ADVERTISEMENT

ಬುಡಕಟ್ಟು ಸಂಸ್ಕೃತಿಯ ವಿಶಿಷ್ಟ ಬೆಳಕಿನ ಹಬ್ಬ

ಲಂಬಾಣಿ ತಾಂಡಾಗಳಲ್ಲಿ ‘ಯುವತಿಯರ ಹಬ್ಬ’ದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 14:58 IST
Last Updated 14 ನವೆಂಬರ್ 2020, 14:58 IST
ದೀಪಾವಳಿ ಹಬ್ಬದ ಅಂಗವಾಗಿ ತಾಂಡಾಗಳಲ್ಲಿ ಎತ್ತುಗಳನ್ನು ಅಲಂಕಾರ ಮಾಡಿರುವುದು
ದೀಪಾವಳಿ ಹಬ್ಬದ ಅಂಗವಾಗಿ ತಾಂಡಾಗಳಲ್ಲಿ ಎತ್ತುಗಳನ್ನು ಅಲಂಕಾರ ಮಾಡಿರುವುದು   

ಉಚ್ಚಂಗಿದುರ್ಗ:ಬುಡಕಟ್ಟು ಸಂಸ್ಕೃತಿಯ ಲಂಬಾಣಿ ತಾಂಡಾಗಳಲ್ಲಿ ಬಂಜಾರ ಸಮುದಾಯ ಆಚರಿಸುವ ದೀಪಾವಳಿ ಹಬ್ಬ ವಿಶಿಷ್ಟ.ದೀಪಾವಳಿ ಹಬ್ಬ ಬಂತೆಂದರೆ ಬಂಜಾರ(ಲಂಬಾಣಿ) ತಾಂಡಾಗಳಲ್ಲಿ ಎಲ್ಲಿಲ್ಲದ ಸಂಭ್ರಮ.

ದೀಪಾವಳಿಯನ್ನು ತಾಂಡಾಗಳಲ್ಲಿ ಯುವತಿಯರ ಹಬ್ಬ ಎಂದೇ ಕರೆಯುತ್ತಾರೆ. ಅಮಾವಾಸ್ಯೆಯಂದು ಕಾಳಿಮಾಸ್, ನಂತರದ ದಿನದಂದು ಧಪ್ಕಾರ್ ಆಗಿ ಎರಡು ದಿನಗಳ ಕಾಲ ಹಬ್ಬವನ್ನು ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಆಚರಿಸಲಾಗುತ್ತದೆ.

ಅಮಾವಾಸ್ಯೆ ದಿನ ತಾಂಡಾಗಳಲ್ಲಿರುವ ಎತ್ತುಗಳನ್ನು ಸ್ನಾನ ಮಾಡಿಸಿ, ಆಕರ್ಷಕ ಬಣ್ಣಗಳಿಂದ ಅಲಂಕಾರ ಮಾಡಲಾಗುತ್ತದೆ. ಪ್ರತಿಯೊಂದು ಎತ್ತಿನ ಕೊರಳಲ್ಲಿ ಒಂದು ಕೆ.ಜಿ. ಒಣ ಕೊಬ್ಬರಿಯನ್ನು ಕಟ್ಟಿ ಬೆದರಿಸಿ ಓಡಿಸಲಾಗುತ್ತದೆ. ಪಳಗಿಸಿ ಹಿಡಿದುಕೊಂಡು ಬಂದ ಯುವಕರಿಗೆ ಬಹುಮಾನ ನೀಡಲಾಗುತ್ತದೆ.

ತಾಂಡಾದ ಯುವತಿಯರು ಮತ್ತು ಮಹಿಳೆಯರು ಮಡಿಯಿಂದ ಸಿಹಿ ಅಡುಗೆ ಮಾಡುತ್ತಾರೆ. ನಂತರ ಡಾಲ್ಯ(ಮಾಹಿತಿದಾರ) ಊರಿನ ಗೌಡರ ಸೂಚನೆಯಂತೆ ಹಲಗೆ ಬಡಿಯುವ ಮೂಲಕ ಪ್ರತಿಯೊಂದು ಮನೆಗಳಿಂದ ಅವಿವಾಹಿತ ಯುವತಿಯರು ಹಟ್ಟಿ ನಾಯಕರ ಮನೆ ಹತ್ತಿರ ಬರಬೇಕು ಎಂದು ಡಂಗೂರ ಸಾರುತ್ತಾರೆ. ಯುವತಿಯರು ಹಟ್ಟಿ ನಾಯಕರ ಮನೆ ಬಳಿ ಸೇರಿ ಲಂಬಾಣಿ ಭಾಷೆಯಲ್ಲಿ ಹಾಡು ಹೇಳುತ್ತಾ ಕುಣಿದು ಸಂಭ್ರಮಿಸುತ್ತಾರೆ. ಸಂಜೆ ವೇಳೆ ಹಟ್ಟಿ ಗೌಡರ ಪತ್ನಿ ಹಾಗೂ ತಾಂಡಾದ ಹಿರಿಯ ಮಹಿಳೆಯರು ಸೇರಿ ಹೂವುಗಳನ್ನು ತರಲು ಕಾಡಿಗೆ ತೆರಳುವ ಯುವತಿಯರನ್ನು ಬೀಳ್ಕೊಡುತ್ತಾರೆ.

ಕಾಡಿನಲ್ಲಿ ಸಿಗುವ ಕಣಗಲು (ವಲ್ಯಾಣ) ಹೂಗಳನ್ನು ಪುಟ್ಟಿಯಲ್ಲಿಟ್ಟುಕೊಂಡು ಯುವತಿಯರು ಸಾಂಪ್ರದಾಯಿಕ ನೃತ್ಯ ಮಾಡುತ್ತಾರೆ. ಮನೆಯಿಂದ ತೆಗೆದುಕೊಂಡು ಹೋಗಿರುವ ಹಣ್ಣು, ಸಿಹಿ ತಿನಿಸುಗಳನ್ನು ಒಬ್ಬರನ್ನೊಬ್ಬರು ಹಂಚಿ ತಿನ್ನುತ್ತಾರೆ. ಶಾಲು (ಛಾಟ್ಯಾ) ಹೊದ್ದು ಹಿಂತಿರುಗಿ ಬರುವ ಯುವತಿಯರಿಗೆ, ಹಟ್ಟಿ ಗೌಡರು ತಾಂಡಾದ ಗಡಿ ಬಳಿ ಬಂದು ಸ್ವಾಗತಿಸುತ್ತಾರೆ.

ಹೂವಿನ ಪುಟ್ಟಿಗಳನ್ನು ಹೊತ್ತ ಯುವತಿಯರ ಗುಂಪು ತಾಂಡಾದ ಪ್ರತಿ ಮನೆಗೂ ತೆರಳಿ ಸೆಗಣಿಯ ಗುರ್ಚಿಯಲ್ಲಿ ಹೂಗಳನ್ನು ಇಟ್ಟು ಬರುತ್ತದೆ.

ಅಮಾವಾಸ್ಯೆ ದಿನ ಸಂಜೆ ಸಮಯದಲ್ಲಿ ಮನೆಗೊಬ್ಬ ಯುವತಿಯರು ದೀಪ ಹಿಡಿದುಕೊಂಡು ಗ್ರಾಮದ ದೇವಾಲಯ ಬಳಿಯಿಟ್ಟು ಪೂಜೆ ಸಲ್ಲಿಸುತ್ತಾರೆ. ಅವರಿಗೆ ಇಷ್ಟವಾದಂತಹ ಮನೆಗಳಿಗೆ ತೆರಳಿ ಮನೆ ಹಾಗೂ ಅವರ ಹೆಸರು ಸೇರಿಸಿ ಹಾಡು ಹೇಳುವ ಮೂಲಕ ಹಬ್ಬದ ಶುಭಾಶಯ ಕೋರುತ್ತಾರೆ.

‘ಚಿಕ್ಕವರಿಗೂ-ಹಿರಿಯರು ಎಲ್ಲರಿಗೂ ನಮನಗಳು. ತುಂಬಿದ ಮನೆ ಸದಾ ಹಸಿರಾಗಿರುವಂತೆ ಸದಾ ನೋಡಿಕೋ’ ಎಂದು ಯುವತಿಯರು ದೇವರಲ್ಲಿ ಪ್ರಾರ್ಥಿಸುತ್ತಾರೆ.

ಮೂರನೇ ದಿನ ಯುವತಿಯರು ಗೋಧಿ ಸಸಿ ತಂದು ಹಟ್ಟಿ ನಾಯಕರ ಮನೆ ಬಳಿ ಇಡುತ್ತಾರೆ. ಒಂದು ಪುಟ್ಟಿಯಲ್ಲಿ ಅವುಗಳನ್ನಿಟ್ಟುಕೊಂಡು ಮಂಡಕ್ಕಿ, ಪೀಪಿ, ರಿಬ್ಬನ್‍ಗಳನ್ನು ಕಟ್ಟಿ ಅಲಂಕಾರ ಮಾಡಿಕೊಂಡು ಸಾಂಪ್ರದಾಯಿಕ ಲಂಬಾಣಿ ಸಮುದಾಯದ ಬಟ್ಟೆ(ಪೇಟ್ಯಾಕಾಸಳಿ) ಧರಿಸಿ ತಲೆಯ ಮೇಲೆ ಹೊತ್ತು ನೃತ್ಯ ಮಾಡುತ್ತಾರೆ.

ADVERTISEMENT

ದೀಪಾವಳಿ ಹಬ್ಬದ ಅಂಗವಾಗಿ ಇಲ್ಲಿನ ಲಂಬಾಣಿ ತಾಂಡಾಗಳಲ್ಲಿ ಯುವತಿಯರು ಹಾಡಿ ಸಂಭ್ರಮಿಸಿದ ಪರಿ ಸಮಾಜದ ಏಳಿಗೆಗೆ ದೇವರು ವರ್ಷಕ್ಕೊಮ್ಮೆಯಾದರೂ ಹರಸಲಿ ಎಂದು ಹಾಡಿ ಪ್ರಾರ್ಥಿಸುತ್ತಾರೆ.

ಆ ವರ್ಷದಲ್ಲಿ ಮದುವೆಯಾಗಿ ತೆರಳುವಂತಹ ಯುವತಿಯರಿಗೆ ಬಳೆಗಳನ್ನು ಬಳುವಳಿಯಾಗಿ ನೀಡುವ ಕಾರ್ಯ ನಡೆಯುವುದರೊಂದಿಗೆ ಹಬ್ಬಕ್ಕೆ ತೆರೆ ಬಿಳುತ್ತದೆ ಎನ್ನುತ್ತಾರೆ ನಾಗತಿಕಟ್ಟೆಯ ಆನಂದನಾಯ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.