ಹರಪನಹಳ್ಳಿ: ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಹೊಸಪೇಟೆ, ಹರಪನಹಳ್ಳಿ ಮಾರ್ಗವಾಗಿ ಯಶವಂತಪುರ ತಲುಪುವ ನೂತನ ರೈಲಿನ ಸಂಚಾರ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರ್ ಭಟ್ ತಿಳಿಸಿದ್ದಾರೆ.
ಚಿಕ್ಕಜಾಜೂರಿನಿಂದ ಜಿಂದಾಲ್, ಮಂಗಳೂರಿನಿಂದ ತೋರಣಗಲ್ಲು ಮಾರ್ಗವಾಗಿ ನಿತ್ಯ ಮೂರು ಸರಕು ಸಾಗಣೆ ರೈಲು ಮತ್ತು ಹರಿಹರದ ಅಮರಾವತಿಯಿಂದ ಕೊಟ್ಟೂರಿಗೆ ನಿತ್ಯ ಪ್ಯಾಸೆಂಜರ್ ರೈಲು ಒಂದು ಬಾರಿ ಸಂಚರಿಸಲು ಆರಂಭಿಸಿ ಎರಡು ವರ್ಷವಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪ್ರಾಯೋಗಿಕವಾಗಿ ಸರಕು ಸಾಗಣೆ ರೈಲನ್ನು ಸಂಚರಿಸಲಾಯಿತು. ಸಮಯದ ಉಳಿತಾಯ ಮತ್ತು ರೈಲ್ವೆ ಇಲಾಖೆಯ ಆರ್ಥಿಕ ಹಿತದೃಷ್ಟಿಯಿಂದ ಹೊಸ ರೈಲಿನ ಸಂಚಾರ ಆರಂಭವಾಗಲಿದೆ.
ರೈಲ್ವೆ ಇಲಾಖೆ ಪ್ರಕಟಿಸಿರುವ ಹೊಸ ರೈಲು ಸಂಚಾರದ ಕುರಿತು ಪ್ರಜಾವಾಣಿಗೆ ಚಂದ್ರಶೇಖರ ಭಟ್ ಮಂಗಳವಾರ ಮಾಹಿತಿ ನೀಡಿದರು. ಸಂಚಾರ ಎಂದು ಆರಂಭಿಸಬೇಕು ಎಂದು ಶೀಘ್ರದಲ್ಲಿಯೇ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಗುರುವಾರ ಮತ್ತು ಶನಿವಾರ ಸಂಚರಿಸುವ ರೈಲು 20 ಸ್ಥಳಗಳಲ್ಲಿ ಕನಿಷ್ಠ 2 ನಿಮಿಷದಿಂದ ಗರಿಷ್ಠ 5 ನಿಮಿಷ ನಿಲ್ಲಲಿದೆ. ಹೊಸಪೇಟೆ ಜಂಕ್ಷನ್‌ನಲ್ಲಿ ಮಾತ್ರ 10 ನಿಮಿಷ ನಿಲ್ಲಲಿದೆ.
ಮಾರ್ಗ: ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಅಮರಾವತಿ, ಹರಪನಹಳ್ಳಿ, ಕೊಟ್ಟೂರು, ಹೊಸಪೇಟೆ, ಕೊಪ್ಪಳ, ಗದಗ, ಬಾಗಲಕೋಟೆ, ವಿಜಯಪುರ, ಸೋಲಾಪುರ, ಪುಣೆ, ಲೋಣಾವಾಲ, ಥಾನೆ, ಲೋಕಮಾನ್ಯ ತಿಲಕ್ ಟರ್ಮಿನಲ್.
ಸಮಯ: ಬೆಳಿಗ್ಗೆ 9 ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 9.30ಕ್ಕೆ ಮುಂಬೈ ತಲುಪಲಿದೆ. ಸಂಜೆ 3.57ಕ್ಕೆ ಹರಪನಹಳ್ಳಿ ಬಂದು ಸೇರಲಿದೆ. ಮುಂಬೈನಿಂದ ಬೆಳಿಗ್ಗೆ 11.5ಕ್ಕೆ ಹೊರಟು ಮರುದಿನ 11.25ಕ್ಕೆ ಯಶವಂತಪುರ ತಲುಪಲಿದೆ. ಹರಪನಹಳ್ಳಿಗೆ ಬೆಳಗಿನ ಜಾವ 4.03 ನಿಮಿಷಕ್ಕೆ ತಲುಪಲಿದೆ ಎಂದು ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.