ADVERTISEMENT

ದಾವಣಗೆರೆ | ಸಾಲದ ಶೂಲ: ಆತ್ಮಹತ್ಯೆಗೆ ರೈತ ಶರಣು

ಜಿ.ಬಿ.ನಾಗರಾಜ್
Published 15 ಜುಲೈ 2024, 7:26 IST
Last Updated 15 ಜುಲೈ 2024, 7:26 IST
   

ದಾವಣಗೆರೆ: ‘ಎರಡು ವರ್ಷಗಳಿಂದ ಮಳೆ ಸರಿಯಾಗಿ ಬರುತ್ತಿಲ್ಲ. ಮೆಕ್ಕೆಜೋಳ, ಶೇಂಗಾ ಕೈಹಿಡಿಯುತ್ತಿಲ್ಲ. ಬೀಜ, ರಸಗೊಬ್ಬರ, ಭೂಮಿ ಉಳುಮೆಗೆ ಮಾಡಿದ ಸಾಲದ ಬಡ್ಡಿ ಬೆಳೆಯುತ್ತಿರುವ ರೀತಿ ಅಣ್ಣನನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿಬಿಟ್ಟರು..’ ಎನ್ನುವಾಗ ತಮ್ಮನ ಧ್ವನಿ ಗದ್ಗಿತವಾಗಿತ್ತು.

ಇದು ನ್ಯಾಮತಿ ತಾಲ್ಲೂಕಿನ ಮಲ್ಲಿಗೇನಹಳ್ಳಿಯ ರೈತ ಜಿ.ಸದಾನಂದಪ್ಪ ಕುಟುಂಬದ ವ್ಯಥೆ. ಸದಾನಂದಪ್ಪ (45) ಸಾಲಕ್ಕೆ ಹೆದರಿ ಜುಲೈ 9ರಂದು ಆತ್ಮಹತ್ಯೆ ಮಾಡಿಕೊಂಡರು. ಮನೆ ಯಜಮಾನನ ಸಾವಿನ ಆಘಾತದಿಂದ ಕುಟುಂಬ ಹೊರಬರಲು ಸಾಧ್ಯವಾಗ ಸ್ಥಿತಿಯ ಬಗ್ಗೆ ತಮ್ಮ ಜಿ.ಫಾಲಾಕ್ಷಪ್ಪ ಅಳಲು ತೋಡಿಕೊಂಡರು.

ಮಲ್ಲಿಗೇನಹಳ್ಳಿಯ ಬಸವಣ್ಯಪ್ಪ ಅವರಿಗೆ ಜಿ.ಸದಾನಂದಪ್ಪ, ಫಾಲಾಕ್ಷಪ್ಪ ಸೇರಿ ಆರು ಜನ ಪುತ್ರರು. ಪಿತ್ರಾರ್ಜಿತ ಆಸ್ತಿಯಲ್ಲಿ ಪ್ರತಿಯೊಬ್ಬರಿಗೂ 1 ಎಕರೆ 30 ಗುಂಟೆ ಜಮೀನು ಸಿಕ್ಕಿದೆ. ಮಳೆಯಾಶ್ರಿತ ಭೂಮಿಯಲ್ಲಿ ಮೆಕ್ಕೆಜೋಳ, ಶೇಂಗಾ, ತರಕಾರಿ ಬೆಳೆಯುತ್ತಾರೆ. ಬಿತ್ತನೆ ಬೀಜ, ರಸಗೊಬ್ಬರ, ಭೂಮಿ ಉಳುಮೆಗೆ ಮಾಡಿದ್ದ ₹ 3.2 ಲಕ್ಷ ಸಾಲದ ಬಡ್ಡಿ ದಿನ ಕಳೆದಂತೆ ಹೆಚ್ಚುತ್ತಿದೆ. ಪ್ರಸಕ್ತ ಮುಂಗಾರು ನಿರೀಕ್ಷೆಯಂತೆ ಸುರಿಯದಿರುವುದು ಸದಾನಂದಪ್ಪ ಅವರ ಜೀವನೋತ್ಸಾಹವನ್ನು ಕುಗ್ಗಿಸಿತ್ತು.

ADVERTISEMENT

ಇದು ಒಬ್ಬ ರೈತನ ಕುಟುಂಬದ ಕರುಣಾಜನಕ ಕಥೆಯಲ್ಲ. ದಾವನಣಗೆರೆ ಜಿಲ್ಲೆಯ ಬಹುತೇಕ ರೈತ ಕುಟುಂಬಗಳು ಎದುರಿಸುತ್ತಿರುವ ಪರಿಸ್ಥಿತಿ. ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿಯ ಡಿ.ಕೆ.ಕಡೂರಪ್ಪ (45), ಚೀಲೂರು ಗ್ರಾಮದ ಎಂ.ದೇವೇಂದ್ರಪ್ಪ (73), ದಾವಣಗೆರೆ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಶಿವಕುಮಾರ ನಾಯ್ಕ (32) ಹೀಗೆ ಸಾಲು ಸಾಲು ರೈತರು ಕೃಷಿಯಲ್ಲಿ ಭರವಸೆ ಕಳೆದುಕೊಂಡು ಜೀವನ ಅಂತ್ಯಗೊಳಿಸಿಕೊಂಡಿದ್ದಾರೆ. ಯುವಕರಿಂದ ವೃದ್ಧರವರೆಗೆ ಎಲ್ಲ ವಯೋಮಾನದವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜಮೀನಿನಲ್ಲಿ ಕೀಟನಾಶಕ ಸೇವಿಸುವುದು, ಮರ ಅಥವಾ ವಿದ್ಯುತ್‌ ಕಂಬಗಳಿಗೆ ನೇಣು ಹಾಕಿಕೊಳ್ಳುವುದು ಆತ್ಮಹತ್ಯೆಯ ಭಿನ್ನ ವಿಧಗಳಷ್ಟೇ. ಕೃಷಿ ಬದುಕಿನಲ್ಲಿ ಅನುಭವಿಸಿದ ಸೋಲು ಇವರನ್ನು ಆತ್ಮಹತ್ಯೆಯ ಕೂಪಕ್ಕೆ ನೂಕುತ್ತಿದೆ. 2023ರಲ್ಲಿ ತಲೆದೋರಿದ ಭೀಕರ ಬರ ಪರಿಸ್ಥಿತಿ ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶದ ರೈತರ ಬದುಕನ್ನು ಕಮರುವಂತೆ ಮಾಡಿದೆ. ಪ್ರಸಕ್ತ ಮುಂಗಾರು ಹಂಗಾಮಿನ ಕಣ್ಣಾಮುಚ್ಚಾಲೆ ಇನ್ನಷ್ಟು ಭೀತಿ ಸೃಷ್ಟಿಸಿದೆ.

43 ರೈತರು ಆತ್ಮಹತ್ಯೆ:

ಅನಾವೃಷ್ಟಿಯಿಂದ ಉಂಟಾದ ಬೆಳೆ ಹಾನಿಯಿಂದ ಕೃಷಿ ಬದುಕಿನಲ್ಲಿ ಭರವಸೆ ಕಳೆದುಕೊಂಡ ರೈತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. 2023ರ ಏ.1ರಿಂದ 2024ರ ಜುಲೈ 4ರವರೆಗೆ ಜಿಲ್ಲೆಯಲ್ಲಿ 43 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹತ್ತು ದಿನಗಳಲ್ಲಿ ಮತ್ತೆ ಕೆಲವರು ಬದುಕು ಅಂತ್ಯಗೊಳಿಸಿಕೊಂಡಿದ್ದಾರೆ. ಮುಂಗಾರು ಕೈಕೊಟ್ಟರೆ ಈ ಆತ್ಮಹತ್ಯಾ ಸರಣಿ ಇನ್ನಷ್ಟು ಹೆಚ್ಚಾಗಲಿದೆ ಎಂಬುದು ರೈತ ನಾಯಕರ ಕಳವಳ.

ಜಿಲ್ಲೆಯಲ್ಲಿ ನೀರಾವರಿಗಿಂತ ಮಳೆಯಾಶ್ರಿತ ಪ್ರದೇಶದ ಹೆಚ್ಚಾಗಿದೆ. ಭದ್ರಾ ಜಲಾಶಯ ಹಾಗೂ ಶಾಂತಿಸಾಗರದ ಅಚ್ಚುಕಟ್ಟು ಪ್ರದೇಶ ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ. ಕಳೆದ ವರ್ಷ ಭೀಕರ ಬರ ಪರಿಸ್ಥಿತಿಯಿಂದ ಮಳೆಯಾಶ್ರಿತ ಪ್ರದೇಶದ ಬೆಳೆ ಸಂಪೂರ್ಣ ಕೈಕೊಟ್ಟಿತು. ಭದ್ರಾ ಜಲಾಶಯದಿಂದ ಹಿಂಗಾರು ಹಂಗಾಮಿಗೆ ನೀರು ಬಿಡಲಿಲ್ಲ. ಪ್ರತಿ ವರ್ಷ ಎರಡು ಬೆಳೆ ಬೆಳೆಯುತ್ತಿದ್ದ ರೈತರು ಒಂದೇ ಬೆಳೆಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆತ್ಮಹತ್ಯೆಗೆ ಶರಣಾದ ರೈತರಲ್ಲಿ ನೀರಾವರಿ ಪ್ರದೇಶದ ರೈತರೇ ಹೆಚ್ಚಿರುವುದು ವಿಪರ್ಯಾಸ.

39 ಕುಟುಂಬಗಳಿಗೆ ಪರಿಹಾರ:

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸರ್ಕಾರ ₹ 5 ಲಕ್ಷ ಪರಿಹಾರ ನಿಗದಿಪಡಿಸಿದೆ. ಆತ್ಮಹತ್ಯೆಗೆ ಶರಣಾದ 43 ರೈತರಲ್ಲಿ 39 ಕುಟುಂಬಗಳಿಗೆ ಪರಿಹಾರ ವಿತರಣೆಯಾಗಿದೆ. ಜಗಳೂರು ತಾಲ್ಲೂಕಿನ 2 ಪ್ರಕರಣ ಸೇರಿ 4 ಅರ್ಜಿಗಳು ತಿರಸ್ಕೃತವಾಗಿವೆ. ಎರಡು ವಾರಗಳಿಂದೀಚೆಗೆ ಹೊಸದಾಗಿ ದಾಖಲಾದ ಆತ್ಮಹತ್ಯೆ ಪ್ರಕರಣಗಳಲ್ಲಿ ಮತ್ತೆ ಮೂವರು ರೈತರ ಕುಟುಂಬಗಳಿಗೆ ಪರಿಹಾರ ವಿತರಿಸಲು ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಜಿಲ್ಲಾಧಿಕಾರಿ ಕಚೇರಿ ಅನುಮೋದನೆಯ ಬಳಿಕ ಈ ಕುಟುಂಬಗಳಿಗೂ ಪರಿಹಾರ ಬಿಡುಗಡೆಯಾಗಲಿದೆ.

ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಾಗುತ್ತಿದ್ದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಾರೆ. ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ವರದಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿಯ ಎದುರು ಬರುತ್ತದೆ. ಕೃಷಿ, ಆರೋಗ್ಯ, ಬ್ಯಾಂಕ್‌ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಈ ಸಮಿತಿಯ ಸದಸ್ಯರು. ಕುಲಂಕಷವಾಗಿ ಪರಿಶೀಲಿಸಿ ಸಮಿತಿ ತೀರ್ಮಾನಿಸುತ್ತದೆ. ಪರಿಹಾರಕ್ಕೆ ಶಿಫಾರಸುಗೊಂಡ ಅರ್ಜಿ ಜಿಲ್ಲಾಧಿಕಾರಿ ಕಚೇರಿಯ ಅನುಮೋದನೆ ಪಡೆದ ಬಳಿಕ ನೇರ ನಗದು ವ್ಯವಸ್ಥೆ (ಡಿಬಿಟಿ) ಮೂಲಕ ಸಂತ್ರಸ್ತ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

‘ರೈತರ ಆತ್ಮಹತ್ಯೆ ಪ್ರಕರಣವನ್ನು ಪರಿಹಾರಕ್ಕೆ ಶಿಫಾರಸು ಮಾಡುವ ವಿಚಾರದಲ್ಲಿ ತ್ವರಿತ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ ವೈದ್ಯಕೀಯ ವರದಿ ಆಧರಿಸಿ ಕೆಲವೇ ದಿನಗಳಲ್ಲಿ ಇತ್ಯರ್ಥಪಡಿಲಾಗುತ್ತದೆ. ವಿಷ ಸೇವಿಸಿದ ಪ್ರಕರಣಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಮಾತ್ರ ವಿಳಂಬವಾಗುತ್ತಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಯ ತೀರ್ಮಾನಕ್ಕೆ ಸಂಬಂಧಿಸಿದ ಆಕ್ಷೇಪಗಳಿದ್ದರೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ತಿರಸ್ಕೃತಗೊಂಡ ಅರ್ಜಿ, ಪರಿಹಾರ ವಿಳಂಬ ಸೇರಿ ಇತರ ತಕರಾರು ಸಲ್ಲಿಸಬಹುದಾಗಿದೆ. ಪ್ರಕರಣ ಸಂಭವಿಸಿದ ಆರು ತಿಂಗಳವರೆಗೆ ಮಾತ್ರ ಮೇಲ್ಮನವಿಗೆ ಅವಕಾಶ.

Farmer-2020
SAD-Farmer-2020
ರೈತರ ಆತ್ಮಹತ್ಯೆ ಪ್ರಕರಣಗಳು ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿ ಎದುರು ಬರುತ್ತವೆ. ಸಮಿತಿ ತೀರ್ಮಾನ ಕೈಗೊಂಡು ಪರಿಹಾರಕ್ಕೆ ಶಿಫಾರಸು ಮಾಡುತ್ತದೆ. ಬಹುತೇಕ ಪ್ರಕರಣಗಳಲ್ಲಿ ಪರಿಹಾರ ಮಂಜೂರಾಗಿದೆ.
ಶ್ರೀನಿವಾಸ್‌ ಚಿಂತಾಲ್‌ ಜಂಟಿ ಕೃಷಿ ನಿರ್ದೇಶಕ
ದಾವಣಗೆರೆ ಹರಿಹರ ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ದಾಖಲಾದ 15 ಪ್ರಕರಣಗಳಲ್ಲಿ 13ರಲ್ಲಿ ಪರಿಹಾರ ಸಿಕ್ಕಿದೆ. 2 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಸರ್ಕಾರದ ಮಾನದಂಡದ ಆಧಾರದ ಮೇರೆಗೆ ತೀರ್ಮಾನ ಕೈಗೊಳ್ಳಲಾಗಿದೆ.
ದುರ್ಗಶ್ರೀ ಉಪವಿಭಾಗಾಧಿಕಾರಿ ದಾವಣಗೆರೆ
ಸರ್ಕಾರದ ಆದ್ಯತೆ ಬದಲಾಗಿದೆ. ಕೃಷಿಗೆ ಒತ್ತು ಕಡಿಮೆಯಾಗಿದೆ. ಸ್ವಾಮಿನಾಥನ್‌ ವರದಿ ಅನುಷ್ಠಾನಗೊಳಿಸಿದರೆ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತದೆ. ಆಗ ರೈತರ ಬದುಕು ಹಸನವಾಗಲಿದ್ದು ಆತ್ಮಹತ್ಯೆ ಪ್ರಕರಣಗಳು ಕಡಿಮೆ ಆಗಲಿವೆ.
ಬಲ್ಲೂರು ರವಿಕುಮಾರ್‌ ರೈತ ಮುಖಂಡ
ನಿಲ್ಲದ ಕಿರುಕುಳ
ಸಾಲದ ಶೂಲಕ್ಕೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸರ್ಕಾರ ನಡೆಸಿದ ಅಧ್ಯಯನಗಳಿಂದಲೇ ಬೆಳಕಿಗೆ ಬಂದಿದೆ. ಬೆಳೆ ಸಾಲ ಅಭಿವೃದ್ಧಿ ಸಾಲವನ್ನು ಬ್ಯಾಂಕ್‌ಗಳಿಂದ ಹೆಚ್ಚುವರಿ ಸಾಲವನ್ನು ಲೇವಾದೇವಿದಾರರಿಂದ ರೈತರು ಪಡೆಯುತ್ತಿದ್ದಾರೆ. ಸಾಲ ಮರುಪಾವತಿಗೆ ರೈತರ ಮೇಲಿನ ಒತ್ತಡ ಕಡಿಮೆಯಾಗುತ್ತಿಲ್ಲ ಎಂಬುದು ರೈತ ಸಂಘಟನೆಗೆ ಆಕ್ರೋಶ. ಬರ ಪರಿಸ್ಥಿತಿಯ ಕಾರಣಕ್ಕೆ ಸಾಲ ಮರುಪಾವತಿಗೆ ರೈತರನ್ನು ಪೀಡಿಸದಂತೆ ರಾಜ್ಯ ಸರ್ಕಾರ ಬ್ಯಾಂಕ್‌ಗಳಿಗೆ ಸೂಚನೆ ನೀಡಿತ್ತು. ಕಿಸಾನ್‌ ಸಮ್ಮಾನ್‌ ಬೆಳೆ ಪರಿಹಾರ ಹಾಗೂ ವಿಮೆ ಪರಿಹಾರದ ಮೊತ್ತವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದರು. ಬಹುತೇಕ ಬ್ಯಾಂಕ್‌ಗಳು ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡಿಲ್ಲ. ಸಾಲ ಅಥವಾ ಬಡ್ಡಿ ಪಾವತಿಗೆ ನೋಟಿಸ್‌ ನೀಡುವುದು ಇನ್ನೂ ಮುಂದುವರಿದಿದೆ ಎಂಬುದು ರೈತ ಸಂಘಟನೆಗಳ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.