ADVERTISEMENT

ದಾವಣಗೆರೆ: ಬಿರು ಬೇಸಿಗೆಯಲ್ಲಿ ಬಟನ್ ರೋಸ್ ಬೆಳೆದ ರೈತ

​ಪ್ರಜಾವಾಣಿ ವಾರ್ತೆ
Published 15 ಮೇ 2024, 8:04 IST
Last Updated 15 ಮೇ 2024, 8:04 IST
<div class="paragraphs"><p>ಬಸವಾಪಟ್ಟಣದ ರಮೇಶ್‌ ಅವರು ಅಡಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆದಿರುವ ಮಿರಾಬಲ್ ಬಟನ್ ರೋಸ್ ಗಿಡಗಳು</p></div>

ಬಸವಾಪಟ್ಟಣದ ರಮೇಶ್‌ ಅವರು ಅಡಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆದಿರುವ ಮಿರಾಬಲ್ ಬಟನ್ ರೋಸ್ ಗಿಡಗಳು

   

ಬಸವಾಪಟ್ಟಣ: ಬೆಂಕಿಯಂತಹ ಸುಡು ಬಿಸಿಲಿಗೆ ಹಣ್ಣು ತರಕಾರಿ ಬೆಳೆಗಳು ಬಾಡಿಹೋಗುತ್ತಿರುವ ಈ ಬೇಸಿಗೆಯಲ್ಲಿ ಇಲ್ಲಿನ ರೈತರೊಬ್ಬರು, ತಮ್ಮ ತೋಟದ ಅಡಿಕೆ ಗಿಡಗಳ ಮಧ್ಯೆ 1 ಎಕರೆ ಪ್ರದೇಶದಲ್ಲಿ ಮಿರಾಬಲ್‌ ಬಟನ್‌ ರೋಸ್‌ ಹೂಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಬಿಷ್ಟಪ್ಪನವರ ಹಾಲೇಶಪ್ಪ ಅವರ ಪುತ್ರ ರಮೇಶ್‌ ಅವರು ಬಟನ್‌ ರೋಸ್‌ ಕೃಷಿ ಕೈಗೊಂಡಿದ್ದಾರೆ. 

ADVERTISEMENT

‘ಗುಲಾಬಿ ಹೂವಿಗೆ ಇಡೀ ವರ್ಷ ಬೇಡಿಕೆ ಇರುತ್ತದೆ. ಚಿಕ್ಕಬಳ್ಳಾಪುರದ ನರ್ಸರಿಯಿಂದ ತಲಾ ₹ 20 ರಂತೆ ಗಿಡಗಳನ್ನು ಖರೀದಿಸಿ ತಂದು 1 ಎಕರೆ ಪ್ರದೇಶದಲ್ಲಿ 1 ಸಾವಿರ ಸಸಿಗಳನ್ನು ನಾಟಿ ಮಾಡಿದ್ದೇನೆ’ ಎಂದು ರಮೇಶ್ ತಿಳಿಸಿದರು. 

‘ತಾಯಿ ಬೇರಿನಿಂದ ಬಂದ ರೆಂಬೆಯನ್ನು ಬಿಟ್ಟು ಗಿಡದಲ್ಲಿನ ಇತರ ಟೊಂಗೆಗಳನ್ನು ಮತ್ತು ಹೂ ಹಾಗೂ ಮೊಗ್ಗುಗಳನ್ನು ಕತ್ತರಿಸಿ ತೆಗೆದು ತಳದಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ನಾಟಿ ಮಾಡಬೇಕು. ಪ್ರತಿಸಾಲಿಗೆ 5 ಅಡಿ ಅಂತರ ಮತ್ತು ಗಿಡದಿಂದ ಗಿಡಕ್ಕೆ 3 ಅಡಿ ಅಂತರದಲ್ಲಿ ಸಸಿಗಳನ್ನು ನೆಡಬೇಕು. ಡಿ.ಎ.ಪಿ.ರಾಸಾಯನಿಕ ಗೊಬ್ಬರ, ಕುರಿ ಹಾಗೂ ಕೊಟ್ಟಿಗೆ ಗೊಬ್ಬರ ಬಳಸಿದ್ದೇನೆ. ವಾರಕ್ಕೊಮ್ಮೆ ಡ್ರಿಪ್‌ ಮೂಲಕ ನೀರು ಹಾಯಿಸುತ್ತಿದ್ದೇನೆ’ ಎಂದು ವಿವರಿಸಿದರು. 

‘ಸಾಮಾನ್ಯವಾಗಿ ಗಿಡಗಳು ಮೂರನೇ ತಿಂಗಳಿನಿಂದ ಹೂ ಬಿಡಲು ಆರಂಭಿಸುತ್ತವೆ. ಆರಂಭದಲ್ಲಿ ಇಳುವರಿ ಕಡಿಮೆಯಾಗಿದ್ದರೂ, ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. 3 ವರ್ಷದ ವರೆಗೂ ಈ ಗುಲಾಬಿ ಗಿಡಗಳನ್ನು ಅಡಿಕೆ ಗಿಡಗಳ ಮಧ್ಯೆ ಬೆಳೆಸಬಹುದಾಗಿದೆ. ಬಿಸಿಲು ಅಧಿಕವಾಗಿರುವುದರಿಂದ ಗಿಡಗಳು ಒಣಗದಂತೆ ನೀರು ಹಾಯಿಸಬೇಕು’ ಎಂದರು. 

‘ಈ ಬೆಳೆಗೆ ಎಕರೆಗೆ ₹ 50,000 ಖರ್ಚು ಇದ್ದು, ತಿಂಗಳಿಗೆ 30 ಕೆ.ಜಿ. ಹೂ ದೊರೆಯುತ್ತವೆ. ನಾನು ಸ್ಥಳೀಯ ಹೂವಿನ ವ್ಯಾಪಾರಿಗಳಿಗೆ ಕೆ.ಜಿ.ಗೆ ₹ 150 ರಂತೆ ಮಾರಾಟ ಮಾಡುತ್ತಿದ್ದೇನೆ. ಬೇಡಿಕೆ ಹೆಚ್ಚಾದಂತೆ ದರ ಹೆಚ್ಚಾಗುತ್ತದೆ. ಅಡಿಕೆ ಗಿಡಗಳನ್ನು ನೋಡಿಕೊಳ್ಳುವುದರ ಜೊತೆಗೆ ಇಂತಹ ಬೇಡಿಕೆ ಇರುವ ಫಸಲನ್ನು ಬೆಳೆದರೆ ರೈತರಿಗೆ ಯಾವ ನಷ್ಟವೂ ಆಗುವುದಿಲ್ಲ’ ಎನ್ನುತ್ತಾರೆ ರಮೇಶ್‌. 

‘ಮಿರಾಬಲ್‌ ರೋಸ್‌ ಹೂಗಳನ್ನು ದೊಡ್ಡ ಗುಲಾಬಿ ಹೂಗಳಂತೆ ಮಹಿಳೆಯರು ಮುಡಿಯಲು ಬರುವುದಿಲ್ಲ. ಕೇವಲ ಮಾಲೆಗಳನ್ನು ಕಟ್ಟಲು ಬಳಸುತ್ತೇವೆ. ಸುಗಂಧರಾಜ ಹೂವಿನ ಮಾಲೆಗಳನ್ನು ಕಟ್ಟುವಾಗ ಮಧ್ಯದಲ್ಲಿ ಬಟನ್‌ ರೋಸ್‌ ಹೂಗಳ ಬಳಕೆಯಾಗುತ್ತವೆ’ ಎನ್ನುತ್ತಾರೆ ಇಲ್ಲಿನ ಹೂವಿನ ವ್ಯಾಪಾರಿ ಇಮ್ರಾನ್‌ ಖಾನ್‌.

‘ಈ ಬಟನ್‌ ರೋಜ್‌ ಹಳದಿ, ಅಚ್ಚಕೆಂಪು ಮುಂತಾದ ಬಣ್ಣಗಳಲ್ಲಿಯೂ ದೊರೆಯುತ್ತವೆ. ಆದರೆ, ಕೆಂಪು ಬಣ್ಣದ ಹೂವಿಗೆ ಹೆಚ್ಚಿನ ಬೇಡಿಕೆ ಇದೆ. ಮದುವೆಯ  ದಿನಗಳು, ಹಬ್ಬಗಳು ಮತ್ತು ರಥೋತ್ಸವಗಳಲ್ಲಿ ಹೂವಿನ ಮಾಲೆಗಳಿಗೆ ಬೇಡಿಕೆ ಹೆಚ್ಚಾದಾಗ ಈ ಬಟನ್‌ ರೋಜ್‌ಗಳಿಗೂ ಬೇಡಿಕೆ ಹೆಚ್ಚಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.