. ದಿನನಿತ್ಯ ಓಡಾಡಲು ಸರ್ಕಾರಿ ಬಸ್ ಬಿಡಿ ಎಂದು ಎಷ್ಟೇ ಹೋರಾಟ ಮಾಡಿದರೂ ನಮ್ಮ ಭಾಗಕ್ಕೆ ಬಸ್ ಬಿಡುತ್ತಿಲ್ಲ. ಖಾಸಗಿ ಬಸ್‌ಗೆ ವಾರ್ಷಿಕ ಸಾವಿರಾರು ಖರ್ಚು ಮಾಡಿ ಓದಬೇಕಾಗಿದೆ. ಈ ಕಾರಣದಿಂದ ಅದೆಷ್ಟೋ ಬುದ್ಧಿವಂತ ಬಡ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ’ ಎಂದು ದೂರುತ್ತಾರೆ ವಿದ್ಯಾರ್ಥಿ ಕಿರಣ್.
ಸರ್ಕಾರದ ವಿಳಂಬ ನೀತಿಯಿಂದ ಈ ಹೋಬಳಿ ವ್ಯಾಪ್ತಿಯ ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ವೇಳಗೆ ಕೆಎಸ್‌ಆರ್‌ಟಿಸಿ ಬಸ್ ಓಡಾಡುವಂತೆ ಆಗಬೇಕು ಮತ್ತು ಬಸ್‌ಗಳಿಲ್ಲದ ಗ್ರಾಮಗಳನ್ನು ಮುಖ್ಯವಾಹಿನಿಗೆ ತರುವಂತಾಗಬೇಕು ಎಂಬುದು ಈ ಭಾಗದ ಜನರ ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.