ದಾವಣಗೆರೆ: ಅಕ್ಟೋಬರ್ ತಿಂಗಳಲ್ಲಿ ಸುರಿದ ಹಿಂಗಾರು ಮಳೆಗೆ ಜಿಲ್ಲೆಯಲ್ಲಿ 337 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ನಿಖರ ಮಾಹಿತಿ ಕಲೆಹಾಕಲು ಕಂದಾಯ ಹಾಗೂ ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಡೆಯುತ್ತಿದೆ.
ಜಿಲ್ಲೆಯಲ್ಲಿ ಅ.1ರಿಂದ 25ರವರೆಗೆ 9.8 ಸೆಂ.ಮೀ ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವವಾಗಿ 26.2 ಸೆಂ.ಮೀ ಮಳೆಯಾಗಿದೆ. ಶೇ 168ರಷ್ಟು ಹೆಚ್ಚುವರಿ ಮಳೆ ದಾಖಲಾಗಿದ್ದು, ವಾಡಿಕೆಗಿಂತ ಅಧಿಕ ಪ್ರಮಾಣದ ಮಳೆಯಾದ ಜಿಲ್ಲೆಗಳಲ್ಲಿ ದಾವಣಗೆರೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಜೂನ್, ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿದ್ದ ಕೃಷಿ ಬೆಳೆಗಳಲ್ಲಿ ಮೆಕ್ಕೆಜೋಳಕ್ಕೆ ಹೆಚ್ಚು ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಪಪ್ಪಾಯಕ್ಕೆ ಹೆಚ್ಚು ತೊಂದರೆ ಉಂಟಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕ ಪರಿಣಾಮ ನ್ಯಾಮತಿ ತಾಲ್ಲೂಕಿನ 1,500 ಹೆಕ್ಟೇರ್ ಪ್ರದೇಶದ ಈರುಳ್ಳಿ ಕಟಾವು ಕಾರ್ಯ ಪೂರ್ಣಗೊಂಡಿದ್ದರಿಂದ ಮಳೆಗೆ ಸಿಲುಕಿಲ್ಲ ಎಂದು ಜಿಲ್ಲಾಡಳಿತ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ಒದಗಿಸಿದೆ.
ಹಿಂಗಾರು ಮಳೆಗೆ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ನ್ಯಾಮತಿ ತಾಲ್ಲೂಕಿನಲ್ಲಿ ಹರಿಯುವ ನೀರಿನಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿ ಹಾಗೂ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನಲ್ಲಿ ಗೋಡೆ ಕುಸಿದು ಇನ್ನೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ಪಾವತಿಸಲಾಗಿದೆ. ಹೊನ್ನಾಳಿಯಲ್ಲಿ 2 ಹಾಗೂ ಜಗಳೂರು, ಚನ್ನಗಿರಿಯಲ್ಲಿ ತಲಾ 1ರಂತೆ 4 ದೊಡ್ಡ ಜಾನುವಾರು ಮೃತಪಟ್ಟಿವೆ. ಹರಿಹರ ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ತಲಾ 8ರಂತೆ 16 ಕುರಿಗಳು ಮೃತಪಟ್ಟಿವೆ.
ಅ.25ರವರೆಗೆ ಜಿಲ್ಲೆಯಲ್ಲಿ 33 ಮನೆಗಳು ಸಂಪೂರ್ಣ ಕುಸಿದಿವೆ. ವಿಪತ್ತು ನಿರ್ವಹಣಾ ಮಾರ್ಗಸೂಚಿಯ ಪ್ರಕಾರ 17 ಮನೆಗಳಿಗೆ ತಲಾ ₹ 1.2 ಲಕ್ಷ ಪರಿಹಾರ ವಿತರಿಸಲಾಗಿದೆ. 269 ಮನೆಗಳು ಭಾಗಶಃ ಕುಸಿದಿದ್ದು, 142 ಮನೆಗಳಿಗೆ ತಲಾ ₹ 4,000ದಿಂದ ₹ 6,500 ರವರೆಗೆ ಪರಿಹಾರ ನೀಡಲಾಗಿದೆ.
‘ಜಿಪಿಎಸ್ ಮೂಲಕ ಹಾನಿಯನ್ನು ಖಚಿತಪಡಿಸಿಕೊಂಡು ವರದಿ ನೀಡುವಂತೆ ಸೂಚಿಸಲಾಗಿದೆ. ಬಾಕಿ ಇರುವ ಮನೆಗಳಿಗೆ ಶೀಘ್ರ ಪರಿಹಾರ ವಿತರಿಸಲಾಗುತ್ತದೆ. ಮುಂಗಾರು ಹಾಗೂ ಪೂರ್ವ ಮುಂಗಾರಿನಲ್ಲಿ ಉಂಟಾಗಿದ್ದ ಹಾನಿಗೆ ಪರಿಹಾರ ವಿತರಣೆ ಕಾರ್ಯ ಪೂರ್ಣಗೊಂಡಿದೆ. ಕೆಂಪು ಮಣ್ಣಿನ ಕೃಷಿ ಭೂಮಿ ಹೆಚ್ಚಿರುವುದರಿಂದ ಜಿಲ್ಲೆಯಲ್ಲಿ ಬೆಳೆ ಹಾನಿ ಪ್ರಮಾಣ ಕಡಿಮೆ. ಕೆರೆಯಿಂದ ಜಲಾವೃತಗೊಂಡ ಕೃಷಿ ಭೂಮಿ ಹಾಗೂ ತಗ್ಗು ಪ್ರದೇಶದಲ್ಲಿ ಮಾತ್ರ ಬೆಳೆಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮಳೆಯಿಂದ ಉಂಟಾಗಿರುವ ಹಾನಿಯ ನಿಖರ ಮಾಹಿತಿಗೆ ಜಂಟಿ ಸಮೀಕ್ಷೆ ನಡೆಯುತ್ತಿದೆ. ನಾಲ್ಕು ದಿನಗಳಲ್ಲಿ ವರದಿ ಸಿದ್ಧವಾಗಲಿದ್ದು ಪರಿಹಾರ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ.ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.