ADVERTISEMENT

ಬಡ ಮಕ್ಕಳಿಗೂ ಸಿಗಲಿದೆ ‘ಇಂಗ್ಲಿಷ್‌ ಮಂತ್ರದಂಡ’!

ಜಿಲ್ಲೆಯ 32 ಕಡೆ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭ

​ಪ್ರಜಾವಾಣಿ ವಾರ್ತೆ
Published 16 ಮೇ 2019, 12:45 IST
Last Updated 16 ಮೇ 2019, 12:45 IST
ಸಿ.ಆರ್‌. ಪರಮೇಶ್ವರಪ್ಪ
ಸಿ.ಆರ್‌. ಪರಮೇಶ್ವರಪ್ಪ   

ದಾವಣಗೆರೆ: ದುಬಾರಿ ಶುಲ್ಪ ಪಾವತಿಸಲು ಸಾಧ್ಯವಾಗದಿರುವುದರಿಂದ ಬಡವರ ಮಕ್ಕಳ ಪಾಲಿಗೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಗಗನ ಕುಸುಮವಾಗಿತ್ತು. ಇದೀಗ ರಾಜ್ಯ ಸರ್ಕಾರ ದಾವಣಗೆರೆ ಜಿಲ್ಲೆಯಲ್ಲೂ 32 ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸುತ್ತಿದೆ. ತಮ್ಮ ಮಕ್ಕಳನ್ನೂ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿಸಬೇಕು ಎಂಬ ಬಡವರ ಕನಸು ನನಸಾಗಲು ಕಾಲ ಕೂಡಿ ಬಂದಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ‘ಇಂಗ್ಲಿಷ್‌’ ಭಾಷೆಯ ಮೇಲೆ ಹಿಡಿತ ಹೊಂದುವುದು ಅನಿವಾರ್ಯವಾಗಿದೆ. ಇದನ್ನೇ ‘ಬಂಡವಾಳ’ವನ್ನಾಗಿಸಿಕೊಂಡ ಹಲವು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದವು. ಬಡವರ ಮಕ್ಕಳಿಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಲಭಿಸಬೇಕು ಎಂಬ ಉದ್ದೇಶದಿಂದ ಎಲ್‌.ಕೆ.ಜಿ.ಯಿಂದಲೇ (ಪೂರ್ವ ಪ್ರಾಥಮಿಕ ಶಿಕ್ಷಣ) ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಇನ್ನು ಮುಂದೆ ಬಡವರ ಮಕ್ಕಳ ಕೈಗೂ ‘ಇಂಗ್ಲಿಷ್‌ ಮಂತ್ರದಂಡ’ ಸಿಗಲಿದೆ.

‘ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ತಲಾ ನಾಲ್ಕರಂತೆ ಒಟ್ಟು 32 ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಈ ವರ್ಷದಿಂದ ಆರಂಭಿಸುತ್ತಿದ್ದೇವೆ. ಈಗಾಗಲೇ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ಮಾಡಲು ನಿಯೋಜಿಸಿರುವ ಶಿಕ್ಷಕರಿಗೆ ಡಯಟ್‌ನಲ್ಲಿ ತರಬೇತಿ ನೀಡುತ್ತಿದ್ದೇವೆ. ಶಿಕ್ಷಕರಿಗೆ 15 ದಿನಗಳ ತರಬೇತಿ ಕೊಡಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಳೆದ ವರ್ಷ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ಒಟ್ಟು ಆರು ‘ಕರ್ನಾಟಕ ಪಬ್ಲಿಕ್ ಸ್ಕೂಲ್‌’ (ಕೆ.ಪಿ.ಎಸ್‌) ಆರಂಭಿಸಲಾಗಿತ್ತು. ಈ ವರ್ಷ ಇನ್ನೂ ಐದು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆರಂಭಿಸಲಾಗುತ್ತಿದೆ. ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಮೊದಲು ಪಬ್ಲಿಕ್‌ ಸ್ಕೂಲ್‌ಗೆ ಆದ್ಯತೆ ನೀಡಲಾಗುತ್ತಿದೆ. ಶಾಲೆಯಲ್ಲಿರುವ ಮೂಲಸೌಲಭ್ಯ, ಮಕ್ಕಳ ಹಾಜರಾತಿ ಸಂಖ್ಯೆಗಳನ್ನು ಆಧರಿಸಿ ಪ್ರತಿ ಹೋಬಳಿಯಲ್ಲೂ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಪರಮೇಶ್ವರಪ್ಪ ಮಾಹಿತಿ ನೀಡಿದರು.

‘32 ಕಡೆಯೂ ಎಲ್‌ಕೆಜಿ ಹಾಗೂ ಒಂದನೇ ತರಗತಿಗೆ ಜೂನ್‌ ಒಂದರಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಶಾಲೆಗಳ ವ್ಯಾಪ್ತಿಯಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಬಗ್ಗೆ ಶಿಕ್ಷಕರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಶಿಕ್ಷಕರು ಪೋಷಕರನ್ನು ಭೇಟಿ ಮಾಡಿ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುವಂತೆ ಮನವೊಲಿಸುತ್ತಿದ್ದಾರೆ’ ಎಂದು ತಿಳಿಸಿದರು.

ಪೋಷಕರಿಂದ ಬೆಂಬಲ: ‘ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುತ್ತಿರುವ ಬಗ್ಗೆ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದೇವೆ. ಖಾಸಗಿ ಶಾಲೆಗಳಲ್ಲಿ ಸಿಗುವ ಸೌಲಭ್ಯ ಸರ್ಕಾರಿ ಶಾಲೆಗಳಲ್ಲೇ ಸಿಗುತ್ತಿರುವ ಬಗ್ಗೆ ಹಲವು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಎಂಟರಿಂದ ಹತ್ತು ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಲೋಕಿಕೆರೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಎಚ್‌. ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಳೆದ ವರ್ಷ ಒಂದನೇ ತರಗತಿಗೆ 29 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಬಾರಿ ಕನ್ನಡದ ಜೊತೆಗೆ ಇಂಗ್ಲಿಷ್‌ ಮಾಧ್ಯಮದಲ್ಲೂ ಬೋಧನೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪೋಷಕರು ಯಾವ ಮಾಧ್ಯಮವನ್ನು ಬಯಸುತ್ತಾರೋ ಅದಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದು ಕೃಷ್ಣಮೂರ್ತಿ ತಿಳಿಸಿದರು.

ಎಲ್ಲೆಲ್ಲಿ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ?

ಚನ್ನಗಿರಿ ವಲಯ: ಜಿ.ಎಚ್‌.ಪಿ.ಎಸ್‌. ಬಾಲಕರ ಮಾದರಿ ಶಾಲೆ (ಸಂತೇಬೆನ್ನೂರು); ಜಿ.ಎಚ್‌.ಪಿ.ಎಸ್‌ (ತಾವರಕೆರೆ); ಜಿ.ಎಚ್‌.ಪಿ.ಎಸ್‌ – ಬಾಲಕಿಯರು (ಚನ್ನಗಿರಿ); ಜಿ.ಎಚ್‌.ಪಿ.ಎಸ್‌– ಬಾಲಕಿಯರು (ನಲ್ಲೂರು); ಜಿ.ಎಚ್‌.ಪಿ.ಎಸ್‌. ಬಾಲಕರ ಮಾದರಿ ಶಾಲೆ (ತ್ಯಾವಣಿಗೆ);

ದಾವಣಗೆರೆ ಉತ್ತರ: ಜಿ.ಎಚ್‌.ಪಿ.ಎಸ್‌ (ದೊಡ್ಡಬಾತಿ); ಜಿ.ಎಚ್‌.ಪಿ.ಎಸ್‌. (ಕಕ್ಕರಗೊಳ್ಳ), ಜಿ.ಎಚ್‌.ಪಿ.ಎಸ್‌ (ಕುಕ್ಕವಾಡ); ಜಿ.ಎಚ್‌.ಪಿ.ಎಸ್‌ – ಕನ್ನಡ (ಎಸ್‌.ಎಸ್‌. ಮಲ್ಲಿಕಾರ್ಜುನ ನಗರ); ಜಿ.ಎಚ್‌.ಪಿ.ಎಸ್‌ – ಉರ್ದು (ಎಸ್‌.ಎಸ್‌. ಮಲ್ಲಿಕಾರ್ಜುನ ನಗರ); ಜಿ.ಎಚ್‌.ಪಿ.ಎಸ್‌ (ಎಸ್‌.ಪಿ.ಎಸ್‌. ನಗರ ಎರಡನೇ ಹಂತ); ಜಿ.ಎಚ್‌.ಪಿ.ಎಸ್‌. (ಆನಗೋಡು);

ದಾವಣಗೆರೆ ದಕ್ಷಿಣ: ಜಿ.ಎಚ್‌.ಪಿ.ಎಸ್‌. ಉನ್ನತೀಕರಿಸಿದ ಶಾಲೆ (ನಿಟುವಳ್ಳಿ); ಜಿ.ಎಚ್‌.ಪಿ.ಎಸ್‌ (ಹಳೇ ಕುಂದವಾಡ ವಿನೋಬನಗರ);ಜಿ.ಎಚ್‌.ಪಿ.ಎಸ್‌. ಬಾಲಕಿಯರ ಶಾಲೆ (ಮಾಯಕೊಂಡ); ಜಿ.ಎಚ್‌.ಪಿ.ಎಸ್‌. (ಲೋಕಿಕೆರೆ);

ಹರಪನಹಳ್ಳಿ ವಲಯ: ಜಿ.ಎಚ್‌.ಪಿ.ಎಸ್‌ ಬಾಲಕಿಯರ ಮಾದರಿ ಶಾಲೆ (ಹರಪನಹಳ್ಳಿ); ಜಿ.ಎಚ್‌ಪಿ.ಎಸ್‌. ಉನ್ನತೀಕರಿಸಿದ ಶಾಲೆ (ನಿಟ್ಟೂರು); ಜಿ.ಎಚ್‌.ಎಸ್‌. (ಮತ್ತಿಹಳ್ಳಿ); ಜಿ.ಜೆ.ಸಿ. (ಹಲುವಾಗಲು);

ಹರಿಹರ ವಲಯ: ಜಿ.ಎಚ್‌.ಪಿ.ಎಸ್‌ ಮಾದರಿ ಶಾಲೆ (ಹಳ್ಳದಕೆರೆ); ಜಿ.ಎಚ್‌.ಪಿ.ಎಸ್‌ ಮಾದರಿ ಶಾಲೆ (ಭಾನುವಳ್ಳಿ); ಜಿ.ಎಚ್‌.ಪಿ.ಎಸ್‌ (ಬನ್ನಿಕೋಡು); ಜಿ.ಎಚ್‌.ಎಸ್‌ (ಸಾರಥಿ);

ಹೊನ್ನಾಳಿ ವಲಯ: ಸರ್ಕಾರಿ ಪದವಿ ಪೂರ್ವ ಕಾಲೇಜು (ಸಾಸ್ವೇಹಳ್ಳಿ); ಜಿ.ಎಚ್‌.ಪಿ.ಎಸ್‌ (ಬೆಳಗುತ್ತಿ); ಜಿ.ಜೆ.ಸಿ (ನ್ಯಾಮತಿ); ಜಿ.ಎಚ್‌.ಪಿ.ಎಸ್‌. ಟಿಬಿಸಿ– (ದೇವನಾಯ್ಕನಹಳ್ಳಿ);

ಜಗಳೂರು ವಲಯ: ಜಿ.ಎಚ್‌.ಪಿ.ಎಸ್‌ (ಬಿಳಿಚೋಡು); ಜಿ.ಎಚ್‌.ಪಿ.ಎಸ್‌. (ತಮಲೆಹಳ್ಳಿ); ಜಿ.ಎಚ್‌.ಪಿ.ಎಸ್‌ ಬಾಲಕರು (ಜಗಳೂರು); ಜಿ.ಎಚ್‌.ಪಿ.ಎಸ್‌. (ತೋರಣಗಟ್ಟೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.