ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ | ಹರಿಹರದಲ್ಲಿ ಬಾಡುತ್ತಿದ್ದ 80 ಸಸಿಗಳಿಗೆ ಮರು ಜೀವ

ಹರಿಹರ: ಪ್ರಜಾವಾಣಿ ವರದಿ ಫಲಶ್ರುತಿ; ಜೋಡಿ ರಸ್ತೆಗೆ ಜೀವಕಳೆ; ನಗರಸಭೆ ಕಾರ್ಯಕ್ಕೆ ಮೆಚ್ಚುಗೆ

ಇನಾಯತ್ ಉಲ್ಲಾ ಟಿ.
Published 29 ಮೇ 2024, 6:09 IST
Last Updated 29 ಮೇ 2024, 6:09 IST
ನಳನಳಿಸುತ್ತಿರುವ ಸಸಿಗಳನ್ನು ಪೌರಾಯುಕ್ತ ಐಗೂರು ಬಸವರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ್, ಲೆಕ್ಕಾಧಿಕಾರಿ ನಾಗರಾಜ್, ಸಿಬ್ಬಂದಿ ಶಂಕರಪ್ಪ, ಮಂಜುನಾಥ ಮಂಗಳವಾರ ಪರಿಶೀಲಿಸಿದರು
ನಳನಳಿಸುತ್ತಿರುವ ಸಸಿಗಳನ್ನು ಪೌರಾಯುಕ್ತ ಐಗೂರು ಬಸವರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ್, ಲೆಕ್ಕಾಧಿಕಾರಿ ನಾಗರಾಜ್, ಸಿಬ್ಬಂದಿ ಶಂಕರಪ್ಪ, ಮಂಜುನಾಥ ಮಂಗಳವಾರ ಪರಿಶೀಲಿಸಿದರು   

ಹರಿಹರ: ಸರ್ಕಾರಿ ಇಲಾಖೆ ಹಾಗಿ ಅಧಿಕಾರಿಗಳ ಅಸಡ್ಡೆ ಬಗ್ಗೆ ದೂರು ಸಾಮಾನ್ಯ. ಆದರೆ ಇಲ್ಲಿನ ನಗರಸಭೆಯ ಕಾಳಜಿಯಿಂದ ಅವಸಾನದ ಅಂಚಿಗೆ ಬಂದಿದ್ದ 80ಕ್ಕೂ ಹೆಚ್ಚು ಸಾಲು ಮರಗಳಿಗೆ ಜೀವದಾನ ದೊರೆತಿದೆ. 

ಹೌದು, ನಗರದ ಹೊರವಲಯದ ದಾವಣಗೆರೆ ಮಾರ್ಗದ ಬೀರೂರು-ಸಮ್ಮಸಗಿ ಹೆದ್ದಾರಿಯ ಜೋಡಿ ರಸ್ತೆಯ ಮಧ್ಯಭಾಗದಲ್ಲಿ 3 ಕಿ.ಮೀ. ಉದ್ದಕ್ಕೆ ಎನ್‌ಜಿಒದವರು ಎರಡು ವರ್ಷಗಳ ಹಿಂದೆ 200ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದರು. ಆದರೆ ಬರ ಹಾಗೂ ಬಿಸಿಲ ಬೇಗೆಯಿಂದ ಈ ಪೈಕಿ 80ಕ್ಕೂ ಹೆಚ್ಚು ಸಸಿಗಳು ಒಣಗಲು ಆರಂಭಿಸಿದ್ದವು. ‘ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ನೆಡುವ ಸಸಿಗಳಿಗೆ ನೀರುಣಿಸಿ ರಕ್ಷಿಸುವ ಹೊಣೆ ನಮ್ಮದು, ಎನ್‌ಜಿಒದವರು ನೆಟ್ಟ ಸಸಿಗಳಿಗೆ ನೀರುಣಿಸಲು ಇಲಾಖೆ ಅನುದಾನ ಇಲ್ಲ’ ಎಂದು ಸಾಮಾಜಿಕ ಅರಣ್ಯ ಇಲಾಖೆಯವರು ಉತ್ತರಿಸಿದರು. 

‘ಹೆಚ್ಚುತ್ತಿದೆ ಬಿಸಿಲು: ಒಣಗುತ್ತಿವೆ ಹೆದ್ದಾರಿ ಗಿಡ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಜ.30 ರಂದು ಪ್ರಕಟವಾದ ವರದಿಯಿಂದ ಜಾಗೃತರಾದ ನಗರಸಭೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಬಾಡುತ್ತಿದ್ದ ಸಸಿಗಳನ್ನು ಪರಿಶೀಲಿಸಿದರು.

ADVERTISEMENT

‘100 ಸಸಿಗಳು ಏಳೆಂಟು ಅಡಿ ಎತ್ತರಕ್ಕೆ ಬೆಳೆದಿವೆ. ಇನ್ನೂ 4 ತಿಂಗಳು ಬಿರು ಬಿಸಿಲು ಇರಲಿದ್ದು ಉಳಿದ 80 ಸಸಿಗಳಿಗೆ ನೀರು ಸಿಗದಿದ್ದರೆ ಕೊನೆಯುಸಿರು ಎಳೆಯಲಿವೆ’ ಎಂದು ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಅಮೃತ ಟಿ.ಆರ್. ಅಭಿಪ್ರಾಯಪಟ್ಟಿದ್ದರು. ‘ನದಿಯಲ್ಲಿ ನೀರಿಲ್ಲದ್ದರಿಂದ ನಗರದ ಜನತೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಈ ಸಸಿಗಳಿಗೂ ತಿಂಗಳಲ್ಲಿ ಎರಡು ಬಾರಿ ನೀರುಣಿಸುತ್ತೇವೆ’ ಎಂದು ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್‌ ಜವಾಬ್ದಾರಿ ಹೊತ್ತರು.

ಫೆಬ್ರುವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸತತವಾಗಿ 15 ದಿನಕ್ಕೊಮ್ಮೆ ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರುಣಿಸಲಾಯಿತು. ಮೇ ತಿಂಗಳ 2ನೇ ವಾರದಿಂದ ಮಳೆರಾಯನ ಆಗಮನದಿಂದ, ಅವಸಾನದ ಅಂಚಿಗೆ ಬಂದಿದ್ದ ಸಸಿಗಳಲ್ಲಿ ಜೀವಕಳೆ ಪುಟಿದೊಡೆದಿದ್ದು, ಅವುಗಳೆಲ್ಲ ಈಗ ನಳನಳಿಸುತ್ತಿವೆ. ಹೆದ್ದಾರಿ ಸವಾರರಿಗೆ ಮುದ ನೀಡುತ್ತಿವೆ.

ಹರಿಹರ ಹೊರವಲಯದ ಬೀರೂರು-ಸಮ್ಮಸಗಿ ಹೆದ್ದಾರಿ ಮಧ್ಯದಲ್ಲಿ ನೆಟ್ಟಿರುವ ಸಸಿಗಳಿಗೆ ನಗರಸಭೆಯಿಂದ ಜನವರಿ ಕೊನೆಯಲ್ಲಿ ನೀರುಣಿಸುತ್ತಿರುವುದು
ನೀರಿಲ್ಲದೆ ಜನವರಿ ತಿಂಗಳಲ್ಲಿ ಒಣಗುತ್ತಿದ್ದ ಸಸಿಗಳು
ಮೊದಲು ಸುದ್ದಿಯನ್ನು ಬಿತ್ತರಿಸಿ ಆಡಳಿತಗಾರರ ಕಣ್ಣು ತೆರೆಸಿದ ಶ್ರೇಯಸ್ಸು ‘ಪ್ರಜಾವಾಣಿ’ ಪತ್ರಿಕೆಗೆ ಸಲ್ಲುತ್ತದೆ. ಅಧಿಕಾರಿಗಳ ಸ್ಪಂದನೆ ಇದೇ ರೀತಿ ಇದ್ದರೆ ಹರಿಹರ ನಗರ ಹಸಿರುಮಯವಾಗಿಸುವುದು ಕಷ್ಟವಲ್ಲ
ಜಬಿಉಲ್ಲಾ, ಪರಿಸರಕ್ಕಾಗಿ ನಾವು ಸಂಸ್ಥೆಯ ಜಿಲ್ಲಾ ಸಂಚಾಲಕ 

ಮರ ಗಿಡಗಳನ್ನು ಬೆಳೆಸಲು ನಗರಸಭೆ ಆದ್ಯತೆ ನೀಡಲಿದೆ

ಹಸಿರಿಲ್ಲದಿದ್ದರೆ ಮನುಷ್ಯನ ಬದುಕು ಊಹಿಸುವುದೂ ಅಸಾಧ್ಯ. 80ಕ್ಕೂ ಹೆಚ್ಚಿನ ಸಸಿಗಳನ್ನು ಬದುಕುಳಿಸಿದ ತೃಪ್ತಿ ನಮಗಿದೆ ಐಗೂರು ಬಸವರಾಜ್ ನಗರಸಭೆ ಪೌರಾಯುಕ್ತ  ಜನವರಿಯಿಂದ ಮೇ 2ನೇ ವಾರದವರೆಗೆ ಬಿಸಿಲಿನ ಧಗೆ 40 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ನಗರಸಭೆಯವರು ನೀರುಣಿಸದಿದ್ದರೆ 80ಕ್ಕೂ ಹೆಚ್ಚು ಸಸಿಗಳು ಒಣಗಿ ಹೋಗುತ್ತಿದ್ದವು. ನಗರಸಭೆಯವರ ಪರಿಸರ ಕಾಳಜಿ ಮೆಚ್ಚತಕ್ಕದ್ದು ಅಮೃತ ಟಿ.ಆರ್. ಆರ್‌ಎಫ್‌ಒ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.