ADVERTISEMENT

ದಾವಣಗೆರೆ | 1.52 ಲಕ್ಷ ವಿವಿಧ ಪ್ರಭೇದದ ಗಿಡಗಳು ಮಾರಾಟಕ್ಕೆ ಲಭ್ಯ

ಕಳೆದ ವರ್ಷ ತೀವ್ರ ಬರ ಪರಿಣಾಮ; ಮಾರಾಟವಾಗದೇ ಉಳಿದ ಅಡಿಕೆ ಗಿಡಗಳು; ತಗ್ಗಿದ ಗುರಿ

ರಾಮಮೂರ್ತಿ ಪಿ.
Published 18 ಜೂನ್ 2024, 7:17 IST
Last Updated 18 ಜೂನ್ 2024, 7:17 IST

ದಾವಣಗೆರೆ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಅಡಿಕೆ ಗಿಡಗಳನ್ನು ಬೆಳೆಸಿರುವುದು

ದಾವಣಗೆರೆ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಅಡಿಕೆ ಗಿಡಗಳನ್ನು ಬೆಳೆಸಿರುವುದು

ದಾವಣಗೆರೆ: ತೀವ್ರ ಬರ, ಅಂತರ್ಜಲ ಕುಸಿತ, ಬೋರ್‌ವೆಲ್‌ಗಳ ವೈಫಲ್ಯದ ಪ್ರಮಾಣದಲ್ಲಿನ ಹೆಚ್ಚಳದಿಂದಾಗಿ ಕಳೆದ ವರ್ಷ (2023ರಲ್ಲಿ) ತೋಟಗಾರಿಕೆ ಇಲಾಖೆಯ ವಿವಿಧ ಪ್ರಭೇದದ ಗಿಡಗಳ ಮಾರಾಟದಲ್ಲಿ ತೀವ್ರ ಕುಸಿತಗೊಂಡಿದೆ.

ADVERTISEMENT

ರೈತರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸಸಿಗಳನ್ನು ಮಾರಾಟ ಮಾಡುವ ತೋಟಗಾರಿಕೆ ಇಲಾಖೆಯು 2022–23ನೇ ಸಾಲಿನಲ್ಲಿ 1.95 ಲಕ್ಷ ವಿವಿಧ ಪ್ರಭೇದದ ಸಸಿಗಳನ್ನು ಬೆಳೆಸಿ, ಮಾರಾಟಕ್ಕೆ ಮುಂದಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಸಾಕಷ್ಟು ಗಿಡಗಳು ಮಾರಾಟವಾಗದೇ ಉಳಿದಿವೆ. ಮುಖ್ಯವಾಗಿ ಶೇ 90 ರಷ್ಟು ಅಡಿಕೆ ಗಿಡಗಳು ಮಾರಾಟವಾಗದೇ ಉಳಿದಿವೆ.

ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ (ನರ್ಸರಿ) ಮಾರಾಟವಾಗದೇ ಉಳಿದ ಗಿಡಗಳನ್ನು ಈ ವರ್ಷ ಮಾರಾಟ ಮಾಡುವ ಉದ್ದೇಶದಿಂದ ಈ ಬಾರಿ ಸಸಿಗಳನ್ನು ಬೆಳೆಸುವ ಪ್ರಮಾಣದಲ್ಲಿ (ಗುರಿ) ಇಳಿಕೆ ಕಂಡಿದೆ. 2023–24ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯು 1,52,167 ಸಸಿಗಳನ್ನು ಮಾತ್ರ ಬೆಳೆಸಿ ರೈತರಿಗೆ ಮಾರಾಟ ಮಾಡಲು ಮುಂದಾಗಿದೆ.

ತೋಟಗಾರಿಕೆ ಇಲಾಖೆಯು ವಿವಿಧ ಸಸಿಗಳನ್ನು ಮಾತ್ರವಲ್ಲದೇ ಅಲಂಕಾರಿಕ ಗಿಡಗಳನ್ನೂ ಸಸ್ಯಕ್ಷೇತ್ರಗಳಲ್ಲಿ (ನರ್ಸರಿ) ವೈಜ್ಞಾನಿಕ ಮಾದರಿಯ‌ಲ್ಲಿ ಬೆಳೆಸಿ, ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತದೆ.

ತೋಟಗಾರಿಕೆ ಬೆಳೆಗಳಾದ ಅಡಿಕೆ (ಸ್ಥಳೀಯ), ತೆಂಗು (ಅರಸಿಕೆರೆ ಟಾಲ್‌), ನಿಂಬೆ (ಸ್ಥಳೀಯ) ಮಾತ್ರವಲ್ಲದೆ ದುರಂತ್, ಕ್ರೋಟಾನ್, ದಾಸವಾಳ ಸೇರಿದಂತೆ ಇನ್ನಿತರ ಅಲಂಕಾರಿಕ ಗಿಡಗಳೂ ಮಾರಾಟಕ್ಕೆ ಲಭ್ಯ ಇವೆ.

ಅಡಿಕೆ ಗಿಡವೊಂದಕ್ಕೆ ₹ 25, ತೆಂಗು ₹ 75, ನಿಂಬೆ ₹ 8 ದರ ನಿಗದಿಪಡಿಸಿದ್ದು, ಅಲಂಕಾರಿಕ ಗಿಡಗಳನ್ನು ಕನಿಷ್ಠ ₹ 15 ರಿಂದ ಗರಿಷ್ಠ ₹ 30 ರ ವರೆಗೆ ಮಾರಾಟ ಮಾಡಲಾಗುತ್ತಿದೆ.

ಜೂನ್‌ ಮೊದಲ ವಾರದಿಂದ ಸಸಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈಗಾಗಲೇ ಶೇ 5ರಿಂದ ಶೇ 10ರಷ್ಟು ಗಿಡಗಳನ್ನು ಮಾರಾಟ ಮಾಡಲಾಗಿದೆ. ಜುಲೈ ಅಂತ್ಯದ ವೇಳೆಗೆ ಎಷ್ಟು ಗಿಡಗಳು ಮಾರಾಟ ಆಗಿವೆ ಎಂಬುದನ್ನು ನೋಡಿಕೊಂಡು ಮುಂದಿನ ವರ್ಷಕ್ಕೆ ಹೊಸ ಗುರಿಯನ್ನು ನಿಗದಿಪಡಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.